ಶಿವಮೊಗ್ಗ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಲ್ಲಿ ಕಳೆದ 4 ತಿಂಗಳಿಂದ ಹೋರಾಟ ನಡೆಯುತ್ತಿದೆ. ಆದರೆ ಕೇಂದ್ರ ಸರ್ಕಾರ ಇದನ್ನ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಶಿವಮೊಗ್ಗದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿದ್ದ ರಾಕೇಶ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ಎಂಎಸ್‌ಪಿ ಕಾನೂನು ಜಾರಿಗೆ ಬರಬೇಕು. ಮಾರುಕಟ್ಟೆಗಳಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು. ಇದಕ್ಕಾಗಿ ಬಹಳ ದೊಡ್ಡ ಆಂದೋಲನ ನಡೆಯುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ನಮ್ಮನ್ನ ಆಳಲು ಕಾಯ್ತಿವೆ. ತರಕಾರಿ ಸೇರಿ ಹಲವು ವಸ್ತುಗಳು ಮಾಲ್‌ನಲ್ಲಿ ಖರೀದಿ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ತಿನ್ನುವ ಆಹಾರ ಖರೀದಿಸಬೇಕಾಗುತ್ತೆ. ದೇಶದಲ್ಲಿರುವ ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಲೇಬೇಕಿದೆ. ಸರ್ಕಾರಿ ಸಂಸ್ಥೆಗಳನ್ನ ಖಾಸಗೀಕರಣ ಮಾಡಲಾಗುತ್ತಿದೆ. ಹಸಿವಿನ ವ್ಯಾಪಾರದ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಮೇ ಅಥವಾ ಜೂನ್‌ಗೆ ಹೋರಾಟ ಮುಗಿಯುತ್ತೆ ಎಂದು ಕೇಂದ್ರ ಸರ್ಕಾರ ತಿಳಿದಿದೆ. ಆದರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲೇಬೇಕು. ಇಲ್ಲದಿದ್ರೆ ಹೋರಾಟ ನಿರಂತರವಾಗಿ ಮುಂದುವರಿಯುತ್ತೆ. ಧರ್ಮ, ಜಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ರಾಕೇಶ್ ಟಿಕಾಯತ್ ಆರೋಪ ಮಾಡಿದ್ದಾರೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಷ್ಟ್ರೀಯ ರೈತ ಮುಖಂಡ ಯುದ್ವೀರ್ ಸಿಂಗ್ ‘ದೇಶದ ಅರ್ಥವ್ಯವಸ್ಥೆ, ಆಡಳಿತದ ಹಿಂದೆ ಪ್ರಭಾವಿಗಳ ಕೈವಾಡ’ ಇದೆ. ಜನರು ಇದನ್ನು ಅರಿಯುವ ಅಗತ್ಯವಿದೆ ಎಂದಿದ್ದಾರೆ.
ದೇಶದಲ್ಲಿರುವ ಸಾಮಾನ್ಯ ಜನರ ಪರಿಸ್ಥಿತಿ ಹೇಳತೀರದಾಗಿದೆ. ದೇಶ ಹೇಗೆ ಚೇತರಿಕೆ ಕಾಣಬೇಕೆಂದು ಚರ್ಚೆ ನಡೀಬೇಕಿದೆ. ರೈತರ ಹೋರಾಟಕ್ಕೆ ಉದ್ಯಮಿಗಳು ಕೈಜೋಡಿಸಬೇಕಾಗಿದೆ. ದೇಶದ ಶೇಕಡವಾರು ರೈತರಿಗೆ ದಾರಿ ತಪ್ಪಿಸಲಾಗುತ್ತಿದೆ. ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳ ಬಗ್ಗೆ ತಪ್ಪು ಸಂದೇಶ ಹೋಗುತ್ತಿದೆ. ಕಾಯ್ದೆಗಳ ಬಗ್ಗೆ ದೇಶದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಂಕಷ್ಟ ಸಮಯದಲ್ಲಿ ಕೇಂದ್ರ ಕಾಯ್ದೆ ಜಾರಿ ಮಾಡಿದೆ. ಎಲ್ಲವೂ ಸರಿಯಾಗಿದ್ದರೆ ಆತುರವಾಗಿ ಏಕೆ ಜಾರಿ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರೈತ ಮುಖಂಡ ಯುದ್ವೀರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್ಗೆ ಸ್ವಾಗತ