ಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ. ಸರ್ಕ್ಯೂಟ್‌ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದೆ.
ನವೆಂಬರ್ 26, 2008ರಂದು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಉಗ್ರರು ಸಮುದ್ರ ಮಾರ್ಗದಲ್ಲಿ ಬಂದು ಮುಂಬೈನಲ್ಲಿ ದಾಳಿ ನಡೆಸಿದ್ದರು. ಈ ಭಯಾನಕ ದಾಳಿಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿ 166 ಮಂದಿ ಮೃತಪಟ್ಟಿದ್ದರು. ನವೆಂಬರ್ 26, 2020ಕ್ಕೆ ಮುಂಬೈ ಮೇಲೆ ನಡೆದ ಉಗ್ರರ ದಾಳಿಗೆ 12 ವರ್ಷಗಳಾಗಿದೆ. ಈ ನಡುವೆ ಇಂದು ಕಡಲ ನಗರಿಯಲ್ಲಿ ಕಿಡಿಗೇಡಿಗಳ ಈ ಕೃತ್ಯ ಭಯವನ್ನುಟ್ಟಿಸಿದೆ.
ಇನ್ನು ಕಾಂಪೌಂಡ್ ಮೇಲೆ ‘ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಆ್ಯಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆ್ಯಂಡ್ ಮನ್ವೇದಿಸ್’ ಎಂದು ಇಂಗ್ಲೀಷ್ನಲ್ಲಿ ಬರೆದು ಬರಹದ ಮೂಲಕ ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಅನುವಾದ ಸಂಘಿಗಳು ಮತ್ತು ಮನುವಾದಿಗಳ ವಿರುದ್ಧ ಹೋರಾಟಕ್ಕೆ ಲಷ್ಕರ್-ಇ-ತೊಯ್ಬಾ, ತಾಲಿಬಾನ್ ಸಂಘಟನೆಗೆ ಆಹ್ವಾನಿಸಲು ನಮ್ಮನ್ನು ಪ್ರೇರೇಪಿಸಬೇಡಿ ಎಂದು.
ಸದ್ಯ ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿದ್ದು ವಿವಾದಿತ ಬರಹದ ಮೇಲೆ ಪೇಂಟಿಂಗ್ ಮಾಡಿಸುತ್ತಿದ್ದಾರೆ. ಆರೋಪಿಗಳ ಪತ್ತೆಗೆ ಕದ್ರಿ ಪೊಲೀಸರಿಂದ ಶೋಧಕಾರ್ಯ ಶುರು ಮಾಡಿದ್ದು ಬರಹವಿದ್ದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.
Published On - 8:42 am, Fri, 27 November 20