ಬೆಳಗಾವಿ: ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನ ವಿವಾಹವಾಗಿ ಗರ್ಭಿಣಿಯರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ವಿವಾಹವಾಗಿದ್ದ ಪತಿಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಬಾಲಕಿಯರು ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ 2 ಪ್ರತ್ಯೇಕ ಕೇಸ್ಗಳು ದಾಖಲಾಗಿವೆ. ಲಾಕ್‌ಡೌನ್ ವೇಳೆ 16 ಹಾಗೂ 17 ವರ್ಷದ ಇಬ್ಬರು ಬಾಲಕಿಯರಿಗೆ ಬಾಲ್ಯವಿವಾಹ ಮಾಡಲಾಗಿದೆ. ಸದ್ಯ ಇವರಿಬ್ಬರು ಗರ್ಭಿಣಿಯರಾಗಿದ್ದು ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದೂರಿನ ಮೇರೆಗೆ ಇವರ ಪತಿಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪತಿಯಂದಿರ ವಿರುದ್ಧ ಈ ರೀತಿ ಕೇಸ್ ದಾಖಲಾಗಿರುವುದು. ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯಾದ ಇಬ್ಬರು ಬಾಲಕಿಯರು ಹೆರಿಗೆಗೆಂದು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ರು.
ಈ ವೇಳೆ ಅವರ ಆಧಾರ್ ಕಾರ್ಡ್ನಲ್ಲಿ ನಮೂದಾದ ಜನ್ಮ ದಿನಾಂಕ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ಜಿಲ್ಲಾಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರವೀಂದ್ರ ರತ್ನಾಕರ ಸಂತ್ರಸ್ತ ಬಾಲಕಿಯರ ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ನಂತರ ಪತಿಯರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ನೀಡಿದ್ದಾರೆ. 2020ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 115 ಬಾಲ್ಯವಿವಾಹ ದೂರುಗಳು ದಾಖಲಾಗಿವೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 108 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಬಾಲಕಿಯರ ಕುಟುಂಬಸ್ಥರಿಗೆ ತಿಳಿ ಹೇಳಿ ಅವರ ವಿದ್ಯಾಭ್ಯಾಸ ಮುಂದುವರೆಸುವಂತೆ ಓಲೈಕೆ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡವೆಂದು ಪತಿ ಕೊಂದ ಪತ್ನಿ
ಇನ್ನು ಇದೇ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದೆ. ಅನೈತಿಕ ಸಂಬಂಧಕ್ಕೆ ಅಡ್ಡವೆಂದು ಪತ್ನಿ ತನ್ನ ಪತಿಯನ್ನೇ ಹತ್ಯೆ ಮಾಡಿಸಿದ ಘಟನೆ ನಡೆದಿದೆ. ಪತಿ ಸಾಗರ್ ಹತ್ಯೆಗೆ ಪತ್ನಿ ನಿಂಗಮ್ಮ ಸುಪಾರಿ ನೀಡಿದ್ದರು. ಈ ಸಂಬಂಧ ನಿಂಗಮ್ಮ, ಪ್ರಿಯಕರ ಸೇರಿದಂತೆ ಮೂವರು ಆರೋಪಿಗಳನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೋಳ್ಯಾನಟ್ಟಿ ಗ್ರಾಮದ ಬಾಳಪ್ಪ ದಿನ್ನಿ, ಬಸವರಾಜ ಉಪ್ಪಾರ, ಬೈಲಹೊಂಗಲ ತಾಲೂಕಿನ ಸಂಪಗಾವಿಯ ಮಂಜುನಾಥ್ ಅರೆಸ್ಟ್ ಆದ ಆರೋಪಿಗಳು. ಸಾಗರ್ ತಂದೆ ಗಂಗಪ್ಪ ಮಾರ್ಕೆಟ್ ಠಾಣೆಗೆ ಕೊಲೆಯಾದ ಬಗ್ಗೆ ದೂರು ನೀಡಿದ್ರು. ಫೆ. 22ರಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾ ತಾಲೂಕಿನ ಉಳವಿ ಬಳಿ ಕಂದಕದಲ್ಲಿ ಸಾಗರ್ ಶವ ಪತ್ತೆಯಾಗಿತ್ತು. ಈ ಕೇಸ್ ಬೆನ್ನು ಹತ್ತಿದ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಸಾಗರ್ ಪತ್ನಿ ನಿಂಗಮ್ಮ ಜೊತೆ ಆರೋಪಿ ಬಾಳಪ್ಪ ಅನೈತಿಕ ಸಂಬಂಧ ಹೊಂದಿದ್ದ. ಈತ ನಿಂಗಮ್ಮಗೆ ಸೋದರ ಮಾವ. ಇವರಿಬ್ಬರ ಸಂಬಂಧಕ್ಕೆ ಅಡ್ಡವೆಂದು ಗಂಡ ಸಾಗರ್‌ನನ್ನು ಕೊಲ್ಲುವಂತೆ ಬಾಳಪ್ಪಗೆ ನಿಂಗಮ್ಮ ಸುಪಾರಿ ಕೊಟಿದ್ದಳು. ನನ್ನ ಗಂಡನನ್ನು ಕೊಂದರೆ ನನ್ನ ಬಳಿ ಇರುವ ಚಿನ್ನಾಭರಣ ನೀಡೋದಾಗಿ ಹೇಳಿದ್ದಳು. ಹೀಗಾಗಿ ಸ್ನೇಹಿತರಿಬ್ಬರ ಜೊತೆಗೂಡಿ ಸಾಗರ್‌ನನ್ನು ಉಳವಿಗೆ ಕರೆದೊಯ್ದು ಆರೋಪಿಗಳು ಹತ್ಯೆ ಮಾಡಿದ್ದರು. ಮದ್ಯಪಾನ ಮಾಡಿಸಿ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದರು. ಬಳಿಕ ಕಾಡಿನಲ್ಲಿ ಶವ ಬಿಸಾಡಿ ಪರಾರಿಯಾಗಿದ್ದರು.
ಇದನ್ನೂ ಓದಿ: Murder 9 ತಿಂಗಳ ಹಿಂದಷ್ಟೇ.. ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಕೊಂದ ಪತಿರಾಯ