ಲೈಟ್ಮನ್ಗಳಿಗೆ 1 ಕೋಟಿ ಹೆಚ್ಚು ಕೊಟ್ರೂ ಸರಿ.. ಹಸುವಿನ ಕತೆ ಹೇಳಿ ನಿರ್ಮಾಪಕರಿಗೆ ಕಂಡೀಷನ್ ಹಾಕಿದ ಡಿ ಬಾಸ್ ದರ್ಶನ್!
Roberrt Success Meet: ಮುಂದೆ ನನ್ನ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಬರುವ ನಿರ್ಮಾಪಕರು ಸ್ವತಃ ತಾವೇ ಹಂಚಿಕೆಯನ್ನೂ ಮಾಡಬೇಕು. ಡಿಸ್ಟ್ರಿಬ್ಯೂಟ್ ಮಾಡುವ ಸಾಮರ್ಥ್ಯ ಇದ್ದರೆ ಮಾತ್ರ ನಿರ್ಮಾಣ ಮಾಡಲು ಬನ್ನಿ ಎಂದು ಕೇಳಿದ್ದಾರೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕೇವಲ ನಾಲ್ಕು ದಿನದಲ್ಲಿ ಸುಮಾರು 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಕೊರೊನಾ ಲಾಕ್ಡೌನ್ ಬಳಿಕ ತೆರೆಕಂಡು ಭರ್ಜರಿ ಯಶಸ್ಸು ಪಡೆದಿದೆ. ಸಿನಿಮಾ ಯಶಸ್ಸಿನ ಸಂಭ್ರಮಾಚರಣೆ ಇಂದು (ಮಾರ್ಚ್ 16) ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದಿದೆ. ಈ ಸಂದರ್ಭ ಮಾತನಾಡಿದ ಡಿ ಬಾಸ್ ದರ್ಶನ್, ಡಿಸ್ಟ್ರಿಬ್ಯೂಷನ್ ಹೆಸರಲ್ಲಿ ಹಣ ಲೂಟಿ ಹೊಡೆಯುವ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅದಕ್ಕಾಗಿ ನಿರ್ಮಾಪಕರಿಗೆ ಕೆಲವು ಕಂಡೀಷನ್ಗಳನ್ನೂ ಹಾಕಿದ್ದಾರೆ.
ಮುಂದೆ ನನ್ನ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಬರುವ ನಿರ್ಮಾಪಕರು ಸ್ವತಃ ತಾವೇ ಹಂಚಿಕೆಯನ್ನೂ ಮಾಡಬೇಕು. ಡಿಸ್ಟ್ರಿಬ್ಯೂಟ್ ಮಾಡುವ ಸಾಮರ್ಥ್ಯ ಇದ್ದರೆ ಮಾತ್ರ ನಿರ್ಮಾಣ ಮಾಡಲು ಬನ್ನಿ ಎಂದು ದರ್ಶನ್ ಕೇಳಿದ್ದಾರೆ. ಇದನ್ನು ಎಚ್ಚರಿಕೆ ಎಂದು ಬೇಕಾದರೂ ತಿಳಿದುಕೊಳ್ಳಿ. ಆದರೆ, ಡಿಸ್ಟ್ರಿಬ್ಯೂಷನ್ ಹೆಸರಲ್ಲಿ ಹಣ ಹೊಡೆಯುವುದು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಲೈಟ್ಮನ್ಗಳಿಗೆ ಒಂದು ಕೋಟಿ ಹೆಚ್ಚು ಖರ್ಚಾದರೂ ಸರಿ. ಅವರು ಕಷ್ಟಪಟ್ಟು ದುಡಿಯುತ್ತಾರೆ. ಆದರೆ, ಎಸಿ ಕೋಣೆಯಲ್ಲಿ ಕುಳಿತು ಹಣ ಹೊಡೆಯುವ ಡಿಸ್ಟ್ರಿಬ್ಯೂಟರ್ಗಳು ಇರಬಾರದು. ಸಿನಿಮಾದ ಕಾರಣಕ್ಕೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದಷ್ಟೇ ಮಾಡಿ, ಕುಳಿತಲ್ಲೇ ಹಣ ದೋಚುವ ಕೆಲಸ ಮಾಡುತ್ತಾರೆ ಕೆಲ ಡಿಸ್ಟ್ರಿಬ್ಯೂಟರ್ಗಳು ಎಂದು ಹೇಳಿದ್ದಾರೆ. ತಮ್ಮ ಹಿಂದಿನ ಕೆಲ ಸಿನಿಮಾಗಳಿಗೆ ಹಂಚಿಕೆದಾರರಿಂದ ಇನ್ನೂ ಹಣ ಬರಲು ಬಾಕಿ ಇದೆ ಎಂದು ಹೇಳಿದ್ದಾರೆ.
ಹಸುವಿನ ಕಥೆ ಏನು? ನಾವು ಅದರಿಂದ ಪಾಠ ಕಲಿಯಬೇಕು ಎಂದು ಹೇಳಿರುವ ದರ್ಶನ್ ಹಸುವಿನ ಕಥೆಯನ್ನು ಹೇಳಿಕೊಂಡಿದ್ದಾರೆ. ನಾನು ಮೊದಲು ಹಸು ಒಂದನ್ನು ತಂದು ಕಟ್ಟಿದ್ದೆ. ಅದು ದಿನಕ್ಕೆ 12 ಲೀ. ಹಾಲು ಕೊಡುತ್ತಿತ್ತು. ಹಾಲು ಕರೆಯಲು ಜನರನ್ನು ನೇಮಿಸಿದ್ದೆ. ಆತ ಒಂದು ದಿನ ಹಾಲು ಕರೆಯುವವ ಬಂದು ಆಗಲ್ಲ-ಹೋಗಲ್ಲ ಎಂದು ಕಾರಣ ಕೊಡುತ್ತಾ ಇದ್ದ. ಅದಕ್ಕೆ ಆಮೇಲೆ ನಾನೇ ಹಾಲು ಕರೆಯಲು ಕಲಿತೆ. ಮೊದಲ ದಿನ 8 ಲೀಟರ್ ಹಾಲು ಕರೆಯುವಾಗ್ಲೇ ಸಾಕಾಯ್ತು. ಆಮೇಲೆ ಪೂರ್ತಿ ಹಾಲು ಪಡೆಯಲು ಸಾಧ್ಯವಾಯ್ತು. ಹೀಗೆ ನಿರ್ಮಾಪಕರು ಕಷ್ಟವಾದ್ರೂ ಡಿಸ್ಟ್ರಿಬ್ಯೂಟ್ ಮಾಡೋ ಕೆಲಸ ಮಾಡಬೇಕು. ನಾವು ಶ್ರಮವಹಿಸಿ ದುಡಿದ ಹಣ, ಇನ್ಯಾರೋ ಕುಳಿತಲ್ಲೇ ಪಡೆಯುವಂತಾಗಬಾರದು ಎಂದು ತಿಳಿಸಿದ್ದಾರೆ.
Published On - 10:48 pm, Tue, 16 March 21