ಹಾವೇರಿ: ದೇಶಕ್ಕಾಗಿ ಕರ್ತವ್ಯದ ವೇಳೆ ಸಾವನ್ನಪ್ಪುವ ವೀರ ಯೋಧರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಗೌರವಪೂರ್ಣ ಅಂತಿಮ ವಿದಾಯ ಸಲ್ಲಿಸುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ 60ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ 7 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಅವಿರತ ಸೇವೆ ಸಲ್ಲಿಸಿ ಕೊನೆಯುಸಿರೆಳೆದ ಶ್ವಾನವೊಂದಕ್ಕೆ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ ಘಟನೆ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ಕಂಡುಬಂತು.
ಮೃತ ಶ್ವಾನಕ್ಕೆ ಗಾರ್ಡ್ ಆಫ್ ಹಾನರ್, ಶಾಸ್ತ್ರೋಕ್ತ ಅಂತ್ಯಕ್ರಿಯೆ
ಹಾವೇರಿ ಜಿಲ್ಲಾ ಶ್ವಾನದಳದಲ್ಲಿ ಅವಿರತ ಸೇವೆ ಸಲ್ಲಿಸಿದ್ದ ಜಾನಿ ಎಂಬ ಏಳು ವರ್ಷದ ಡಾಬರ್ಮನ್ ನಾಯಿಯು ಇತ್ತೀಚೆಗೆ ಅನಾರೋಗ್ಯದಿಂದ ಬಳಲಿ ಕೊನೆಯುಸಿರೆಳಿದಿತ್ತು. 60ಕ್ಕೂ ಅಧಿಕ ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಇಲಾಖೆಗೆ ಸಹಾಯಕವಾಗಿದ್ದ ಶ್ವಾನಕ್ಕೆ ದಳದ ಸಿಬ್ಬಂದಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದರು.
ನೆರೆದಿದ್ದ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರಿಗೆ ಅಗಲಿದ ನಲ್ಮೆಯ ಶ್ವಾನದ ಅಂತಿಮ ದರ್ಶನ ಪಡೆಯಲು ಪಾರ್ಥಿವ ಶರೀರವನ್ನು ಹೂವಿನಿಂದ ಅಲಂಕೃತ ಮೇಜಿನ ಮೇಲೆ ಇರಿಸಲಾಗಿತ್ತು. ತದ ನಂತರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ತಂಡದಿಂದ ಗಾರ್ಡ್ ಆಫ್ ಹಾನರ್ ಕೂಡ ಸಲ್ಲಿಸಲಾಯಿತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಇಲಾಖೆಯ ಸೇವೆಯಲ್ಲಿ ತೊಡಗಿದ್ದ ಜಾನಿಗೆ ಗೌರವಪೂರ್ಣ ಕೃತಜ್ಞತೆ ನೀಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್.ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ತಮ್ಮ ಅಂತಿಮ ನಮನ ಸಲ್ಲಿಸಿದರು.
ಮಣ್ಣಲ್ಲಿ ಮಣ್ಣಾದ ಗೆಳೆಯನ ನೆನೆದು ಮರುಗಿದ ಶ್ವಾನಮಿತ್ರರು
ಗೌರವ ನಮನದ ನಂತರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿಯೇ ಜಾನಿಯ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದೇ ವೇಳೆ ಅಲ್ಲಿ ನೆರೆದಿದ್ದ ಸಿಬ್ಬಂದಿಯ ಮಕ್ಕಳೂ ಸಹ ಭಾಗಿಯಾದರು. ಜೊತೆಗೆ ಶ್ವಾನದಳದ ಇತರೆ ನಾಯಿಗಳು ಸಹ ಅಲ್ಲೇ ಇದ್ದವು. ಮಣ್ಣಲ್ಲಿ ಮಣ್ಣಾದ ಗೆಳೆಯನ ನೆನೆದ ಶ್ವಾನಗಳು ಸ್ಥಳದಲ್ಲೇ ಕುಳಿತು ಮರುಗಿದ ದೃಶ್ಯ ಎಂಥವರ ಮನವನ್ನೂ ಕರಗುವಂತಿತ್ತು.
A good death is its own reward ಎಂಬ ಇಂಗ್ಲೀಷ್ ಕವನವೊಂದರ ಸಾಲಿನಂತೆ ಸಕಲ ಗೌರವಗಳೊಂದಿಗೆ ಇಹಲೋಕ ತ್ಯಜಿಸಿದ ಪೊಲೀಸ್ ಶ್ವಾನ ಜಾನಿಯ ಜೀವನ ನಿಜವಾಗಿಯೂ ಒಂದು ಸಾರ್ಥಕ ಬದುಕು.
Published On - 5:21 pm, Sat, 13 June 20