
ಮಧ್ಯಪ್ರದೇಶದಲ್ಲಿ ಸರ್ಕಾರ ಸುಭದ್ರ!
ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮ್ಯಾಜಿಕ್ ನಂಬರ್ ಪಡೆಯಲು ಕನಿಷ್ಟ 9 ಕ್ಷೇತ್ರಗಳನ್ನಾದರೂ ಗೆಲ್ಲುವುದು ಅನಿವಾರ್ಯವಾಗಿತ್ತು. ಬಿಜೆಪಿ ಗೆದ್ದಿರುವುದು11. ಇನ್ನು 12ಕ್ಷೇತ್ರಗಳಲ್ಲಿ ಅದು ಮುಂದಿದೆ. ಒಟ್ಟು 28ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಹೀಗಾಗಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿದೆ.
ಬಿಜೆಪಿಗೆ ಹಬ್ಬದ ಬೋನಸ್!
ಪ್ರಧಾನಿ ಮೋದಿಯವರ ತವರು ರಾಜ್ಯದಲ್ಲಿ ಬಿಜೆಪಿಯ ಬೇರುಗಳು ಇನ್ನೂ ಆಳವಾಗಿವೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಗುಜರಾತ್ ಬಿಜೆಪಿ ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಈ ಕ್ಷೇತ್ರಗಳು ತೆರವಾಗಿದ್ದವು. ಹೀಗಾಗಿ ಗುಜಾರಾತ್ ಬಿಜೆಪಿಗೆ ಇದು ಹಬ್ಬದ ಬೋನಸ್!
ನೆಲಕಚ್ಚಿದ ಕುಸ್ತಿಪಟು!
ಹರಿಯಾಣ: ಹರಿಯಾಣದ ಬರೋಡಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಕುಸ್ತಿಪಟು ಯೋಗೀಶ್ವರ್ ದತ್ ನೆಲಕಚ್ಚಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ನ ಇಂದು ರಾಜ್ ವಿಜಯದ ನಗೆ ಬೀರಿದ್ದಾರೆ.
ಐದರಲ್ಲಷ್ಟೇ ನಗು!
ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿಯು ಏಳು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಅಖಿಲೇಶ್ ಯಾದವ್ ಮುಂದಾಳತ್ವದ ಸಮಾಜವಾದಿ ಪಕ್ಷ ಇನ್ನೆರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಲ್ಲಷ್ಟೇ ಯಶ ಕಂಡಿದೆ.
ಹಾರಿದ ಸ್ವತಂತ್ರರ ಪತಾಕೆ
ನಾಗಾಲ್ಯಾಂಡ್: ಪರ್ವತಗಳಿಂದ ಕೂಡಿರುವ ಈಶಾನ್ಯ ಭಾರತದ ರಾಜ್ಯ ನಾಗಾಲ್ಯಾಂಡ್ ನಲ್ಲೂ ಇಂದು 2ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಲಿದೆ. ಎರಡೂ ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳೆ ಮುನ್ನಡೆಯ ಹಾದಿಯಲ್ಲಿದ್ದಾರೆ ಎಂಬುದು ವಿಶೇಷ.
ಜಾರ್ಖಂಡ್: ಪ್ರಮುಖ ಪ್ರಾದೇಶಿಕ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾಕ್ಕೆ ಕಾಂಗ್ರೆಸ್ ಸ್ಪರ್ಧೆಯೊಡ್ಡುವಲ್ಲಿ ಸಫಲವಾಗಿದೆ. ಈ ಎರಡು ಪಕ್ಷಗಳು ತಲಾ ಒಂದೊಂದು ಕ್ಷೇತ್ರಗಳನ್ನು ವಶಪಡಿಸಿಕೊಂಡಿವೆ.
ಮಣಿಪುರ: ಮುಕುಟಮಣಿ ಮಣಿಪುರದಲ್ಲಿ 5 ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಘೋಷಣೆಯಾದ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಮೂರು ಕ್ಷೇತ್ರಗಳಲ್ಲಿ ಈಗಾಗಲೇ ವಿಜಯದ ನಗುಬೀರಿರುವ ಕಮಲದ ದಳಗಳು ಒಂದು ಕ್ಷೇತ್ರದಲ್ಲಿ ಮುನ್ನೆಡೆ ಗಳಿಸಿವೆ. ಓರ್ವ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿರುವುದು ವಿಶೇಷ.
ಒಡಿಶಾ: ಒಟ್ಟು 2ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನಾಯಕತ್ವದ ಬಿಜು ಜನತಾದಳ ಒಂದು ಸ್ಥಾನ ಗಳಿಸಿದೆ. ಇಲ್ಲೂ ಸ್ವತಂತ್ರ ಅಭ್ಯರ್ಥಿಯೋರ್ವರು ಆಯ್ಕೆಯಾಗಿರುವುದು ಪಕ್ಷ ರಾಜಕೀಯಕ್ಕೆ ಪರ್ಯಾಯವಾಗಿ ಕಾಣಿಸುತ್ತಿದೆ.
ತೆಲಂಗಾಣ: ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರಘುನಂದನ್ ರಾವ್ ತೆಲಂಗಾಣ ರಾಷ್ಟ್ರ ಸಮಿತಿಯ ಸೊಲಿಪೇಟಾ ಸುಜಾತಾ ಅವರಿಗೆ ತೀವ್ರ ಹಣಾಹಣಿ ನೀಡಿದ್ದಾರೆ. ಕೇವಲ1470 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಛತ್ತೀಸ್ಗಢ; ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಜಯಗಳಿಸುವತ್ತ ದಾಪುಗಾಲಿಟ್ಟಿದೆ. ಕಾಂಗ್ರೆಸ್ಸಿಗೆ 55 ಪ್ರತಿಶತ, ಬಿಜೆಪಿಗೆ 30 ಪ್ರತಿಶತ ಮತ್ತು 2 ಪ್ರತಿಶತ ಮತಗಳು ನೋಟಾಗೆ ಚಲಾವಣೆಗೊಂಡಿವೆ.