ಭಾರತವು ಕೋವಿಡ್- 19 ಎರಡನೇ ಅಲೆಯನ್ನು ಎಷ್ಟು ವೇಗವಾಗಿ ತಡೆಯುತ್ತದೆ ಎಂಬುದರ ಮೇಲೆ ದೇಶದ ಬೆಳವಣಿಗೆ ಆಧಾರವಾಗಿದೆ ಎಂದು ಗುರುವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಕೊರೊನಾ ಮೊದಲ ಅಲೆಯಲ್ಲಿ ಈ ಮಟ್ಟದ ತನಕ ಆರ್ಥಿಕತೆ ಹೋಗಿರಲಿಲ್ಲ. ತಕ್ಷಣದ ಸ್ಥಿತಿಯಲ್ಲಿ ಸುತ್ತಮುತ್ತಲ ಅನಿಶ್ಚಿತತೆಯ ಕಾರಣಕ್ಕೆ ಇಳಿಕೆಯತ್ತ ದೂಡಿದೆ. “ಕೊರೊನಾ ಎರಡನೇ ಅಲೆಯಿಂದ ಭಾರತದ ಆರ್ಥಿಕತೆ ಮೇಲೆ ಪ್ರಭಾವ ಆಗಿದ್ದು, ಮತ್ತೊಂದು ಬಂಪರ್ ರಾಬಿ ಬೆಳೆಯ ಕಾರಣಕ್ಕೆ ಬೆಂಬಲ ಸಿಕ್ಕಿದಂತಾಗಿದೆ. ಇದರಿಂದಾಗಿ ಆರ್ಥಿಕತೆಯ ಹಲವು ವಲಯಗಳಲ್ಲಿ ಮಾರ್ಚ್ ತನಕ ಚಲನೆ ಅದರಲ್ಲೂ ಹೌಸಿಂಗ್, ರಸ್ತೆ ನಿರ್ಮಾಣ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ವಲಯಕ್ಕೆ ಚೇತರಿಕೆಯನ್ನು ದೊರಕಿಸಿತು,” ಎಂದು ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್- 19ನಿಂದ ಆರ್ಥಿಕ ಚೇತರಿಕೆಯು ಅತಿ ಮುಖ್ಯವಾಗಿ ಖಾಸಗಿ ಬೇಡಿಕೆ ಮೇಲೆ ಅವಲಂಬನೆ ಆಗಿದೆ. ಅದು ಕೂಡ ಅಲ್ಪಾವಧಿಯಲ್ಲಿ ಹೆಚ್ಚು ಬಳಕೆ ಪ್ರಮಾಣದಿಂದ ಆಗಿದ್ದು, ಇದಕ್ಕಾಗಿ ಹೂಡಿಕೆಯು ವೇಗ ಪಡೆದುಕೊಂಡಲ್ಲಿ ಚೇತರಿಕೆ ಸ್ಥಿರವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ವಿವಿಧ ವಲಯಗಳಲ್ಲಿನ ಸುಧಾರಣೆ ಕ್ರಮಗಳು ಭಾರತದಲ್ಲಿ ಬೆಳವಣಿಗೆ ಸಾಧ್ಯತೆಯನ್ನು ಸುಸ್ಥಿರತೆ ಆಧಾರದಲ್ಲಿ ಹೆಚ್ಚಿಸಿತು. ಮುಖ್ಯವಾಗಿ ಈಕ್ವಿಟಿ ಮಾರುಕಟ್ಟೆ 2020ರ ಮಾರ್ಚ್ನ ಕನಿಷ್ಠ ಮಟ್ಟದಿಂದ ಭಾರೀ ವೇಗದಲ್ಲಿ ಚೇತರಿಕೆ ಕಾಣಿಸಿಕೊಂಡಿತು.
ಅಂದಹಾಗೆ, ಭಾರತದಲ್ಲಿ ಹಣದುಬ್ಬರದ ನಿಯಂತ್ರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇನ್ನು ಕೋವಿಡ್- 19 ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುವ ಕಾಲಕ್ಕೆ ಎರಡನೇ ಅಲೆಯು ತೀಕ್ಷ್ಣವಾಗಿ ಪ್ರಭಾವ ಬೀರಿದ್ದರಿಂದ ಆರ್ಥಿಕತೆ ಬಗ್ಗೆ ಆತಂಕ ಹೆಚ್ಚಾಗಿದೆ. ಈಚೆಗಷ್ಟೇ ಆರ್ಬಿಐನಿಂದ 99 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇನ್ನು ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ವಿವಿಧ ವಲಯಗಳಿಂದ ಆತಂಕ ವ್ಯಕ್ತವಾಗುತ್ತಲೇ ಇದೆ.
ಇದನ್ನೂ ಓದಿ: ಆರ್ಥಿಕತೆ ಮೇಲೆ ಕೋವಿಡ್- 19 ಪರಿಣಾಮ ಅಗಾಧ; ಈ ಬಿಕ್ಕಟ್ಟಿನ ನಂತರ ಜಗತ್ತು ಹೀಗಿರುವುದಿಲ್ಲ ಎಂದ ಪಿಎಂ ಮೋದಿ
(RBI in it’s annual report said that, India growth prospects depend on how fast covid-19 can arrest)