ಬೆಂಗಳೂರು: ಕಳಂಕಿತ ಆಸ್ತಿ ಪತ್ತೆಯಾದ ದಿನದಿಂದ PMLA ಕಾಯ್ದೆಯು ಅನ್ವಯ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. PMLA ಕಾಯ್ದೆ ಪೂರ್ವಾನ್ವಯ ಪ್ರಶ್ನಿಸಿ ಅವ್ವಾ ಮಾದೇಶ ಸೇರಿ ಹಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದು, ಜಾರಿ ನಿರ್ದೇಶನಾಲಯದಿಂದ ಆಸ್ತಿ ಜಪ್ತಿ ಪ್ರಶ್ನಿಸಿದ್ದರು.
ಅಪರಾಧ ಮೂಲದ ಹಣವನ್ನು ಪ್ರಸಾರ ಮಾಡುವುದು ಗಂಭೀರ ವಿಚಾರ ಎಂದು ಹೇಳಿದ ನ್ಯಾಯಪೀಠ ಇದು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಅನುಸೂಚಿತ ಅಪರಾಧವಿಲ್ಲದಿದ್ದರೂ ಕಳಂಕಿತ ಸಂಪತ್ತು ಜಪ್ತಿ ಮಾಡಲು PMLA ಕಾಯ್ದೆ ಬಳಸಬಹುದು. ಕಾಯ್ದೆಯು ಪೂರ್ವಾನ್ವಯವಲ್ಲವೆಂದು ಅಪರಾಧ ಅಳಿಸಿಹೋಗುವುದಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ಅಕ್ರಮ ಆಸ್ತಿಗಳಿಕೆಯನ್ನು ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಸಂಪತ್ತಿನ ಮೂಲದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದಾಗ ಕಳಂಕಿತ ಸಂಪತ್ತು ಪತ್ತೆಯಾದ ದಿನಾಂಕದಿಂದ ಕಾಯ್ದೆ ಅನ್ವಯಿಸಬಹುದು. PMLA ಕಾಯ್ದೆ ಸೆ.3ರಿಂದ ಅನ್ವಯವಾಗಲಿದೆ ಎಂದು ನ್ಯಾ.ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿದೆ.
ಏನಿದು PMLA ಕಾಯ್ದೆ ?
PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ) ಹಣ ವರ್ಗಾವಣೆಯನ್ನು ತಡೆಗಟ್ಟಲು ಮತ್ತು ಹಣ ವರ್ಗಾವಣೆಯಿಂದ ಪಡೆದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿಗೆ ತಂದಿರುವ ಕಾಯ್ದೆಯಾಗಿದೆ. ಇದು 2005, 2009, 2012ರಲ್ಲಿ ತಿದ್ದುಪಡಿಯಾಗಿದೆ.