ಕೊರೊನಾ ಅಡ್ಡಪರಿಣಾಮಗಳ ಗಂಭೀರತೆ ಬಗ್ಗೆ ಯೋಚಿಸಿದ್ದೀರಾ? ಲಸಿಕೆ ಇದ್ದರೂ ಮೈಮರೆಯಬೇಡಿ

|

Updated on: Mar 18, 2021 | 1:52 PM

ಒಂದು ಯುದ್ಧವಾದಾಗ ಬಹಳ ಕಾಲದವರೆಗೂ ಅದರ ಪರಿಣಾಮಗಳು ಜನರ ಮೇಲೆ, ಪರಿಸರದ ಮೇಲೆ ಆಗುತ್ತಲೇ ಇರುತ್ತದೆ. ಈಗ ಮನುಕುಲದ ಮೇಲೆ ಕೊವಿಡ್ ನಡೆಸುತ್ತಿರುವ ಕದನದಲ್ಲಿ ಸದ್ಯಕ್ಕಂತೂ ಯುದ್ಧವಿರಾಮ ಘೋಷಣೆಯಾಗುವ ಲಕ್ಷಣಗಳಿಲ್ಲ. ಯುದ್ಧ ನಿಂತರೂ ಅದರ ದುಷ್ಪರಿಣಾಮಗಳು Post Covid complications ರೂಪದಲ್ಲಿ ಆಗುತ್ತಲೇ ಇರುತ್ತದೆ ಎನ್ನುವುದು ನಿಶ್ಚಿತ.

ಕೊರೊನಾ ಅಡ್ಡಪರಿಣಾಮಗಳ ಗಂಭೀರತೆ ಬಗ್ಗೆ ಯೋಚಿಸಿದ್ದೀರಾ? ಲಸಿಕೆ ಇದ್ದರೂ ಮೈಮರೆಯಬೇಡಿ
ಪ್ರಾತಿನಿಧಿಕ ಚಿತ್ರ
Follow us on

‘Where do you see yourself in next five years?’. ಸಂದರ್ಶನವನ್ನು ಎದುರಿಸುವ ಬಹುತೇಕ ಅಭ್ಯರ್ಥಿಗಳಿಗೆ ಸಂದರ್ಶಕರಿಂದ ಎದುರಾಗುವ ಸಾಮಾನ್ಯ ಪ್ರಶ್ನೆಯಿದು. ಸಂದರ್ಶನವನ್ನು ಎದುರಿಸುತ್ತಿರುವವರು ತಮ್ಮ ಕಲ್ಪನೆಗನುಗುಣವಾಗಿ ಇದಕ್ಕೆ ಉತ್ತರ ಕೊಡುತ್ತಾರೆ. ಸುಮಾರು ಜನ ತಾವು ಅಂದುಕೊಂಡದ್ದನ್ನು ಮುಂದಿನ ಐದು ವರ್ಷಗಳಲ್ಲಿ ಸಾಧಿಸುತ್ತಾರೆ ಕೂಡ. ಆದರೆ 2015-16ರಲ್ಲಿ ಸಂದರ್ಶನವನ್ನು ಎದುರಿಸಿ ಮೇಲಿನ ಪ್ರಶ್ನೆಗೆ ಉತ್ತರಿಸಿದ ಯಾರೂ ಕೂಡ 2020ರಲ್ಲಿ ತಾವು ತಿಂಗಳುಗಟ್ಟಲೆ ತಮ್ಮ ಕಾರ್ಯಕ್ಷೇತ್ರಗಳಿಗೆ ತೆರಳಲಾಗದೆ ಮನೆಯೊಳಗೇ ಉಳಿಯಬೇಕಾಗುತ್ತದೆ, ಆರ್ಥಿಕತೆಯಲ್ಲಿ ಬಹಳಷ್ಟು ಹಿಂದೆ ಹೋಗುತ್ತೇವೆ ಎಂಬ ಕಲ್ಪನೆಯನ್ನು ಕೂಡ ಮಾಡಿರಲಾರರು. ಇಂಥ ಅನೂಹ್ಯವಾದ ವಿದ್ಯಮಾನಗಳಿಗೆ ಕಾರಣವಾಗಿದ್ದು ಕೊರೊನಾ ವೈರಾಣು.

ಯಾವುದೇ ದೇಶ, ಪಂಗಡ, ಜನರನ್ನು ಬಿಡದೆ ಭೀಕರವಾಗಿ ಪ್ರಪಂಚವನ್ನು ಆಕ್ರಮಿಸಿದ ಕೊವಿಡ್​ ಯಾರೂ ಊಹಿಸಿರದ ಮಟ್ಟಿಗೆ ಪ್ರಪಂಚವನ್ನು ಬಾಧಿಸಿತು. ರೈಟ್ ಸಹೋದರರು ಕಂಡುಹಿಡಿದಂದಿನಿಂದ ಹಾರುತ್ತಿದ್ದ ಲೋಹದ ಹಕ್ಕಿಗಳು ತಿಂಗಳುಗಟ್ಟಲೆ ಯಾವುದೋ ವಿಮಾನ ನಿಲ್ದಾಣಗಳಲ್ಲಿ ಗುಂಪುಗುಂಪಾಗಿ ನಿಂತವು. ವಾರಕ್ಕೆ ಒಂದು ಅಥವಾ ಎರಡು ರಜೆ ಪಡೆಯುತ್ತಿದ್ದ ಕೆಲಸಕ್ಕೆ ಹೋಗುವ ಜನರೆಲ್ಲ ಅನಿರ್ದಿಷ್ಟಾವಧಿಯವರೆಗೆ ರಜೆ ಪಡೆದರು. ನಿಧಾನವಾಗಿ ವರ್ಕ್ ಫ್ರಂ ಹೋಮ್ ಶುರುವಾಯಿತು. ಚಿಣ್ಣರಿಗಂತೂ ಅಕಾಲದಲ್ಲಿ ರಜೆಯ ಮಜ. ಆದರೆ ಮನೆಯ ಹೊರಗೆ ಹೋಗಿ ಆಟವಾಡುವಂತಿಲ್ಲ. ಜೀವಮಾನದಲ್ಲಿ ಒಮ್ಮೆಯೂ ಆಸ್ಪತ್ರೆಯ ಮೆಟ್ಟಿಲು ಹತ್ತದವರೆಲ್ಲ ಐಸಿಯುಗಳಲ್ಲಿ ನರಳಿ ಸತ್ತರು. ಕೊವಿಡ್​ನಿಂದ ಮರಣ ಸಂಭವಿಸಿದ್ದರಿಂದ ಮನೆಯವರಿಗೆ ರೋಗಿಯ ಮೃತದೇಹವೂ ಸಿಗದಂಥ ದಾರುಣ ಸ್ಥಿತಿ. ಕೊವಿಡ್ ಮನುಕುಲದ ಮೇಲೆ ಸಾರಿದ ಯುದ್ಧಕ್ಕೆ ನಾವು ತೆತ್ತ, ತೆರುತ್ತಿರುವ ಬೆಲೆ ಅಪಾರ.

2020ರ ಮಾರ್ಚ್ ತಿಂಗಳಿನಿಂದ ಭೀಕರ ಸ್ವರೂಪ ಪಡೆದಿದ್ದ ಸಾಂಕ್ರಾಮಿಕ ರೋಗ ವರ್ಷಾಂತ್ಯದ ಹೊತ್ತಿಗೆ ಬಹುತೇಕ ನಿಯಂತ್ರಣಕ್ಕೆ ಬಂದು ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬಂದಿತ್ತು. ಆದರೆ ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಮತ್ತೆ ದಿನೇ ದಿನೇ ಕೊವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಎರಡನೇ ಅಲೆಯ ರೂಪದಲ್ಲಿ ವೈರಸ್ ಮತ್ತೆ ಅಟ್ಟಹಾಸ ಮೆರೆಯುತ್ತಿದೆ. ಇನ್ನೇನು ಯುದ್ಧವಿರಾಮ ಘೋಷಣೆಯಾಯಿತು ಎನ್ನುವಷ್ಟರಲ್ಲಿ ಮತ್ತಷ್ಟು ಬಲಶಾಲಿಯಾಗಿ ಕೊವಿಡ್ ಆಕ್ರಮಣ ಮಾಡುತ್ತಿದೆ. ಒಂದು ಯುದ್ಧವಾದಾಗ ಬಹಳ ಕಾಲದವರೆಗೂ ಅದರ ಪರಿಣಾಮಗಳು ಜನರ ಮೇಲೆ, ಪರಿಸರದ ಮೇಲೆ ಆಗುತ್ತಲೇ ಇರುತ್ತದೆ. ಈಗ ಮನುಕುಲದ ಮೇಲೆ ಕೊವಿಡ್ ನಡೆಸುತ್ತಿರುವ ಕದನದಲ್ಲಿ ಸದ್ಯಕ್ಕಂತೂ ಯುದ್ಧವಿರಾಮ ಘೋಷಣೆಯಾಗುವ ಲಕ್ಷಣಗಳಿಲ್ಲ. ಯುದ್ಧ ನಿಂತರೂ ಅದರ ದುಷ್ಪರಿಣಾಮಗಳು Post Covid complications ರೂಪದಲ್ಲಿ ಆಗುತ್ತಲೇ ಇರುತ್ತದೆ ಎನ್ನುವುದು ನಿಶ್ಚಿತ. ನಾನು ಕೊವಿಡ್ ಐಸಿಯುಗಳಲ್ಲಿ ಕೆಲಸ ಮಾಡುವ ವೈದ್ಯನಾಗಿರುವುದರಿಂದ ಕೊವಿಡ್ ನಂತರದ ದುಷ್ಪರಿಣಾಮಗಳ ಬಗ್ಗೆ ಒಂದಷ್ಟು ಅನುಭವಗಳನ್ನು ಹಂಚಿಕೊಳ್ಳುತ್ತೇನೆ.

ಕೊವಿಡ್​ ಬಂದುಹೋದ ಮೇಲಿನ ಪರಿಣಾಮ ಅದೆಷ್ಟು ಗಂಭೀರ!
ಅವರು ಪ್ರಸಿದ್ಧ ಶಸ್ತ್ರಚಿಕಿತ್ಸಾ ತಜ್ಞರು.ಸುಮಾರು ಐವತ್ತು ಐವತ್ತರ ಆಸುಪಾಸಿನವರು, ಆರೋಗ್ಯವಂತರಾಗಿದ್ದವರು. ಕೊವಿಡ್ ರೋಗಕ್ಕೆ ತುತ್ತಾಗಿ ಹತ್ತು ಹದಿನೈದು ದಿನಗಳಲ್ಲಿ ಗುಣಮುಖವಾಗಿದ್ದರು. ಕೆಲದಿನಗಳ ವಿಶ್ರಾಂತಿಯ ನಂತರ ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಆಪರೇಷನ್ ಮಾಡುತ್ತಿದ್ದರು. ಒಂದು ದಿನ ಬಲಗಾಲಿನಲ್ಲಿ ನಿಧಾನಕ್ಕೆ ಸೆಳೆತ ಶುರುವಾಯಿತು. ಸ್ವಲ್ಪ ದಿನಗಳಲ್ಲಿ ಕಾಲು ಊದಿಕೊಂಡಿತು. ಲಕ್ಷಣಗಳ ಆಧಾರದ ಮೇಲೆ Investigation ಮಾಡಿದ ನಂತರ ಆ ವೈದ್ಯರಿಗೆ Deep vein thrombosis (DVT) ಆಗಿದ್ದು ಗೊತ್ತಾಯಿತು. ಅಂದರೆ ಅಶುದ್ಧ ರಕ್ತವನ್ನು ಹೃದಯದೆಡೆಗೆ ಸಾಗಿಸುವ ಕಾಲಿನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತಸಂಚಾರಕ್ಕೆ ಅಡಚಣೆಯುಂಟಾಗುವುದರಿಂದ ಆಗುವ ತೊಂದರೆಗೆ DVT ಎನ್ನುತ್ತಾರೆ. ಒಮ್ಮೆ DVT ಆದ ಮೇಲೆ ಬಹಳ ವರ್ಷಗಳವರೆಗೆ ರೋಗಿ ರಕ್ತವನ್ನು ತೆಳು ಮಾಡುವ ಔಷಧಿಗಳನ್ನು (Anticoagulants) ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ತುಂಬಾ ಹೊತ್ತು ನಿಂತುಕೊಂಡೇ ಇರುವಂತಿಲ್ಲ. ಹೇಳಿ ಕೇಳಿ ಶಸ್ತ್ರಚಿಕಿತ್ಸಕರು ಗಂಟೆಗಟ್ಟಲೆ ನಿಂತುಕೊಂಡು ಆಪರೇಷನ್ ಮಾಡುವವರು. ಕೊವಿಡ್​ನಿಂದ ಪ್ರಾಣಾಪಾಯದಿಂದ ಪಾರಾದರೂ ಅದರ ನಂತರ ಆದ ದುಷ್ಪರಿಣಾಮದಿಂದಾಗಿ ಆ ವೈದ್ಯರು ಇನ್ನು ಮುಂದೆ ತಮ್ಮ ವೃತ್ತಿಜೀವನದುದ್ದಕ್ಕೂ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ತಾಸುಗಟ್ಟಲೆ ನಡೆಯುವ ಯಾವ ದೊಡ್ಡ ದೊಡ್ಡ ಆಪರೇಷನ್​ಗಳನ್ನೂ ಸಂಪೂರ್ಣವಾಗಿ ಮಾಡುವಂತಿಲ್ಲ.

ಸುಮಾರು ನಲವತ್ತು ವರ್ಷ ವಯಸ್ಸಿನ ಶುಶ್ರೂಷಕರೊಬ್ಬರು ಕೊವಿಡ್ ಶುರುವಾದಲ್ಲಿಂದ ಐಸಿಯುಗಳಲ್ಲಿ ಡ್ಯೂಟಿ ಮಾಡಿದವರು ಒಂದು ದಿನ ತಾವೂ ಕೊವಿಡ್ ರೋಗಕ್ಕೆ ತುತ್ತಾಗಿ ನಂತರ ಗುಣಮುಖರಾದರು. ಆದರೆ, ಒಂದೆರಡು ತಿಂಗಳ ನಂತರ ಅವರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಇಸಿಜಿ ಮಾಡಿಸಿದಾಗ ತೀವ್ರ ಸ್ವರೂಪದಲ್ಲಿ ಹೃದಯಾಘಾತ (Myocardial Infarction) ಆಗಿತ್ತು. ಅಧಿಕ ರಕ್ತದೊತ್ತಡ, ಸಕ್ಕರೆ ಖಾಯಿಲೆ ಏನೂ ಇರದಿದ್ದ ಆ ಶುಶ್ರೂಷಕರಿಗೆ ಕೊವಿಡ್ ನಂತರ ಹೃದಯಾಘಾತವಾಗಿ ಆಂಜಿಯೋಪ್ಲಾಸ್ಟಿ ಮಾಡಿಸಿಕೊಳ್ಳಬೇಕಾಯಿತು. ಇನ್ನು ಅವರು ಬಹುಕಾಲದವರೆಗೆ ರಕ್ತವನ್ನು ತೆಳು ಮಾಡುವ Anticoagulants ತೆಗೆದುಕೊಳ್ಳಲೇಬೇಕು. ದೈಹಿಕವಾಗಿ ಶ್ರಮವಾಗುವ ಯಾವ ಕೆಲಸ ಮಾಡುವಾಗಲೂ ಅತಿ ಎಚ್ಚರಿಕೆಯಿಂದ ಇರಬೇಕು. ಹೀಗೆ ವೈದ್ಯಕೀಯ ಲೋಕ ಅಚ್ಚರಿಯಾಗುವಂತೆ ಬೇರೆ ಯಾವುದೇ ಖಾಯಿಲೆ ಇರದ ವ್ಯಕ್ತಿಗಳು ಕೊವಿಡ್ ನಂತರ ಹೃದಯಾಘಾತಕ್ಕೆ ತುತ್ತಾಗಿದ್ದು ಜಗತ್ತಿನ ಬೇರೆ ಬೇರೆ ಕಡೆಗಳಿಂದ ವರದಿಯಾಗಿದೆ.

ಪ್ರಾತಿನಿಧಿಕ ಚಿತ್ರ

ಅವರೊಬ್ಬರು ಹೆಸರಾಂತ ಉದ್ಯಮಿ. ಯಾವುದೇ ರೋಗಗಳಿಲ್ಲದೆ ಆರೋಗ್ಯವಂತರಾಗಿ ತನ್ನ ಉದ್ಯಮವನ್ನು ಬಹಳ ವರ್ಷಗಳಿಂದ ಲಾಭದಲ್ಲಿ ನಡೆಸಿಕೊಂಡು ಬಂದಿದ್ದರು. ಆದರೆ ಕೊವಿಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅವರೂ ಅವರ ಸಂಬಂಧಿಯೊಬ್ಬರು ಏಕಕಾಲಕ್ಕೆ ಕೊವಿಡ್ ರೋಗಕ್ಕೆ ತುತ್ತಾದರು. ಉಸಿರಾಡಲು ಬಹಳ ತೊಂದರೆಯಾಗಿದ್ದರಿಂದ ಇಬ್ಬರನ್ನೂ ಐಸಿಯುನಲ್ಲಿ ಅಡ್ಮಿಟ್ ಮಾಡಿ ವೆಂಟಿಲೇಟರ್ ಅಳವಡಿಸಲಾಯಿತು. ಆ ಉದ್ಯಮಿಯಂತೂ ಉಸಿರಾಡಲು ಸಾಧ್ಯವಾಗದೆ ಪ್ರಜ್ಞೆ ಕಳೆದುಕೊಂಡು ಬಹಳ ದಿನ ಸಂಪೂರ್ಣವಾಗಿ ವೆಂಟಿಲೇಟರ್ ಮೇಲೆಯೇ ಅವಲಂಬಿತರಾಗಿದ್ದರು. ಕಣ್ಣಮುಂದೆಯೇ ಅವರ ಸಂಬಂಧಿ ಕೊವಿಡ್​ನಿಂದ ಮೃತಪಟ್ಟರು. ಇದರಿಂದ ಮಾನಸಿಕವಾಗಿ ತುಂಬ ಆಘಾತಕ್ಕೊಳಗಾದ ಉದ್ಯಮಿ, ಸುಮಾರು ಒಂದು ತಿಂಗಳ ನಂತರ ಐಸಿಯುನಿಂದ ಹೊರಬಂದರೂ ಆಕ್ಸಿಜನ್ ಮಾಸ್ಕ್ ಇಲ್ಲದೆ ಉಸಿರಾಡಲಾಗದ ಪರಿಸ್ಥಿತಿಗೆ ತಲುಪಿದರು. CT Scan ಮಾಡಿಸಿ ನೋಡಿದಾಗ ಶ್ವಾಸಕೋಶದ ಅಂಗಾಂಶಗಳು ಸಾಕಷ್ಟು ಹಾನಿಗೊಳಗಾಗಿದ್ದವು. ಆರೋಗ್ಯವಂತ ಶ್ವಾಸಕೋಶದಂತೆ ಅವರ ಶ್ವಾಸಕೋಶಕ್ಕೆ ಗಾಳಿ ಒಳಗೆ ಹೋದಾಗ ಹಿಗ್ಗಿಕೊಳ್ಳಲು ಆಗುತ್ತಿರಲಿಲ್ಲ. ಇದನ್ನು Lung Fibrosis ಎನ್ನುತ್ತಾರೆ. ಒಂದು ಸಲ Fibrosis ಆದ ಮೇಲೆ ಶ್ವಾಸಕೋಶ ಮೊದಲಿನ ಸ್ಥಿತಿಗೆ ಸಂಪೂರ್ಣವಾಗಿ ಬರಲು ಸಾಧ್ಯವಿಲ್ಲ. ಅದರೊಂದಿಗೆ ಕೊವಿಡ್ ಕೂಡ ಸೇರಿಕೊಂಡರೆ ಇನ್ನೂ ಕಷ್ಟ. ಬದುಕಿರುವವರೆಗೂ ಆಕ್ಸಿಜನ್ ಮಾಸ್ಕ್ ಹಾಕಿಕೊಂಡರಲೇಬೇಕು ಎಂಬ ವೈದ್ಯರ ಸಲಹೆಯ ಮೇರೆಗೆ ಕೊನೆಗೂ ಆ ಉದ್ಯಮಿ ಒಂದೂವರೆ ತಿಂಗಳ ನಂತರ ಮನೆಗೆ ತೆರಳಿದರು. ಮನೆಯಲ್ಲಿ ಬಳಸಲು ಆಕ್ಸಿಜನ್ ಸಿಲಿಂಡರ್ ಬಾಡಿಗೆಗೆ ತೆಗೆದುಕೊಂಡರು. ಡಿಸ್ಚಾರ್ಜ್ ಆಗಿ ಹೋದ ಮೂರು ದಿನಗಳಲ್ಲಿ ತೀವ್ರ ಸ್ವರೂಪದ ಉಸಿರಾಟದ ತೊಂದರೆಯೊಂದಿಗೆ ಮತ್ತೆ ಐಸಿಯುಗೆ ಅಡ್ಮಿಟ್ ಆಗಿ ವೆಂಟಿಲೇಟರ್ ಮೊರೆಹೋದರು. ವೈದ್ಯರ ಉತ್ತಮ ಚಿಕಿತ್ಸೆಯಿಂದಾಗಿ ಮತ್ತೆ ಚೇತರಿಸಿಕೊಂಡು ಆಕ್ಸಿಜನ್ ಸಿಲಿಂಡರ್ ಜೊತೆ ಕೆಲವು ದಿನಗಳ ನಂತರ ಮನೆಗೆ ತೆರಳಿದರಾದರೂ ಅಷ್ಟು ಹೊತ್ತಿಗೆ ಅವರ ಉದ್ಯಮದಲ್ಲಿ ತುಂಬಾ ನಷ್ಟವಾಗಿ ಪರ್ಯಾಯ ಕೆಲಸ ಹುಡುಕಿಕೊಳ್ಳುವ ಸ್ಥಿತಿ ಬಂದಿತ್ತು. ನಿರಂತರ ಆಕ್ಸಿಜನ್ ಸಿಲಿಂಡರ್​ ಮೇಲೆಯೇ ಅವಲಂಬಿತರಾಗಿರುವ ಕಾರಣ ಅವರಿಗೆ ಯಾವ ಉದ್ಯೋಗವೂ ಸಿಗಲಿಲ್ಲ. ಕೊವಿಡ್ ಕಾರಣದಿಂದಾಗಿ ಆದ Fibrosis ಎಂಬ ದುಷ್ಪರಿಣಾಮ ಅವರ ಜೀವನವನ್ನೇ ಅಡಿಮೇಲು ಮಾಡಿತು.

ಹುಡುಕಿದರೆ ಇಂಥ ಎಷ್ಟೋ Post Covid complications ಸಿಗುತ್ತವೆ. ಆರೋಗ್ಯವಂತರಾಗಿದ್ದ ಬಹುತೇಕರು ಕೊವಿಡ್ ರೋಗಕ್ಕೆ ತುತ್ತಾಗಿ ಗುಣವಾದ ಮೇಲೆ ಬೇರೆ ಬೇರೆ ರೀತಿಯ ದುಷ್ಪರಿಣಾಮಗಳಿಂದ ರೋಗಿಗಳಾಗಿಯೇ ಉಳಿದಿದ್ದಾರೆ. ಸಣ್ಣ ವಯಸ್ಸಿನವರಿಗೂ ಅಧಿಕ ರಕ್ತದೊತ್ತಡ ಶುರುವಾಗಿದೆ. ಹೃದಯಾಘಾತಕ್ಕೆ ತುತ್ತಾದವರಿದ್ದಾರೆ. ವಯಸ್ಸಾದವರಲ್ಲಿ ಪಾರ್ಶ್ವವಾಯು (Cerebrovascular Accident)ವಿಗೆ ತುತ್ತಾಗಿ ಹಾಸಿಗೆ ಹಿಡಿದವರಿದ್ದಾರೆ. ಕೊವಿಡ್ ನಂತರ ಹೀಗೆ ಇದ್ದಕ್ಕಿದ್ದಂತೆ ಬರುವ ಬೇರೆ ಬೇರೆ ರೋಗಗಳಿಗೆ ಇನ್ನಷ್ಟೇ ಸರಿಯಾದ ಕಾರಣಗಳನ್ನು, ಪರಿಹಾರವನ್ನು ಕಂಡುಕೊಳ್ಳಬೇಕಿದೆ ವೈದ್ಯಕೀಯ ಜಗತ್ತು. ಉದ್ಯೋಗ ಕಳೆದುಕೊಂಡದ್ದರಿಂದ, ಆತ್ಮೀಯರ ಸಾವಿನ ಕಾರಣದಿಂದ ಖಿನ್ನತೆಗೆ ಒಳಗಾದವರಿದ್ದಾರೆ. ಈ ಎಲ್ಲವೂ ದೀರ್ಘಕಾಲೀನ ದುಷ್ಪರಿಣಾಮಗಳೇ. ಹಿರೋಶಿಮಾ ನಾಗಾಸಾಕಿಗಳಲ್ಲಿ ಬಿದ್ದ ಅಣು ಬಾಂಬಿನಿಂದಾಗಿ ಹಲವು ವರ್ಷಗಳ ಕಾಲ ಆದ ಕೆಟ್ಟ ಪರಿಣಾಮದಂತೆ ಕೊವಿಡ್ ನಂತರದ ದುಷ್ಪರಿಣಾಮಗಳು ಕೂಡ ದೀರ್ಘ ಕಾಲ ಕಾಡಲಿವೆ.

ಕೊವಿಡ್​ ವಾರ್ಡ್​

ಎರಡನೇ ಅಲೆಯನ್ನು ಕಡೆಗಣಿಸುವಂತಿಲ್ಲ
ಎರಡನೇ ಅಲೆ ಶುರುವಾದ ಕಾಲಕ್ಕೆ ಕೊವಿಡ್ ರೋಗದ Atypical Presentation ಶುರುವಾಗಿದೆ. ಅಂದರೆ ಸಾಮಾನ್ಯವಲ್ಲದ ರೋಗಲಕ್ಷಣಗಳು ರೋಗಿಗಳಲ್ಲಿ ಕಂಡುಬರುತ್ತಿದೆ. ಜ್ವರ, ಗಂಟಲು ನೋವು, ನೆಗಡಿ, ಉಸಿರಾಟದ ತೊಂದರೆ ಕೊವಿಡ್ ರೋಗದ ಸಾಮಾನ್ಯ ಲಕ್ಷಣಗಳಾಗಿದ್ದವು. ಆದರೆ ಈಗ ವಾಂತಿ, ಭೇದಿ, ಮಲಬದ್ಧತೆ, ತಲೆನೋವು, ಅಶಕ್ತತೆ, ಮೈಕೈ ನೋವು ಇಂಥ ಗುಣಲಕ್ಷಣಗಳಿದ್ದರೂ ಕೊವಿಡ್ ಇರಬಹುದೇನೋ ಎಂದು ಭಯ ಪಡುವಂತಾಗಿದೆ. ಸೋಂಕಿಗೆ ತುತ್ತಾಗುವ ಸಾಧ್ಯತೆ ಎಲ್ಲರಲ್ಲೂ ಒಂದೇ ಆಗಿದ್ದರೂ ವಯಸ್ಸಾದವರನ್ನು ಕೊವಿಡ್ ಹೆಚ್ಚಾಗಿ ಆಕ್ರಮಿಸಿ ನರಳುವಂತೆ ಮಾಡುತ್ತಿತ್ತು. ಆದರೆ ಇತ್ತೀಚಿನ ಕೆಲವು ತಿಂಗಳುಗಳಿಂದ ಯುವಕ, ಯುವತಿಯರೂ ಹೆಚ್ಚು ಹೆಚ್ಚು ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಣ್ಣ ಪ್ರಾಯದಲ್ಲಿ ಭೀಕರ ಸ್ವರೂಪದ ಖಾಯಿಲೆ ಕಾಣಿಸಿಕೊಂಡು ವೆಂಟಿಲೇಟರ್​​ನಿಂದ ಕೃತಕ ಉಸಿರಾಟದ ಅಗತ್ಯವೂ ಬೀಳುತ್ತಿದೆ. ಕೆಲವರು ಕೋವಿಡ್ ಪರೀಕ್ಷೆಯ RTPCR ರಿಪೋರ್ಟ್ ಬರುವುದಕ್ಕೂ ಮೊದಲೇ ಸಾವಿಗೀಡಾಗುತ್ತಿದ್ದಾರೆ. ವೈರಸ್ ರೂಪಾಂತರಗೊಂಡಿದೆಯೇನೋ ಎಂಬ ಭಯ ವೈದ್ಯಕೀಯ ಜಗತ್ತನ್ನು ಕಾಡುತ್ತಿದೆ. ರೂಪಾಂತರಗೊಂಡ ವೈರಸ್ ಎಲ್ಲ ಕಡೆ ಹರಡಲಾರಂಭಿಸಿದರೆ ಬಹಳ ಕಷ್ಟ, ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎನ್ನುವುದು ತಜ್ಞರ ಅಭಿಮತ.

Atypical Presentation ಕಾಣಿಸಿಕೊಂಡ ರೋಗಿಗಳಲ್ಲಿ ರೂಪಾಂತರಗೊಂಡ ವೈರಸ್ ಇರಬಹುದೇನೋ ಎಂಬುದನ್ನು ಪತ್ತೆಹಚ್ಚಲು ವೈರಸ್​ನ ವಂಶವಾಹಿಯ ಅಧ್ಯಯನ ಮಾಡುವ Genomic Sequencing ಎಂಬ ಪರೀಕ್ಷೆಗಳು ಕೂಡ ದೇಶದ ಹಲವು ನಗರಗಳಲ್ಲಿ ಶುರುವಾಗಿದೆ. ಆದರೆ ಇಂಥ ಪರೀಕ್ಷೆಗಳು ದೊಡ್ಡ ಮಟ್ಟದಲ್ಲಿ ನಡೆದು ಫಲಿತಾಂಶ ಬರುವುದಕ್ಕೂ ಮುನ್ನವೇ ಕೊವಿಡ್ ಹಲವಾರು ಜನರನ್ನು ಆಕ್ರಮಿಸಬಹುದು ಎಂಬ ಭಯವೂ ಇದೆ. ಇಂಥದ್ದೊಂದು ರೋಗವನ್ನು ಜಗತ್ತು ಎದುರಿಸುತ್ತಿದ್ದರೂ ಜನರೆಲ್ಲ ಅರಿವು ಮೂಡಿಸಿಕೊಂಡು ತಮ್ಮ ಸುರಕ್ಷತೆಯ ಬಗ್ಗೆ ಎಚ್ಚರದಿಂದಿದ್ದಾರಾ ಎಂದು ಅವಲೋಕಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಅನೇಕ ಕಡೆ ಸುಶಿಕ್ಷಿತರೇ ಮಾಸ್ಕ್ ಧರಿಸುವುದಿಲ್ಲ. ಮೈಗೆ ಮೈ ತಾಗಿಸಿಕೊಂಡು ನಿಲ್ಲುವವರಿದ್ದಾರೆ. ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಇಟ್ಟಿದ್ದರೂ ಬಳಸಲು ಹಿಂದೇಟು ಹಾಕುವವರಿದ್ದಾರೆ. ಇತ್ತೀಚೆಗೆ ನನ್ನ ಬಂಧುವೊಬ್ಬರು ಹೇಳಿತ್ತಿದ್ದರು, ‘ನಮ್ಮ ಗ್ರಾಮದಲ್ಲಿ ನಾವು ಯಾರಾದರೂ ಮಾಸ್ಕ್ ಧರಿಸಿ ತಿರುಗಾಡಿದರೆ ನಮ್ಮನ್ನು ತಮಾಷೆ ಮಾಡಿ ನಗುವವರೇ ಬಹಳ ಮಂದಿ. ಎಂತೆಂಥಾ ರೋಗ ಬಂದಾಗಲೇ ಬದುಕಿದ್ದೇವೆ, ಇನ್ನು ಈ ಕೊರೊನಾ ಯಾವ ಮಹಾ. ಮಾಸ್ಕ್​ನಲ್ಲಿ ನಿಮ್ಮನ್ನು ಗುರುತಿಸಲಿಕ್ಕಾಗುವುದಿಲ್ಲ, ಮಾಸ್ಕ್ ತೆಗೆಯಿರಿ ಎನ್ನುತ್ತಾರೆ’ ಎಂದು. ‘ಈ ಕೊರೊನಾವನ್ನು ನೀವು ವೈದ್ಯರು ಮತ್ತು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ, ಅದೇನೂ ಅಂಥಾ ಮಹಾರೋಗವಲ್ಲ. ಎಲ್ಲಿದೆ ಕೊರೋನಾ ತೋರಿಸಿ ನೋಡೋಣ’ ಎಂದು ಮಾತನಾಡುವ ಸುಶಿಕ್ಷಿತರು ಅನೇಕರಿದ್ದಾರೆ. ಹುಟ್ಟಿದ ನಂತರ ಒಮ್ಮೆಯೂ ಆಸ್ಪತ್ರೆಗೆ ಹೋಗದ ಸಾವಿರಾರು ಆರೋಗ್ಯವಂತರ ಪ್ರಾಣವನ್ನು ಕೊರೊನಾ ಹಿಂಡಿದರೂ ಅದರ ತೀವ್ರತೆಯನ್ನು ಇನ್ನೂ ಸುಮಾರು ಜನರು ಅರ್ಥ ಮಾಡಿಕೊಂಡಿಲ್ಲ.

ಸಾಂದರ್ಭಿಕ ಚಿತ್ರ

ಬೇರೆ ಬೇರೆ ರೋಗಗಳಿಂದ, ಅಪಘಾತಗಳಿಂದ ಲಕ್ಷಗಟ್ಟಲೆ ಜನ ಪ್ರತಿದಿನ ಸಾಯುತ್ತಿದ್ದಾರೆ ಜಗತ್ತಿನಲ್ಲಿ. ಹಾಗಿರುವಾಗ ಕೊರೊನಾದಿಂದ ಸಾಯುವುದನ್ನು ವಿಶೇಷವಾಗಿ ಹೇಳುವುದು ಯಾಕೆ? ಕೊರೊನಾ ಬರಬಹುದು ಎಂಬ ಭಯದಿಂದ ಕಾರ್ಯಕ್ರಮಗಳಿಗೆಲ್ಲ ನಿರ್ಬಂಧ ವಿಧಿಸಿ ಲಾಕ್​ಡೌನ್ ಮಾಡುವುದೇಕೆ? ಒಂದಲ್ಲ ಒಂದು ದಿನ ಸಾಯಲೇಬೇಕು. ಬೇರೆ ಕಾರಣದಿಂದ ಸಾಯುವ ಬದಲು ಕೊರೊನಾದಿಂದಾಗಿ ಸಾಯುವುದಷ್ಟೇ. ಅದಕ್ಕೆ ಅಷ್ಟೆಲ್ಲ ಹೆದರಿಕೊಂಡು ಇರುವುದೇಕೆ ಎಂದು ಪ್ರಶ್ನಿಸುವ ಜನರಿದ್ದಾರೆ. ವೈದ್ಯಕೀಯ ಲೋಕದಲ್ಲಿ Mortality ಮತ್ತು Morbidity ಎಂಬ ಎರಡು ಪದಗಳು ಬಹಳ ಸಾಮಾನ್ಯ. ಯಾವುದೇ ಕಾರಣದಿಂದ ಸಾವುಂಟಾದರೆ Mortality ಎಂದೂ, ಯಾವುದೇ ರೋಗ ಅಥವಾ ಅಪಘಾತಕ್ಕೆ ಒಳಪಟ್ಟ ನಂತರವೂ ಸಾಯದೇ ಬದುಕುಳಿದು ಸಂಭವಿಸುವ ದೀರ್ಘಕಾಲದ ಅಸ್ವಸ್ಥತೆಗೆ Morbidity ಅಂತಲೂ ಹೆಸರು. ಉದಾಹರಣೆಗೆ ನೃತ್ಯವನ್ನೇ ವೃತ್ತಿಯಾಗಿಸಿಕೊಂಡ ಕಲಾವಿದನೊಬ್ಬ ಅಪಘಾತವೊಂದರಲ್ಲಿ ಎರಡೂ ಕಾಲು ಕಳೆದುಕೊಂಡು ಬದುಕುಳಿದರೆ ಆತ ತನ್ನ ವೃತ್ತಿಯನ್ನು ಮುಂದುವರೆಸಲಾಗದು. ಪರ್ಯಾಯವಾಗಿ ಬೇರೆ ಯಾವುದಾದರೂ ಕೆಲಸ ಹುಡುಕಿಕೊಳ್ಳಬೇಕು. ಅಂಗವೈಕಲ್ಯದಿಂದ ಆತ Morbid ಆಗುತ್ತಾನೆ. Morbidity ಕಾರಣದಿಂದ ಅವನ ಜೀವನ ಮಟ್ಟ ಕುಸಿಯುತ್ತದೆ. ಮಾನಸಿಕ ನೆಮ್ಮದಿ ಇಲ್ಲವಾಗಬಹುದು. ಅದೇ ರೀತಿ ಅಧಿಕ ರಕ್ತದೊತ್ತಡ, ಮಧುಮೇಹ ಖಾಯಿಲೆ ಇರುವವರೂ Morbidityಯಿಂದ ಬದುಕುತ್ತಾರೆ. ಏಕೆಂದರೆ ಕೆಲವು ವರ್ಷಗಳ ಬಳಿಕ ನಿಯಂತ್ರಣ ತಪ್ಪಿದ ಮಧುಮೇಹ, ರಕ್ತದೊತ್ತಡದಿಂದ ಕಣ್ಣಿನ, ಮೂತ್ರಪಿಂಡದ ತೊಂದರೆ ಶುರುವಾಗುವ ಸಾಧ್ಯತೆ ಇದೆ. ಇದರಿಂದಾಗಿ ರೋಗಿ ಸಾವಿಗೀಡಾದರೆ Morbidity ಇದ್ದದ್ದು Mortality ಆಗಿ ಬದಲಾಗುತ್ತದೆ.

ಕೊವಿಡ್ ರೋಗದಲ್ಲಿಯೂ ಅಷ್ಟೇ. ರೋಗ ಗುಣವಾದ ಮೇಲೂ ಅಧಿಕ ರಕ್ತದೊತ್ತಡ, ಹೃದಯದ ತೊಂದರೆ, ಪಾರ್ಶ್ವವಾಯುವಿಂಥ Morbidity ಗಳು ಆಗುವ ಸಾಧ್ಯತೆ ಇರುತ್ತದೆ. ಬೇರೆ ಸನ್ನಿವೇಶಗಳಂತೆ ಕೊವಿಡ್​ನಲ್ಲಿ ಯಾವ ಹಂತದಲ್ಲಿ, ಎಷ್ಟು ಕಾಲದ ಬಳಿಕ ಈ ರೀತಿಯ Morbidity ಉಂಟಾಗುತ್ತದೆ ಎಂದು ನಿರ್ಧರಿಸುವುದು ತುಂಬಾ ಕಷ್ಟ. ಕೊರೊನಾ ಸೋಂಕಿನಿಂದ ಮೃತಪಟ್ಟರೆ ಸರ್ಕಾರದ ನಿಯಮಗಳ ಪ್ರಕಾರ ಮೃತದೇಹ ರೋಗಿಯ ಮನೆಯವರಿಗೆ ಸಿಗುವುದಿಲ್ಲ. ತೊಂದರೆಗೊಳಗಾಗಿ ಆಸ್ಪತ್ರೆಗೆ ಹೋದ ರೋಗಿ ಗುಣವಾಗಲೂ ಇಲ್ಲ, ಸತ್ತ ನಂತರ ದೇಹವೂ ಸಿಗಲಿಲ್ಲ ಎಂಬ ಹೃದಯವಿದ್ರಾವಕ ಸ್ಥಿತಿ ಬಂದಿರುವುದು ಕೊರೊನಾದಿಂದಾಗಿ ಮಾತ್ರ. ಈ ಎಲ್ಲ ಕಾರಣದಿಂದ ಅಕಾಲದಲ್ಲಿ ಮರಣಕ್ಕೆ ತುತ್ತಾಗದಿರುವುದಕ್ಕೆ, ಬದುಕುಳಿದು ದೀರ್ಘಕಾಲೀನ ಅಸ್ವಸ್ಥತೆಯಿಂದ ನರಳಬೇಕಾಗಬಹುದಾದ ಸ್ಥಿತಿಯನ್ನು ತಡೆಯಲು ಕೊರೊನಾ ಅಟ್ಯಾಕ್ ಆಗದಂತೆ ಮುನ್ನೆಚ್ಚೆರಿಕೆ ವಹಿಸಬೇಕಾದ್ದು ತುಂಬಾ ಅನಿವಾರ್ಯ. ಅಲ್ಲದೆ ಸಾಂಕ್ರಾಮಿಕ ರೋಗವಾಗಿರುವುದರಿಂದ ನಾವೂ ರೋಗಿಗಳಾಗಿ ತನ್ನ ಸುತ್ತಮುತ್ತಲಿನವರಿಗೂ ಸೋಂಕು ಹರಡಲು ನಾವು ಕಾರಣೀಭೂತರಾಗಬಹುದು. ಅಷ್ಟಕ್ಕೂ ಇನ್ನೊಬ್ಬರನ್ನು ರೋಗಿಷ್ಠರನ್ನಾಗಿಸುವ ಹಕ್ಕು ಯಾರಿಗೂ ಇಲ್ಲ ಎನ್ನುವುದನ್ನು ನೆನಪಿಡಲೇಬೇಕಲ್ಲ!

ಭಾರತದಲ್ಲಿ ಕೊವಿಡ್ ಹಾವಳಿ ಶುರುವಾಗಿದ್ದು ಕಳೆದ ವರ್ಷ ಬೇಸಿಗೆಯಲ್ಲಿ ಅದು ಈ ವರ್ಷದ ಬೇಸಿಗೆ ಕಾಲ ಆರಂಭವಾದರೂ ನಿಂತಿಲ್ಲ. ಕೋವಿಡ್​ಗೆ ತುತ್ತಾಗಿ ಅದರಲ್ಲೂ ಐಸಿಯುಗೆ ಅಡ್ಮಿಟ್ ಆಗಿ ಬದುಕುಳಿದ ರೋಗಿಗಳು ತಮ್ಮನ್ನು ನೋಡಿಕೊಂಡ ಆರೋಗ್ಯ ಕಾರ್ಯಕರ್ತರಿಗೆ ಖಂಡಿತಾ ಆಭಾರಿಯಾಗಿರಲೇಬೇಕು. ಸುಡುವ ಬೇಸಿಗೆಯಲ್ಲಿ ಬೆವರು ಬಸಿಯುತ್ತಿದ್ದರೂ ಭಾರದ ಪಿಪಿಇ ಕಿಟ್ ಧರಿಸಿ ಗಂಟೆಗಟ್ಟಲೆ ಐಸಿಯುನಲ್ಲಿ, ವಾರ್ಡಿನಲ್ಲಿ ಕೆಲಸ ಮಾಡುವ ವೈದ್ಯರ, ಆರೋಗ್ಯ ಕಾರ್ಯಕರ್ತರ ಸೇವೆಯನ್ನು ಜಗತ್ತು ಯಾವತ್ತೂ ಮರೆಯಬಾರದು. ಒಮ್ಮೆ ಪಿಪಿಇ ಕಿಟ್ ಧರಿಸಿದ ನಂತರ ಆರರಿಂದ ಎಂಟು ತಾಸುಗಳ ಕಾಲ ಧರಿಸಿಯೇ ಇರಬೇಕು. ಮಧ್ಯದಲ್ಲಿ ತೆಗೆಯುವಂತಿಲ್ಲ, ಬಾಯಾರಿದರೆ ನೀರು ಕುಡಿಯುವಂತಿಲ್ಲ, ಮೂತ್ರಶಂಕೆಯಾದರೆ ಶೌಚಾಲಯಕ್ಕೆ ಹೋಗುವಂತಿಲ್ಲ. ಎಲ್ಲೋ ಹೆಸರಾಂತ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗಳಲ್ಲಿ ಮತ್ತು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಯ ಐಸಿಯುಗಳಲ್ಲಷ್ಟೇ ಒಂದೇ ಶಿಫ್ಟ್​ನಲ್ಲಿ ಎರಡು ಪಿಪಿಇ ಕಿಟ್ ಸಿಗುತ್ತದೆ ಬಿಟ್ಟರೆ ದೇಶದ ಲಕ್ಷಾಂತರ ಆರೋಗ್ಯ ಕಾರ್ಯಕರ್ತರು ಇಂದೂ ಆರೆಂಟು ತಾಸುಗಳ ಕಾಲ ಒಂದೇ ಪಿಪಿಇ ಕಿಟ್​ನಲ್ಲಿ ಕೆಲಸ ಮಾಡುವವರೇ. ಒಮ್ಮೊಮ್ಮೆ ರೋಗಿಯ ಪರಿಸ್ಥಿತಿ ಉಲ್ಬಣಿಸಿದರೆ ಅಥವಾ ಇನ್ಯಾವುದೋ ಕಾರಣಕ್ಕೆ ತುರ್ತು ಅಗತ್ಯ ಬಿದ್ದರೆ ಡ್ಯೂಟಿಯ ಅವಧಿ ಒಂದೆರಡು ತಾಸು ಹೆಚ್ಚಾಗುವುದೂ ಇದೆ. ಅಷ್ಟೂ ಹೊತ್ತು ಪಿಪಿಇ ಕಿಟ್ ಧರಿಸಿಕೊಂಡಿರಲೇ ಬೇಕು. ಮುಟ್ಟಾಗಿ ರಕ್ತಸ್ರಾವದಿಂದ ಬಳಲಿಕೆ ಉಂಟಾದರೂ ತೋರಿಸಿಕೊಳ್ಳದೆ ಕಾರ್ಯನಿರ್ವಹಿಸುವ ಮಹಿಳಾ ಆರೋಗ್ಯ ಕಾರ್ಯಕರ್ತರ ಸ್ಥಿತಿಯನ್ನು ಊಹಿಸಿಕೊಂಡರೆ ಬೇಜಾರಾಗುತ್ತದೆ. ಯಾರೂ ಸಂಬಂಧಿಕರಿಲ್ಲದ ರೋಗಿಗಳನ್ನು ಮನೆಮಂದಿಯೆಂಬಂತೆ ಕಾಳಜಿಯಿಂದ ನೋಡಿಕೊಂಡ, ಊಟ ತಿನ್ನಲಾಗದವರಿಗೆ ತಮ್ಮ ಕೈಯಾರೆ ಊಟ ಮಾಡಿಸಿದ ನನ್ನ ವೈದ್ಯಕೀಯ ಮಿತ್ರರು, ಸಹೋದ್ಯೋಗಿಗಳು ಎಷ್ಟೋ ಜನ ಇದ್ದಾರೆ. ಕೊವಿಡ್ ವಿರುದ್ಧ ಮನುಕುಲ ನಡೆಸುತ್ತಿರುವ ಯುದ್ಧದಲ್ಲಿ ಇಂಥವರು ಮುಂಚೂಣಿಯಲ್ಲಿದ್ದು Frontline warriors ಎನಿಸಿಕೊಂಡಿದ್ದಾರೆ. ಆದರೆ ಒಂದು ವರ್ಷದಿಂದ ಪಿಪಿಇ ಕಿಟ್​ಗಳಲ್ಲಿ ಕೆಲಸ ಮಾಡಿ ಮಾಡಿ ಕೊರೋನಾ ಯೋಧರೂ ಸಾಕಷ್ಟು ಬಳಲಿದ್ದಾರೆ. ಇಂಥ ಸಂದರ್ಭದಲ್ಲೇ ಎರಡನೇ ಅಲೆಯ ರೂಪದಲ್ಲಿ ಕೊವಿಡ್ ಇನ್ನಷ್ಟು ಬಲಶಾಲಿಯಾಗುತ್ತಿರುವ ಲಕ್ಷಣ ಆತಂಕ ಹುಟ್ಟುಹಾಕಿದೆ.

ಪ್ರಾತಿನಿಧಿಕ ಚಿತ್ರ

ಒಂದು ವೈರಾಣು ಇಡೀ ಸಮಾಜದ ಮೇಲಿನ ಒತ್ತಡ ಹೆಚ್ಚಿಸಬಲ್ಲದು
ಲಾಕ್​ಡೌನ್​ನಿಂದಾಗಿ ಪ್ರಪಂಚದ, ದೇಶದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಆರ್ಥಿಕತೆಯಲ್ಲಿ ಐದರಿಂದ ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿವೆ. ಕೊರೊನಾ ವಿರುದ್ಧದ ಯುದ್ಧದ ನಡುವೆಯೇ ಆರ್ಥಿಕತೆಯನ್ನು ಮರುಸ್ಥಾಪಿಸುವ ಕೆಲಸ ಜಗತ್ತಿನಾದ್ಯಂತ ನಡೆಯುತ್ತಿದೆ. ಆರ್ಥಿಕತೆ ಸಬಲವಾಗಬೇಕಾದರೆ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸಿ, ಉದ್ಯೋಗಿಗಳು ಸಾಧ್ಯವಾದಷ್ಟು ಜಾಸ್ತಿ ಕೆಲಸ ಮಾಡಿ ಉತ್ಪಾದನೆ ಜಾಸ್ತಿಯಾಗಬೇಕು. ಕೆಲಸಗಾರರು ಹೆಚ್ಚು ಸಂಬಳ ಪಡೆದು ಹೆಚ್ಚೆಚ್ಚು ತೆರಿಗೆ ಸರ್ಕಾರಕ್ಕೆ ಸಂದಾಯವಾದರೆ ಆರ್ಥಿಕತೆಯ ಪುನಶ್ಚೇತನ ಸಾಧ್ಯ. ಆದರೆ ಹೆಚ್ಚು ಕೆಲಸ ಮಾಡಲು ಯಾರಿಗೆ ಸಾದ್ಯ? ಮಕ್ಕಳಿಗೆ ಮತ್ತು ಐವತ್ತು ವರ್ಷ ಮೇಲ್ಪಟ್ಟವರಿಂದ ಸಾಧ್ಯವಿಲ್ಲವಲ್ಲ. ಇಪ್ಪತ್ತರಿಂದ ನಲ್ವತ್ತು ವರ್ಷ ವಯೋಮಾನದವರು ಮಾತ್ರ ಹೆಚ್ಚೆಚ್ಚು ದುಡಿಯಲು ಸಾಧ್ಯ. ಹಾಗಾಗಿ 1980ರಿಂದ 2000ನೇ ಇಸವಿಯ ಮಧ್ಯೆ ಜನಿಸಿದ ವ್ಯಕ್ತಿಗಳ ಮೇಲೆ ಈ ಕೊರೊನಾ ಬಿಕ್ಕಟ್ಟಿನ ಕಾಲದಲ್ಲಿ, ವಿಪತ್ತಿನ ನಂತರ ಪ್ರಪಂಚದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬೇಕಾದ ಮಹತ್ವದ ಜವಾಬ್ದಾರಿಯಿದೆ. ಇದಕ್ಕೆ ಆಳುವ ಸರ್ಕಾರವೂ ಪೂರಕವಾಗಿ ಸ್ಪಂದಿಸಬೇಕಷ್ಟೇ. ಯುದ್ಧದ ನಂತರ ಅಸ್ತವ್ಯಸ್ತವಾದ ವ್ಯವಸ್ಥೆಯನ್ನು ಸರಿಪಡಿಸಲು ಅಕ್ಕ ಪಕ್ಕದ ರಾಜ್ಯಗಳಿಂದ ಸಹಾಯ ಪಡೆಯುವಂತೆ ಕೊವಿಡ್ ನಿಯಂತ್ರಣಕ್ಕೆ ಬಂದ ಮೇಲೆ ವ್ಯವಸ್ಥೆಯನ್ನು ಸರಿದಾರಿಗೆ ತರಲು ಎಲ್ಲ ರಾಷ್ಟ್ರಗಳೂ ಪರಸ್ಪರರಿಗೆ ನೆರವಾಗಬೇಕಾಗುತ್ತದೆ. ಆದರೆ ಅದಕ್ಕೂ ಮೊದಲು ಕೊವಿಡ್ ವಿರುದ್ಧದ ಯುದ್ಧ ಮುಗಿಯಬೇಕು!

ಕೊವಿಡ್ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿದ್ದ loop holeಗಳನ್ನು ಅಂದರೆ ಒಂದಷ್ಟು ಅಪಸವ್ಯಗಳನ್ನು, ಅವ್ಯವಸ್ಥೆಯನ್ನು ಜಗಜ್ಜಾಹೀರು ಮಾಡಿತು. ಇದ್ದಕ್ಕಿಂದ್ದಂತೆ ಉಂಟಾದ ಆರೋಗ್ಯ ತುರ್ತುಪರಿಸ್ಥಿತಿಗೆ ತಕ್ಷಣದಲ್ಲಿ ಸ್ಪಂದಿಸುವ ಸಾಮರ್ಥ್ಯ ಯಾವ ಆಸ್ಪತ್ರೆಗಳಿಗೂ ಇರಲಿಲ್ಲ. ಬಹುತೇಕ ಎಲ್ಲ ನಗರಗಳ ಆಸ್ಪತ್ರೆಗಳಲ್ಲೂ ಬೆಡ್ ಕೊರತೆಯಾಯಿತು. ರೋಗಿಗಳನ್ನು ದಾಖಲಿಸಿಕೊಳ್ಳಲು ಜಾಗವಿರಲಿಲ್ಲ. ಮೂಲಭೂತ ಅವಶ್ಯಕತೆಯಾದ ಆಕ್ಸಿಜನ್, ಅತ್ಯವಶ್ಯಕ ಔಷಧಿಗಳು, ಬಹಳಷ್ಟು ಆರೋಗ್ಯ ಸೇವೆಗಳು ಕ್ಲಪ್ತ ಸಮಯದಲ್ಲಿ ಲಭ್ಯವಾಗುತ್ತಿರಲಿಲ್ಲ. ಆದರೆ ಕೊವಿಡ್ ಇದೆಲ್ಲದಕ್ಕೂ ಮೇಜರ್ ಸರ್ಜರಿ ಮಾಡಿ ಹಾಕಿದೆ. ಕೊವಿಡ್ ಕಾರಣದಿಂದಾಗಿ ಆಸ್ಪತ್ರೆಗಳ ಗುಣಮಟ್ಟ ವೃದ್ಧಿಯಾಯಿತು, ಬೇಕಾದಷ್ಟು ವೈದ್ಯಕೀಯ ಸಿಬ್ಬಂದಿ ನೇಮಕಗೊಂಡರು, ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳು ಬೇಗ ಬೇಗ ಪೂರ್ಣಗೊಂಡವು, ಬಹುತೇಕ ಸರ್ಕಾರಿ ಆಸ್ಪತ್ರೆಗಳಿಗೆ ಕೊವಿಡ್ ಫಂಡ್​ನಿಂದಾಗಿ ಹೈಟೆಕ್ ಸ್ಪರ್ಶ ಸಿಕ್ಕಿತು. ಖಾಸಗಿಯವರ ಲೂಟಿಯನ್ನು ತಪ್ಪಿಸಲು ಸರ್ಕಾರವೇ ದರ ನಿಗದಿ ಮಾಡಿ ಅದು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಂಡಿತು. ಇದರಿಂದಾಗಿ ಕೊವಿಡ್ ಎರಡನೇ ಅಲೆ ವ್ಯಾಪಿಸಿದರೂ ಚಿಕಿತ್ಸೆ ನೀಡಿ ನಿಭಾಯಿಸಬಹುದೆಂಬ ಆತ್ಮವಿಶ್ವಾಸ ಆರೋಗ್ಯ ವ್ಯವಸ್ಥೆಗೆ ಬಂದದ್ದನ್ನು ನಿರಾಕರಿಸುವಂತಿಲ್ಲ.

ಪ್ರಾತಿನಿಧಿಕ ಚಿತ್ರ

ಹೊಣೆ ಇರುವುದು ನಮ್ಮನಿಮ್ಮೆಲ್ಲರ ಮೇಲೆ
ಪರಿಸ್ಥಿತಿ ಕೈಮೀರಿದರೆ ಮತ್ತೆ ಲಾಕ್​ಡೌನ್​ ಮಾಡಬೇಕಾಗಬಹುದೆಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ ಲಾಕ್​ಡೌನ್ ಮತ್ತೊಮ್ಮೆ ಮಾಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವುದನ್ನು ಹಿಂದಿನ ಲಾಕ್​ಡೌನ್ ಕಲಿಸಿದೆ. ಹಾಗೆ ನೋಡಿದರೆ ಕೊವಿಡ್ ನಿಯಂತ್ರಣ ಮಾಡುವುದು ಈಗ ಕೇವಲ ಸರ್ಕಾರದ ಜವಾಬ್ದಾರಿಯಾಗಿ ಉಳಿದಿಲ್ಲ. ಜನರು ತಮ್ಮ ಎಚ್ಚರಿಕೆಯಲ್ಲಿ ತಾವಿದ್ದು ತಮ್ಮ ಸುರಕ್ಷತೆಯ ಕಡೆ ಹೆಚ್ಚು ಲಕ್ಷ್ಯ ಇಟ್ಟರೆ ಒಳ್ಳೆಯದು. ದಂಡ ಹಾಕುತ್ತಾರೆ ಎಂಬ ಭಯಕ್ಕಲ್ಲದೆ ಕೊರೊನಾ ನಿಯಂತ್ರಣಕ್ಕಾಗಿ ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸುವುದು, ಸಾರ್ವಜನಿಕ ಸಮಾರಂಭಗಳನ್ನು ಆದಷ್ಟು ಕಡಿತಗೊಳಿಸಿ ಅನಿವಾರ್ಯವಾದರೆ ಸೂಕ್ತ ಸಾಮಾಜಿಕ ಅಂತರದೊಂದಿಗೆ ಅತ್ಯಂತ ಕಡಿಮೆ ಜನರನ್ನು ಸೇರಿಸಿ ನಡೆಸುವಂತಾಗಬೇಕು. ಮೋಜಿಗಾಗಿ ಪ್ರವಾಸ ಹೋಗುವುದನ್ನು, ಅನಗತ್ಯ ಪ್ರಯಾಣವನ್ನು ಆದಷ್ಟು ನಿಲ್ಲಿಸಿದರೆ ಉತ್ತಮವಾದೀತು. ಯಾವುದೇ ರೋಗ ಲಕ್ಷಣಗಳು ಬಂದರೂ, ಅಸೌಖ್ಯ ಉಂಟಾದರೂ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಭೇಟಿ ಮಾಡುವ ಮನಸ್ಥಿತಿ ಬರಬೇಕು. ಕೊವಿಡ್ ಲಸಿಕೆಯನ್ನು ಫಲಾನುಭವಿಗಳು ಆದಷ್ಟು ಬೇಗ ತೆಗೆದುಕೊಳ್ಳುವ ಮನಸ್ಸು ಮಾಡಬೇಕು. ಒಟ್ಟಿನಲ್ಲಿ ಈಗ ಸರ್ಕಾರಕ್ಕಿಂತ ಜನರ ಮೇಲೆಯೇ ಯುದ್ಧ ಗೆಲ್ಲುವ ಹೊಣೆ ಜಾಸ್ತಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಲೇಖನದ ಆರಂಭದಲ್ಲಿ ಹೇಳಿದಂತೆ ಇನ್ನು ಐದು ವರ್ಷಗಳಲ್ಲಿ ನಿಮ್ಮನ್ನು ನೀವು ಯಾವ ರೀತಿಯಲ್ಲಿ ನೋಡಬಯಸುತ್ತೀರಿ ಎಂಬ ಪ್ರಶ್ನೆಗೆ 2015-16ರಲ್ಲಿ ಉತ್ತರಿಸಿದ ಜನರ ಉತ್ತರವನ್ನು ಅಣಕಿಸುವಂತಿಲ್ಲ. ಏಕೆಂದರೆ ಪ್ರಕೃತಿ ತೋರಿದ ಈ ಮುನಿಸಿಗೆ ಯಾರು ಜವಾಬ್ದಾರರು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದರೂ ಬೇರೆ ಯಾವ ಜೀವಪ್ರಬೇಧಗಳನ್ನೂ ತೊಂದರೆಗೀಡುಮಾಡದೆ ಮನುಷ್ಯರನ್ನು ಮಾತ್ರ ಕೊಲ್ಲುತ್ತಿರುವ ಕೊವಿಡ್​ನಂತಹ ವೈರಸ್​ಗಳು ಹುಟ್ಟಿಕೊಳ್ಳಲು ಮಾನವ ಸಾವಿರಾರು ವರ್ಷಗಳಿಂದ ಭೂಮಿಯಲ್ಲಿ ಮಾಡಿದ ಅನಾಚಾರ, ಪ್ರಕೃತಿಯ ಮೇಲೆ ನಡೆಸಿದ ದೌರ್ಜನ್ಯ ಕಾರಣವೇ ಎಂಬ ಪ್ರಶ್ನೆ ಕೆಲವರ ಮನಸ್ಸಿನ ಮೂಲೆಯಲ್ಲಿ ಮೂಡಿದರೆ ಆಶ್ಚರ್ಯವಿಲ್ಲ. ಇಲ್ಲಿಯವರೆಗಿನ ಯುದ್ಧದಲ್ಲಿ ಮಾನವರ ಮೈಲುಗೈಯಾಗಿದೆ ಎಂದು ಮೇಲ್ನೋಟಕ್ಕೆ ಭಾಸವಾದರೂ ಮನುಜಕುಲಕ್ಕೆ ಭಾರೀ ರೂಪದಲ್ಲಾದ ನಷ್ಟವನ್ನು ಮರೆಯಲಾಗದು. ಯುದ್ಧ ಮುಂದುವರೆಯುತ್ತಿದೆ, ಕೋವಿಡ್ ರಕ್ತಬೀಜಾಸುರನಂತೆ ಮತ್ತೆ ಮತ್ತೆ ಆವಿರ್ಭವಿಸುತ್ತಿರುವುದರಿಂದ ಮಾನವ-ಸೂಕ್ಷ್ಮಾಣು ಜೀವಿಯ ನಡುವಿನ ಈ ಕದನದಲ್ಲಿ ಸದ್ಯಕ್ಕೆ ಯುದ್ಧವಿರಾಮ ಘೋಷಣೆಯಾಗುವ ಲಕ್ಷಣಗಳಂತೂ ಇಲ್ಲ ಎನ್ನುವುದು ಕಟು ಸತ್ಯ.

ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ
ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ:
ಕೊರೊನಾ ವಿರುದ್ಧ ಹೋರಾಟಕ್ಕೆ ಸಜ್ಜಾಗಿಯೇ ಹುಟ್ಟಿದ ಶಿಶು; ಅಮ್ಮ ಪಡೆದ ವ್ಯಾಕ್ಸಿನ್​ನಿಂದ ಶಕ್ತಿ ಪಡೆದ ಅಮೆರಿಕದ ಮೊದಲ ಮಗು ಇದು.. 

ಕೊರೊನಾ ಬಗ್ಗೆ ಅತಿಯಾದ ಭಯವೂ ಬೇಡ, ಅಸಡ್ಡೆಯೂ ಒಳ್ಳೆಯದಲ್ಲ 

Published On - 1:35 pm, Thu, 18 March 21