ಕೊರೊನಾ ಬಗ್ಗೆ ಅತಿಯಾದ ಭಯವೂ ಬೇಡ, ಅಸಡ್ಡೆಯೂ ಒಳ್ಳೆಯದಲ್ಲ
ಕೊರೊನಾ ಬಗ್ಗೆ ಜನರಲ್ಲಿ ಅತಿಯಾದ ಅಸಡ್ಡೆ ಅಥವಾ ಅತಿಯಾದ ಭಯ ಇದೆ. ಈ ಎರಡು ಭಾವಗಳೂ ಒಳ್ಳೆಯದಲ್ಲ. ಕೊವಿಡ್-19ನ್ನು ಜನರು ಅರ್ಥ ಮಾಡಿಕೊಳ್ಳಬೇಕು.
ಬೆಂಗಳೂರು: ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಭಯಗೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಅಸಡ್ಡೆಯನ್ನೇ ಮುಂದುವರೆಸಿದ್ದಾರೆ. ಈ ಬಗ್ಗೆ ಟಿವಿ9 ಡಿಜಿಟಲ್ ಲೈವ್ ಕಾರ್ಯಕ್ರಮ ನಡೆಸಿಕೊಟ್ಟಿತು. ಶ್ವಾಸಕೋಶ ತಜ್ಞ ಡಾ. ಚೇತನ್, ಡಾ. ಪವನ್ ಹಾಗೂ ಸಾಂಕ್ರಾಮಿಕ ರೋಗ ತಜ್ಞ ಡಾ. ಸುನಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಆ್ಯಂಕರ್ ಹರಿಪ್ರಸಾದ್ ಕಾರ್ಯಕ್ರಮ ನಡೆಸಿಕೊಟ್ಟರು. ಕೊರೊನಾ ಕುರಿತಾಗಿ ಜನರು ಏನೇನು ಕ್ರಮ ಕೈಗೊಳ್ಳಬೇಕು. ಮಕ್ಕಳು, ಹಿರಿಯರು ಹೇಗಿರಬೇಕು ಎಂದು ತಿಳಿಸಿದರು. ಲಸಿಕೆಯ ಬಗ್ಗೆಯೂ ಮಾಹಿತಿ ಹಂಚಿಕೊಂಡರು.
ಮೊದಲಿಗೆ ಶ್ವಾಸಕೋಶತಜ್ಞ ಡಾ. ಪವನ್ ಮಾತನಾಡಿದರು. ಒಂದು ವರ್ಷದ ಬಳಿಕ ಮತ್ತೆ ಅದೇ ಹಂತ ತಲುಪಿದ್ದೇವೆ. ಆದರೆ ಮೊದಲಿನಂತೆ ಅಜ್ಞಾನ ಈಗಿಲ್ಲ. ಸೋಂಕಿನ ಬಗ್ಗೆ ತಿಳಿದುಕೊಂಡಿದ್ದೇವೆ ಎಂಬುದೇ ವ್ಯತ್ಯಾಸ. ಹಾಗಂತ ಇದು ಸಂಭ್ರಮಿಸುವ ವಾರ್ಷಿಕ ದಿನಗಳು ಅಲ್ಲ. ಪರಿಸ್ಥಿತಿ ಆ ರೀತಿ ಇಲ್ಲ. ಆಗ ಏನೂ ತಿಳಿದಿರಲಿಲ್ಲ. ಔಷಧ ಇರಲಿಲ್ಲ. ಈಗ ಸ್ಥಿತಿ ಅಂದಿಗಿಂತ ಚೆನ್ನಾಗಿದೆ. ವೈರಾಣು ಯಾವುದು. ಅದು ಹೇಗೆ ಹರಡುತ್ತದೆ ಇತ್ಯಾದಿ ಮಾಹಿತಿ ನಮಗಿದೆ. ಹಾಗಂತ, ಇಷ್ಟೇ ಬೆಳವಣಿಗೆ ಆದರೆ ಸಾಕಾ? ಜನರ ಜವಾಬ್ದಾರಿ ಹೆಚ್ಚಿಲ್ವಾ? ಖಂಡಿತಾ ಇದೆ ಎಂದು ತಿಳಿಸಿದರು.
ಮತ್ತೆ ಪ್ರಕರಣಗಳು ಹೆಚ್ಚಾಗಲು ಕಾರಣವೇನು? ಈಗ ಮತ್ತೆ ಪ್ರಕರಣಗಳು ಹೆಚ್ಚುತ್ತಿವೆ. ಕಾರಣ ಏನು? ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ಜನ ಸೇರಿದಲ್ಲೇ ಹೆಚ್ಚು ಪ್ರಕರಣ ಕಂಡುಬರುತ್ತಿದೆ. ಜನಸಂದಣಿ ಮತ್ತು ವಿದೇಶ ಪ್ರಯಾಣ ಅಥವಾ ಹೆಚ್ಚಿನ ಪ್ರಯಾಣ ಮಾಡುವ ಕಡೆ ಸೋಂಕು ವೇಗವಾಗಿ ಹರಡುತ್ತಿದೆ. ಕೇರಳ, ಮಹಾರಾಷ್ಟ್ರದಲ್ಲಿ ಕೊವಿಡ್-19 ಪ್ರಮಾಣ ಹೆಚ್ಚಾಗಿದೆ. ಇದರ ಜೊತೆಗೆ ಜನರ ಜವಾಬ್ದಾರಿ ಹೆಚ್ಚಿದೆ. ಪ್ರಯಾಣ ಕಡಿಮೆ ಮಾಡಿ. ಮನೆ ಮತ್ತು ಕೆಲಸ ಎಂದು ನೋಡಿಕೊಂಡಿರಬೇಕಾದ ಪರಿಸ್ಥಿತಿ ಇದೆ. ಆ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾದಾಗ ಕೊರೊನಾವನ್ನು ಸಾಧ್ಯವಾದಷ್ಟು ಹತೋಟಿಗೆ ತರಬಹುದು ಎಂದು ಹೇಳಿದರು.
ರೋಗಲಕ್ಷಣಗಳಲ್ಲಿ ವ್ಯತ್ಯಾಸ ಏನೂ ಉಂಟಾಗಿಲ್ಲ. ಸಣ್ಣಪುಟ್ಟ ವ್ಯತ್ಯಾಸ ಎಂದು ಹೇಳುವುದಾದರೆ, ಕೊರೊನಾ ಲಕ್ಷಣಗಳು ತಾವು ಬೀರುವ ಪ್ರಭಾವ, ಪರಿಣಾಮವನ್ನು ಕಡಿಮೆ ಮಾಡಿವೆ. ಕಳೆದ ಎರಡು ತಿಂಗಳು ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಕೆಯಾಗಿತ್ತು ಎಂದು ಮಾಹಿತಿ ನೀಡಿದರು.
ಮಕ್ಕಳಿಗೆ ವಿರಳವಾಗಿ ಕೊವಿಡ್ ಹರಡುತ್ತಿದೆ. ಮನೆಯಲ್ಲಿ ಪಾಸಿಟಿವ್ ಇದ್ದರೆ ಅದರಿಂದಾಗಿ ಮಕ್ಕಳಿಗೆ ಕೊರೊನಾ ಬಂದ ಉದಾಹರಣೆಗಳಿವೆ. ಇನ್ನು ಕೆಲವರಿಗೆ ಮನೆಯ ಹಿರಿಯರಿಗೆ ಕೊವಿಡ್ ಇದ್ದರೂ ಮಕ್ಕಳಿಗೆ ಹರಡಿಲ್ಲ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಚೆನ್ನಾಗಿ ಇರುತ್ತದೆ ಎನ್ನಬಹುದು. ಹಾಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಆತಂಕಕಾರಿ ಸಮಸ್ಯೆ ಏನಿಲ್ಲ ಎಂದು ಹೇಳಬಹುದು. ದೀರ್ಘಕಾಲಿಕ ಖಾಯಿಲೆಗಳಿದ್ದರೆ ಸಮಸ್ಯೆ ಆಗಬಹುದಷ್ಟೆ ಎಂದು ತಿಳಿಸಿದರು.
ಮತ್ತೆ ಮತ್ತೆ ಬರದಂತೆ ತಡೆಯಲು ಲಸಿಕೆ ಬೇಕು. ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಬೇಕು. ಲಸಿಕೆ ತೆಗೆದುಕೊಂಡರೂ ಪ್ರಯೋಜನವಿಲ್ಲ ಅಥವಾ ಲಸಿಕೆಯಿಂದ ಅಡ್ಡಪರಿಣಾಮಗಳಿವೆ, ಲಸಿಕೆ ತಗೊಂಡ್ರೆ ಮಾಸ್ಕ್ ಬೇಡ ಹೀಗೆ ಜನರಲ್ಲಿ ಅನೇಕ ತಪ್ಪು ತಿಳುವಳಿಕೆಗಳಿವೆ. ಲಸಿಕೆ ತೆಗೆದುಕೊಂಡರೆ ಕೊರೊನಾ ಬರುವ ಪ್ರಮಾಣ ಗುಣಲಕ್ಷಣ ಕಡಿಮೆ. ರೋಗದ ಗಂಭೀರತೆ ಕಡಿಮೆ. ಹಾಗೆಂದು ಲಸಿಕೆ ತೆಗೆದುಕೊಂಡರೆ ನೂರಕ್ಕೆ ನೂರು ಎಲ್ಲರಿಗೂ ಕೊರೊನಾ ಬರೋದಿಲ್ಲ ಎಂದಲ್ಲ. ನೂರರಲ್ಲಿ ಶೇ. 70ರಷ್ಟು ಮಂದಿಗೆ ಕೊರೊನಾ ಬರುವುದಿಲ್ಲ ಎಂದು ಅರಿವು ಮೂಡಿಸಿದರು.
ಈ ಬಗ್ಗೆ ಅಧ್ಯಯನ ಇನ್ನೂ ನಡೆಯುತ್ತಿದೆ. ಒಂದು ಲಸಿಕೆ ಡೋಸ್ನಿಂದ ಮತ್ತೊಂದು ಡೋಸ್ ನಡುವೆ ದಿನದ ಅಂತರದ ಬಗ್ಗೆ ಅಧ್ಯಯನ, ಪರಿಣಾಮ, ಪರಿಶೀಲನೆ ಆಗ್ತಾ ಇದೆ. ಗಾಳಿಸುದ್ದಿಗೆ ತಲೆಕೊಡದೆ ಲಸಿಕೆ ತೆಗೆದುಕೊಳ್ಳಿ. ಲಸಿಕೆ ತೆಗೆದುಕೊಂಡರೆ 10-15 ಶೇ. ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದು. ಅವು ಎಲ್ಲಾ ಲಸಿಕೆಯಲ್ಲೂ ಇರುವಂಥದ್ದು. ಜ್ವರ ಬರುವುದು ಇತ್ಯಾದಿ. ಮಕ್ಕಳಿಗೆ ಇಂಜೆಕ್ಷನ್ ಕೊಟ್ಟಾಗ ಆಗುವಂಥ ಸಣ್ಣ ಸಮಸ್ಯೆಗಳವು. ಅದಕ್ಕಾಗಿ ಭಯ ಪಡಬೇಕಾದ್ದಿಲ್ಲ ಎಂದು ಧೈರ್ಯ ಹೇಳಿದರು.
ಟೆಸ್ಟಿಂಗ್ ರೇಟ್ ಹೆಚ್ಚಿಸಿ ಎಂದ ಕೇಂದ್ರ ಬಳಿಕ, ಸಾಂಕ್ರಾಮಿಕ ರೋಗತಜ್ಞ ಡಾ. ಸುನಿಲ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಳೆದ ಕೆಲವು ತಿಂಗಳುಗಳಿಗೆ ಹೋಲಿಸಿದರೆ ಈಗ ಪ್ರಕರಣ ಸಂಖ್ಯೆಯಲ್ಲಿ ಶೇ. 38ರಷ್ಟು ಏರಿಕೆ ಉಂಟಾಗಿದೆ. ಸಾವು ಸಂಭವಿಸುತ್ತಿರುವ ಪ್ರಮಾಣದಲ್ಲಿ ಕೂಡ ಹೆಚ್ಚಳ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಮತ್ತೆ ಏರಿಕೆ ಗತಿಯಲ್ಲಿ ಅಂಕಿ ಅಂಶಗಳು ಸಾಗುತ್ತಿದೆ. ದೇಶದಲ್ಲಿ ಕೇರಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಕರ್ನಾಟಕ ರಾಜ್ಯಗಳಲ್ಲಿ ಕೊವಿಡ್-19 ಹೆಚ್ಚಾಗುತ್ತಿದೆ. ಟೆಸ್ಟಿಂಗ್ ರೇಟ್ ಮತ್ತು ಕಾಂಟಾಕ್ಟ್ ಟ್ರೇಸಿಂಗ್ ಜಾಸ್ತಿ ಮಾಡಿ ಎಂದು ಕೇಂದ್ರದಿಂದ ಹೇಳುತ್ತಿದ್ದಾರೆ. ಟೆಸ್ಟಿಂಗ್ ಹೆಚ್ಚಾದಂತೆ ಪ್ರಕರಣ ಸಂಖ್ಯೆಯೂ ಖಂಡಿತವಾಗಿ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊರೊನಾ ತೀವ್ರಗತಿಯಲ್ಲಿ ಇದ್ದಾಗ ರಾಜ್ಯದಲ್ಲಿ ಸುಮಾರು 1 ಲಕ್ಷದಷ್ಟು ಕೊವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಕ್ರಮೇಣವಾಗಿ ಕೊವಿಡ್ ಪರೀಕ್ಷೆ ಮಾಡುವ ಸಂಖ್ಯೆ 30ರಿಂದ 40 ಸಾವಿರಕ್ಕೆ ಬಂತು. ಈಗ ಮತ್ತೆ ಹೆಚ್ಚು ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೆ ಲಾಕ್ ಡೌನ್ ಮಾಡುವ ಸಾಧ್ಯತೆ ಬರಬಹುದು. ಕೊರೊನಾ ತಡೆಗಟ್ಟಲು ಬೇರೆ ಯಾವ ಮಾರ್ಗಗಳೂ ನಮ್ಮ ಮುಂದೆ ಕಾಣದಾದರೆ, ಲಾಕ್‌ಡೌನ್ ಅನಿವಾರ್ಯ ಆಗಬಹುದು. ಜನರ ಮನೋಭಾವ ಬದಲಾವಣೆ ಆಗಿಲ್ಲ ಅಂದ್ರೆ ಇದು ಅವಶ್ಯಕ ಎಂದು ಹೇಳಿದರು.
ಲಸಿಕೆ ತೆಗೆದುಕೊಂಡವರಿಗೆ ಕೊರೊನಾ ಬರೋದೇ ಇಲ್ಲ ಅಂತಲ್ಲ. ಲಸಿಕೆ ಪಡೆದ 100 ಜನರಲ್ಲಿ 70 ಜನಕ್ಕೆ ಕೊರೊನಾದಿಂದ ರಕ್ಷಣೆ ಸಿಗಬಹುದು. ರೋಗನಿರೋಧಕ ಶಕ್ತಿಯೂ ಎಲ್ಲರಲ್ಲಿ ಒಂದೇ ರೀತಿ ಇರುವುದಿಲ್ಲ. ಹಾಗಾಗಿ ಎಲ್ಲರೂ ಕೊವಿಡ್ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೆ, ಕೊವಿಡ್ ಲಸಿಕೆಯ ಒಂದು ಮತ್ತು ಎರಡನೇ ಡೋಸ್ ಅಂತರ ಸರಿಯಾಗಿರುವುದು ಒಳ್ಳೆಯದು ಎಂದು ತಿಳಿಸಿದರು.
ಕೊರೊನಾ ಬಗ್ಗೆ ಜನರಲ್ಲಿ ಅತಿಯಾದ ಅಸಡ್ಡೆ ಅಥವಾ ಅತಿಯಾದ ಭಯ ಇದೆ ಎಂದು ಶ್ವಾಸಕೋಶತಜ್ಞ ಡಾ. ಚೇತನ್ ಮಾತನಾಡಿದರು. ಈ ಎರಡು ಭಾವಗಳೂ ಒಳ್ಳೆಯದಲ್ಲ. ಕೊವಿಡ್-19ನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ಪಲ್ಸ್ ಆಕ್ಸಿಮೀಟರ್ ಬಳಸಿಕೊಳ್ಳಬೇಕು. ಸೋಂಕು ತಗುಲಿದಾಗ ಅದರ ಗುಣಲಕ್ಷಣಗಳನ್ನು ನೋಡಿ ಕ್ರಮ ತೆಗೆದುಕೊಳ್ಳಬೇಕು. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ವಿದೇಶಿ ಮಾಡೆಲ್ ಕಾಪಿ ಮಾಡಬಾರದು. ನಮ್ಮ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಹೇಗಿವೆ ಎಂದು ನೋಡಿ ಅದರ ಅನುಸಾರ ನಿಯಮಾವಳಿ ರೂಪಿಸಬೇಕು. ಜನರಿಗೆ ಅರಿವು ಮೂಡಿಸುವುದು ಎಲ್ಲಕ್ಕಿಂತ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ಸರ್ಕಾರವೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: MITಯಲ್ಲಿ ಇಂದು 27 ವಿದ್ಯಾರ್ಥಿಗಳಿಗೆ ಕೊರೊನಾ: ಕಾಲೇಜು ಕ್ಯಾಂಪಸ್ ಆಯ್ತು ಕಂಟೇನ್ಮೆಂಟ್ ಜೋನ್
ದೇಶದ ವಿವಿಧೆಡೆ ಮತ್ತೆ ಕೊರೊನಾ ಆತಂಕ: ಮಾಸ್ಕ್ ಕಡ್ಡಾಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ
Published On - 6:34 am, Thu, 18 March 21