ಲಸಿಕಾ ಅಭಿಯಾನ ಸಾಗುತ್ತಿರುವ ವೇಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಶಂಸಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 30, 2021 | 8:00 PM

ಇದುವರೆಗೆ 62 ಕೋಟಿ ಭಾರತೀಯರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಹಾಗೆಯೇ, 83 ಲಕ್ಷ ಆರೋಗ್ಯ ಕಾರ್ಯಕರ್ತರು, ಮತ್ತು ಕೊವಿಡ್ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ 1.29 ಕೋಟಿ ಮುಂಚೂಣಿಯ ಕಾರ್ಯಕರ್ತರು ಎರಡೆರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ

ಕೋವಿಡ್-19 ಮೂರನೇ ಅಲೆ ಸೆಪ್ಟೆಂಬರ್ ನಲ್ಲಿ ಶುರುವಾಗಿ ಅಕ್ಟೋಬರ್ ಮಧ್ಯಭಾಗದ ಹೊತ್ತಿಗೆ ಗರಿಷ್ಠ ಪ್ರಮಾಣವನ್ನು ತಲುಪುತ್ತದೆ ಎಂದು ಹೇಳಲಾಗುತ್ತಿದೆಯಾದರೂ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಅದು ಈಗಾಗಲೇ ತಲ್ಲಣ ಸೃಷ್ಟಿಸುತ್ತಿದೆ. ಮೂರನೇ ಅಲೆಯನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮುಂಜಾಗ್ರತೆ ಕ್ರಮಗಳ ಅತ್ಯಂತ ಪ್ರಮುಖ ಭಾಗವೆಂದರೆ ಲಸಿಕಾ ಅಭಿಯಾನ. ಲಸಿಕೆ ಹಾಕಿಸಿಕೊಂಡರೆ ಸೋಂಕು ತಗುಲಲಾರದು ಅಂತೇನಿಲ್ಲ. ಆದರೆ, ಲಸಿಕೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಸುವುದರಿಂದ ಸೋಂಕು ತಾಕಿದರೂ ಕೊರೊನಾವೈರಸ್ ಹೆಚ್ಚಿನ ಅಪಾಯವನ್ನು ನಮಗೆ ಒಡ್ಡದು.
ಲಸಿಕೆ ನೀಡುವ ಪ್ರಕ್ರಿಯೆ ನಿಸ್ಸಂದೇಹವಾಗಿ ಜೋರುಗೊಂಡಿದೆ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಆಗಸ್ಟ್ 27 ರಂದು ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಹೌದು, ಇದು ದಾಖಲೆಯೇ. ಇದೇ ವೇಗದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿದರೆ, ಆದಷ್ಟು ಬೇಗ ಭಾರತದ ಪ್ರತಿಯೊಬ್ಬ ನಾಗರಿಕ ಲಸಿಕೆ ಪಡೆದಂತಾಗುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲಸಿಕೆ ಪಡೆದವರಿಗೆ ಮತ್ತು ಲಸಿಕಾ ಅಭಿಯಾನದಲ್ಲಿ ಭಾಗಿಯಾದವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಈ ಅಸಾಧಾರಣ ಸಾಧನೆ ಬಗ್ಗೆ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಇದುವರೆಗೆ 62 ಕೋಟಿ ಭಾರತೀಯರು ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಹಾಗೆಯೇ, 83 ಲಕ್ಷ ಆರೋಗ್ಯ ಕಾರ್ಯಕರ್ತರು, ಮತ್ತು ಕೊವಿಡ್ ವಿರುದ್ಧ ಹೋರಾಟದಲ್ಲಿ ನಿರತರಾಗಿರುವ 1.29 ಕೋಟಿ ಮುಂಚೂಣಿಯ ಕಾರ್ಯಕರ್ತರು ಎರಡೆರಡು ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. 18-44 ವಯೋಮಾನದ ದವರ ಪೈಕಿ ಸುಮಾರು ಎರಡೂವರೆ ಕೋಟಿ ಜನ ಲಸಿಕೆ ಹಾಕಿಸಿಕೊಂಡಿದ್ದಾರೆ.

ಆಗಸ್ಟ್ 27 ರಂದು ಒಟ್ಟು 28 ಲಕ್ಷ ಜನರಿಗೆ ಲಸಿಕೆ ನೀಡಿದ ಉತ್ತರ ಪ್ರದೇಶ ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿತ್ತು. ಆ ದಿನ ಗರಿಷ್ಠ ಪ್ರಮಾಣದ ಲಸಿಕೆಗಳ ಜೊತೆಗೆ ಒಂದು ವಾರದ ಅವಧಿಯಲ್ಲಿ (ಆಗಸ್ಟ್ 21 ರಿಂದ 27) ಅತಿಹೆಚ್ಚು ಲಸಿಕೆ ನೀಡಿದ ದಾಖಲೆಯು ನಿರ್ಮಾಣಗೊಂಡಿದೆ. ಈ ಅವಧಿಯಲ್ಲಿ 4.5 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದೆ.

ಇದಕ್ಕೆ ಮೊದಲು ಜೂನ್ ತಿಂಗಳ ಮೂರನೇ ವಾರದಲ್ಲಿ 4.12 ಕೋಟಿ ಜನರಿಗೆ ಲಸಿಕೆ ನೀಡಿದ್ದು ದಾಖಲೆಯಾಗಿತ್ತು. ಆಗಸ್ಟ್ ತಿಂಗಳಿನ ಪ್ರತಿವಾರ ಕನಿಷ್ಠ 3.5 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ:  ಶಾಲೆ ಯಾವಾಗ ಆರಂಭ ಮಾಡುತ್ತೀರಾ? ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ಗೆ ಬಾಲಕನ ಪ್ರಶ್ನೆ; ವಿಡಿಯೋ ವೈರಲ್

Published on: Aug 30, 2021 06:31 PM