ಬೆಂಗಳೂರು: OLX ನಲ್ಲಿ ವಸ್ತು ಮಾರಾಟ ಮಾಡುತ್ತಿದ್ದವರ ಬಳಿ ದರೋಡೆ ಮಾಡ್ತಿದ್ದ ಮೂವರನ್ನು ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಈ ಕಿಲಾಡಿಗಳಿಗೆ OLX ಬಳಕೆದಾರರೇ ಟಾರ್ಗೆಟ್. OLXನಲ್ಲಿ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಸಂಪರ್ಕಿಸಿ ಅವರ ಬಳಿಯೇ ದರೋಡೆ ಆಡುತ್ತಿದ್ದರು. ಸದ್ಯ ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮೊದಲಿಗೆ ಈ ದರೋಡೆಕೋರರು OLXನಲ್ಲಿ ವಸ್ತುಗಳನ್ನು ಸರ್ಚ್ ಮಾಡುತ್ತಾರೆ. ಬಳಿಕ ಪ್ಲಾನ್ ಮಾಡಿ ವಸ್ತು ಖರೀದಿಸುವ ನೆಪದಲ್ಲಿ ವಸ್ತು ಮಾರಾಟಕ್ಕೆ ಮುಂದಾಗಿರುವ ವ್ಯಕ್ತಿಗೆ ಕರೆ ಮಾಡಿ ವಸ್ತು ನೋಡಬೇಕೆಂದು ಒಂದು ಲೊಕೇಷನ್ ಫಿಕ್ಸ್ ಮಾಡಿ ಕರೆಸಿಕೊಳ್ಳುತ್ತಿದ್ದರು. ಬಳಿಕ ವ್ಯಕ್ತಿ ಬಂದ ಮೇಲೆ ವಸ್ತು ನೋಡುವಂತೆ ನಾಟಕವಾಡಿ ಪಕ್ಕದ ಏರಿಯಾದಲ್ಲೇ ಮನೆ ಇದೆ ಅಲ್ಲೇ ಹಣ ಕೊಡೋದಾಗಿ ಕರೆದುಕೊಂಡು ಹೋಗಿ ಗುಂಪು ಗುಂಪಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದರು. ಇದೇ ರೀತಿ ಜನವರಿ 23ರಂದು ವ್ಯಕ್ತಿಯೋರ್ವನಿಂದ ದರೋಡೆ ಮಾಡಿದ್ದಾರೆ.
ಮೊಬೈಲ್ ಖರೀದಿಸುವ ನೆಪ ಮಾಡಿ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ಗೆ ಕರೆಸಿಕೊಂಡು ನಂತರ ಅಮ್ಮನ ಬಳಿ ಹಣ ಇದೆ ಕೊಡ್ತೀನಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಲ್ವರು ಜೊತೆಗೂಡಿ ಹಲ್ಲೆ ನಡೆಸಿ ಸುಲಿಗೆ ಮಾಡಿದ್ದಾರೆ. ಈ ಬಗ್ಗೆ ದರೋಡೆಗೊಳಗಾದ ವ್ಯಕ್ತಿ ಕೆ.ಆರ್. ಮಾರುಕಟ್ಟೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾದ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಸೇನಾ ಅಧಿಕಾರಿಗಳ ಹೆಸರು ಹೇಳಿ OLXನಲ್ಲಿ ವಂಚನೆ ಮಾಡುತ್ತಿದ್ದ ಖದೀಮರು ಅರೆಸ್ಟ್