ಬಾಗಲಕೋಟೆ: ಹಲವಾರು ವರ್ಷ ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನೆಯ ದಾರಿ ಹಿಡಿದಿದ್ದಾರೆ. ಅವರ ಕೈಯಲ್ಲಿ ಎಂಟು ವಾದನಗಳಲ್ಲಿ ಸುಮಧುರ ಸಂಗೀತ ಅರಳುತ್ತದೆ. ಯಾರವರು..? ಏನವರ ಸಂಗೀತ ಸಾಧನೆ ಅನ್ನೋದನ್ನ ಇಲ್ಲಿ ತಿಳಿಯಿರಿ.
ತಬಲಾ.. ಕ್ಯಾಸಿಯೊ.. ಡ್ರಮ್.. ಗಿಟಾರ್.. ಹೀಗೆ ವಿವಿಧ ವಾದ್ಯ ನುಡಿಸುವ ಮಾಜಿ ಯೋಧನ ಹೆಸರು ಶಂಕರ್ ಲಮಾಣಿ. ಸಿಆರ್ಪಿಎಫ್ನಲ್ಲಿ ದೇಶ ಸೇವೆ ಮಾಡಿದ ವೀರಯೋಧ. ಸೇನೆಯಲ್ಲಿದ್ದಾಗಲೂ.. ಸಂಗೀತ ಸಾಧನ ಕೈ ಬಿಡದ ಇವರು, ಈಗ ಸುಮಧುರ ಸಂಗೀತ ಹೊರಡಿಸುತ್ತಿದ್ದಾರೆ. 23 ವರ್ಷ ಸಿಆರ್ಪಿಎಫ್ನಲ್ಲಿ ಸೇವೆ ಸಲ್ಲಿಸಿ, ಬಳಿಕ ಊರಿಗೆ ವಾಪಸ್ ಬಂದ ಶಂಕರ್ ಲಮಾಣಿ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅನೇಕ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದು, ಸಂಗೀತ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ.
ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಶಂಕರ್ ಲಮಾಣಿ, ಗದಗದ ಪುಟ್ಟರಾಜ ಗವಾಯಿಗಳ ಮಠ, ಗುಳೇದಗುಡ್ಡ ಪಂಚಾಕ್ಷರಿ ಸಂಗೀತ ವಿದ್ಯಾಲಯದಲ್ಲಿ ಸಂಗೀತಾಭ್ಯಾಸ ಮಾಡಿದ್ರು. 1994 ರಲ್ಲಿ ಸಿಆರ್ಪಿಎಫ್ ಸೇರಿ ದೇಶದ ವಿವಿಧ ಭಾಗದಲ್ಲಿ ಕೆಲಸ ಮಾಡಿದ್ರು. ಆಗ ಸಿಆರ್ಪಿಎಫ್ ಮ್ಯೂಜಿಕ್ ಬ್ಯಾಂಡ್ನಲ್ಲಿ ಹತ್ತು ವರ್ಷಸೇವೆ ಸಲ್ಲಿಸಿದ್ದಾರೆ. 2016 ರಲ್ಲಿ ನಿವೃತ್ತರಾದ ಶಂಕರ್ ಲಮಾಣಿ, ಪ್ರತಿನಿತ್ಯ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬ ಯೋಧ ಇಂದು ಸಂಗೀತ ವಾದ್ಯ ಹಿಡಿದು ಸಂಗೀತ ಪಾಠ ಹೇಳುತ್ತಿದ್ದಾರೆ. ಇವರ ಗರಡಿಯಲ್ಲಿ ಅನೇಕ ವಿದ್ಯಾರ್ಥಿಗಳು ಪಳಗುತ್ತಿದ್ದು, ಮಾಜಿ ಯೋಧನ ಕಾರ್ಯವನ್ನ ಜನ ಶ್ಲಾಘಿಸ್ತಿದ್ದಾರೆ.