Puneeth Rajkumar Birthday ಪವರ್ ಸ್ಟಾರ್ಗೆ 46ನೇ ಹುಟ್ಟುಹಬ್ಬದ ಸಂಭ್ರಮ.. ಇಲ್ಲಿವೆ ಅಪ್ಪುನ ಕುತೂಹಲಕಾರಿ ಸಂಗತಿಗಳು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ಗೆ ಈಗ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಬರ್ತಡೇಗೆ ಅಪ್ಪು ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸ್ವಾರಸ್ಯಕರವಾದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ ಓದಿ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟಿದ್ದು ಮಾರ್ಚ್ 17, 1975ರಲ್ಲಿ. ಮದ್ರಾಸ್ನ ಸಿಎಸ್‌ಐ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನಿಸಿದ್ರು ಅಪ್ಪು. ಪುನೀತ್ ಹುಟ್ಟಿದಾಗ ಡಾ.ರಾಜ್ ಕುಮಾರ್ ಮಯೂರ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ರು. ಟೈಗರ್ ಪ್ರಭಾಕರ್ ಜತೆ ಕುಸ್ತಿ ದೃಶ್ಯವನ್ನ ಸೆರೆಹಿಡಿಯುವ ಟೈಮ್‌ನಲ್ಲಿ ಅಪ್ಪು ಜನಿಸಿದ ಸುದ್ದಿ ಡಾ.ರಾಜ್‌ಗೆ ತಲುಪಿತಂತೇ. ಅಪ್ಪುನ ಮೊದಲು ಎತ್ತಿಕೊಂಡಿದ್ದು ನಿರ್ದೇಶಕ ಭಗವಾನ್.
ಪುನೀತ್ ರಾಜ್ ಕುಮಾರ್ ಮೊದಲ ಹೆಸರು ಲೋಹಿತ್. ಅಪ್ಪು ಮೊದಲ ಸಿನಿಮಾ 1975ರಲ್ಲಿ ಬಂದ ಪ್ರೇಮದ ಕಾಣಿಕೆ. ಆಗಿನ್ನು ಅಪ್ಪು ಆರು ತಿಂಗಳ ಮಗು. ಚಿತ್ರೀಕರಣಕ್ಕೆ ಸಾಕಷ್ಟು ಮಕ್ಕಳು ಆಯ್ಕೆ ಆಗಿದ್ರು ಯಾರು ಸರಿಯಾಗಿ ಆಕ್ಟ್ ಮಾಡಲಿಲ್ವಂತೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಅಪ್ಪುನೇ ಹಾಕ್ಕೊಂಡು ಚಿತ್ರೀಕರಣ ಮಾಡಿದ್ರಂತೆ ಡಾ.ರಾಜ್. ಹೀಗೆ ಮುತ್ತುರಾಜನ ಕೊನೆಯ ಮುತ್ತು ಪುನೀತ್ ರಾಜ್ ಕುಮಾರ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ್ರು.
ವಿಶೇಷ ಅಂದ್ರೆ 1975ರಲ್ಲೇ ಸೂಪರ್ ಸ್ಟಾರ್ ರಜಿನಿಕಾಂತ್ ತಮಿಳು ಚಿತ್ರರಂಗಕ್ಕೆ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಡೆಬ್ಯು ಮಾಡಿದ್ದು. ಅದೇ ವರ್ಷ ಪುನೀತ್ ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಇಬ್ರು ಇದೀಗ ಸೂಪರ್ ಸ್ಟಾರ್ಗಳಾಗಿದ್ದಾರೆ.
ಅಂದ್ಹಾಗೆ ಮಾಸ್ಟರ್ ಲೋಹಿತ್ಗೆ ಅಪ್ಪು ಅಂತ ಮುದ್ದಾಗಿ ಹೆಸರಿಟ್ಟಿದ್ದು ಡಾ.ರಾಜ್ ಕುಮಾರ್ ತಾಯಿ ಲಕ್ಷ್ಮಮ್ಮನವರು. ತಮ್ಮ ಮುದ್ದಿನ ಕೊನೆಯ ಮೊಮ್ಮಗನನ್ನ ಪ್ರೀತಿಯಿಂದ ಅಪ್ಪು ಅಂತ ಕರೀತಿದ್ರು. ಅದೇ ಹೆಸ್ರಿನಲ್ಲೇ ಮನೆಯಲ್ಲೂ ಎಲ್ರು ಕರೆಯೋಕೆ ಶುರು ಮಾಡಿದ್ರು. ಇದೇ ಹೆಸ್ರು ಅವರ ಪೂರ್ತಿ ಪ್ರಮಾಣದ ನಾಯಕನಾದ ಚಿತ್ರಕ್ಕೂ ಟೈಟಲ್ ಆಯ್ತು.
ಅಪ್ಪು ಹೆಸ್ರರನ್ನ ಮಾಸ್ಟರ್ ಲೋಹಿತ್ನಿಂದ ಮಾಸ್ಟರ್ ಪುನೀತ್ ಅಂತ ಬದಲಾಯಿಸಲಾಯ್ತು. ಸುಮಾರು 16 ಚಿತ್ರಗಳಲ್ಲಿ ಮಾಸ್ಟರ್ ಲೋಹಿತ್ ಹೆಸರಲ್ಲೇ ಕಾಣಿಸಿಕೊಂಡಿದ್ರು. ಆದ್ರೆ ಮಾರ್ಚ್ 16, 1985ರಲ್ಲಿ ಮಾಸ್ಟರ್ ಪುನೀತ್ ಅಂತ ಹೆಸರು ಬದಲಾವಣೆ ಮಾಡಲಾಯ್ತು. ಈ ಬಗ್ಗೆ ಅಧಿಕೃತವಾಗಿ ನಿಯಮದಂತೆ ಪೇಪರ್ನಲ್ಲಿ ಪ್ರಕಟಣೆ ಕೂಡ ನೀಡಲಾಗಿತ್ತು. ಈ ಮೂಲಕ ಅಪ್ಪು ಪುನೀತ್ ರಾಜ್ ಕುಮಾರ್ ಅಂತ ನಾಮಾಂಕಿತಗೊಂಡ್ರು.
ಅಪ್ಪುಗೆ ನ್ಯಾಷನಲ್ ಅವಾರ್ಡ್ 1985ರಲ್ಲಿ ಬಂದ ಬೆಟ್ಟದ ಹೂವು ಸಿನಿಮಾಗಾಗಿ ಅಪ್ಪು ನ್ಯಾಷನಲ್ ಅವಾರ್ಡ್ ಮೂಡಿಗೇರಿಸಿಕೊಂಡಿದ್ರು. ಬೆಟ್ಟದ ಹೂವು ಚಿತ್ರದಲ್ಲಿ ಮನೋಜ್ಞವಾಗಿ ನಟನೆ ಮಾಡಿ ಅತಿ ಚಿಕ್ಕವಯಸ್ಸಿನಲ್ಲೇ ಅವಾರ್ಡ್ ಪಡೆದುಕೊಂಡ ಖ್ಯಾತಿ ಅಪ್ಪುಗೆ ಸಲ್ಲುತ್ತೆ.
ಇಂಟ್ರೆಸ್ಟಿಂಗ್ ಅಂದ್ರೆ ಅಪ್ಪುಗೆ ಶಾಲೆಯ ಅನುಭವವೇ ಆಗಿಲ್ಲ. ಎರಡು ವರ್ಷ ಮಾತ್ರ ಪುನೀತ್ ಸ್ಕೂಲ್ ಲೈಫ್ ಎಂಜಾಯ್ ಮಾಡಿದ್ರಷ್ಟೇ. ಆ ನಂತ್ರ ಚಿತ್ರೀಕರಣದಲ್ಲಿ ಬ್ಯುಸಿ ಇರ್ತಿದ್ರಿಂದ ಅಪ್ಪುಗೆ ಅಂತ್ಲೇ ಬೆಂಗಳೂರಿನ ಮನೆಯಲ್ಲೇ ಪ್ರೈವೆಟ್ ಟ್ಯೂಷನ್ ಮಾಡಿಸಲಾಗುತ್ತಿತ್ತು. ಇದೇ ರೀತಿ ಡಿಪ್ಲೋಮೊ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದ್ದಾರೆ.
ಅಪ್ಪು ಚಿಕ್ಕವರಾಗಿದ್ದಾಗ ಬಾಲಿವುಡ್ ನಟ ಮಿಥುನ್ ಚಕ್ರಬೋರ್ತಿಯ ಐ ಆಮ್ ಏ ಡಿಸ್ಕೋ ಡ್ಯಾನ್ಸರ್ ಹಾಡಂದ್ರೆ ತುಂಬಾ ಇಷ್ಟಪಡುತ್ತಿದ್ದರಂತೆ. ಆ ಸಾಂಗ್ ಬಂದ್ರೆ ಅಪ್ಪು ಡ್ಯಾನ್ಸ್ ಮಾಡ್ತಿದ್ರಂತೆ. ಈಗ ಪುನೀತ್ ರಾಜ್‌ಕುಮಾರ್ ಹಾಡುಗಳಂದ್ರೆ ಮಕ್ಕಳಿಗೆ ತುಂಬಾ ಇಷ್ಟ.
ಅಪ್ಪುಗೆ ಚಿಕ್ಕವರಿದ್ದಾಗ ಹಾಲು ಅಂದ್ರೆ ತುಂಬಾ ಇಷ್ಟವಂತೇ. ಒಂದು ಗ್ಲಾಸು ಹಾಲು ಕೊಡ್ತಿನಿ ಅಂದ್ರೆ ಹೇಳಿದ್ದನ್ನ ಮಾಡ್ತಿದ್ರಂತೆ ಅಪ್ಪು. ಆಟದ ಗೊಂಬೆ, ಕಾರ್ ಅಂದ್ರೆ ಪುನೀತ್ಗೆ ತುಂಬಾ ಇಷ್ಟ. ಶೂಟಿಂಗ್ ಮಾಡೋದಕ್ಕು ಮುನ್ನ ಯಾವುದಾದರೊಂದು ಗೊಂಬೆ ನೀಡಿದ್ರೆ ಸಾಕು ಪುನೀತ್ ಆಕ್ಟ್ ಮಾಡ್ತಿದ್ರಂತೆ.
ನಟನೆಯಲ್ಲಿ ಪುನೀತ್ಗೆ ಗಾಡ್ ಫಾದರ್ ಅಂದ್ರೆ ಹೊನ್ನವಳ್ಳಿ ಕೃಷ್ಣ ಅವರಂತೆ. ಪುನೀತ್ ಆಕ್ಟಿಂಗ್ ಮಾಡದೇ ಹಠ ಮಾಡಿ ಕೂತ್ಕೋಂಡಾಗ ಮುಂದಿನ ಸೀನ್ ಯಾವ ರೀತಿ ಮಾಡಬೇಕು ಅಂತ ಹೊನ್ನವಳ್ಳಿ ಆಕ್ಟ್ ಮಾಡಿ ತೋರಿಸ್ತಿದ್ರಂತೆ. ನಂತ್ರ ಥೇಟ್ ಅದೇ ರೀತಿ ಆಕ್ಟ್ ಮಾಡ್ತಿದ್ರಂತೆ ಅಪ್ಪು.
ಅಪ್ಪ ನನ್ನ ನೋಡಿ ಹೆದರಿದ್ದ ಪುನೀತ್ ಭಕ್ತ ಪ್ರಹ್ಲಾದ ಸಿನಿಮಾ ಚಿತ್ರೀಕರಣದಲ್ಲಿ ಪ್ರಹ್ಲಾದನಾಗಿ ನಟಿಸಿದ್ದ ಅಪ್ಪು, ಡಾ.ರಾಜ್ ಕುಮಾರ್ ಹಿರಣ್ಯಕಶಿಪುವಿನ ಪಾತ್ರದಲ್ಲಿ ದೊಡ್ಡ ಮೀಸೆ ಹಾಗು ಕಂಬಗಳನ್ನ ಹೊಡೆಯುವಾಗ ಅವರ ಉಗ್ರ ಭಯಂಕರ ರೂಪವನ್ನ ನೋಡಿ ತುಂಬಾನೇ ಹೆದರಿಕೊಂಡಿದ್ರಂತೆ. ಆಗ ಡಾ. ರಾಜ್ ಎತ್ತಿಕೊಂಡು ಅಪ್ಪುಗೆ ಸಮಾಧಾನ ಮಾಡಿದ್ರಂತೆ.
1999ರಲ್ಲಿ ಪುನೀತ್, ಅಶ್ವಿನಿ ಅವರನ್ನ ವರಿಸುತ್ತಾರೆ. ಕಾಮನ್ ಫ್ರೆಂಡ್ ಮೂಲಕ ಅಶ್ವಿನಿ, ಅಪ್ಪುಗೆ ಪರಿಚಯವಾಗ್ತಾರೆ. ಸ್ನೇಹ ಪ್ರೀತಿಗೆ ತಿರುಗಿ, ಇಬ್ರು ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ಹಸೆಮಣೆ ಏರ್ತಾರೆ. ಇವ್ರಿಗೆ ದೃತಿ ಮತ್ತು ವಂದಿತಾ ಹೆಸರಿನ ಪುತ್ರಿಯರಿದ್ದಾರೆ.
ಅಪ್ಪು, ತುಂಬಾನೇ ಡೌನ್ ಟು ಅರ್ಥ್ ನೇಚರ್ನಿಂದ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ. ಯಾರನ್ನೇ ಆಗ್ಲಿ ತಮ್ಮ ಕ್ಯೂಟ್ ಸ್ಮೈಲ್ನಿಂದ ಮಾತನಾಡಿಸೋ ಅಪ್ಪು ಸಿಂಪ್ಲಿಸಿಟಿಗೆ ಅವರೇ ಸರಿಸಾಟಿ. ಥೇಟ್ ಅಪ್ಪನ ಗುಣಗಳನ್ನೇ ಅಳವಡಿಸಿಕೊಂಡಿರೋ ಅಪ್ಪು ರಾಜಕುಮಾರನ ಪ್ರತಿರೂಪದಂತೇ ಕಾಣಿಸ್ತಾರೆ ಅಂತ ಹೇಳ್ತಾರೆ ಎಲ್ರು.
ಡಾ.ರಾಜ್ ಕುಮಾರ್ ಕೆಎಮ್ಎಫ್ ಮಿಲ್ಕ್ಗೆ ರಾಯಭಾರಿ ಆಗಿದ್ರು. ಒಂದು ನಯಾ ಪೈಸೆ ತೆಗೆದುಕೊಳ್ಳದೇ ಕೆಎಮ್ ಎಫ್‌ಗೆ ಅಂಬಾಸಿಡರ್ ಆಗಿದ್ರು ಅಣ್ಣಾವ್ರು. ಅಪ್ಪಾಜಿ ಹಾದಿಯಲ್ಲೇ ಸಾಗ್ತಿರುವ ಪುನೀತ್ ಕೆಎಮ್ ಎಫ್ ರಾಯಭಾರಿ ಆಗಿದ್ದು, ತಂದೆಯಂತೇ ಹಣ ತೆಗೆದುಕೊಳ್ಳದೆ ಜಾಹೀರಾತುಗಳನ್ನ ಮಾಡ್ತಿದ್ದಾರೆ.
ಬಲಗೈಯಿಂದ ಕೊಟ್ಟಿದ್ದು ಎಡಗೈಗೆ ಗೊತ್ತಗಬಾರದು ಅನ್ನೋದನ್ನ ನಂಬಿರೋ ಪುನೀತ್ ಸೈಲೆಂಟ್ ಆಗಿನೇ ಸಾಕಷ್ಟು ಸಾಮಾಜಿಕ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ತಾವು ಹಾಡಿದ ಹಾಡುಗಳಿಗೆ ಬಂದ ಹಣವನ್ನ ಸಾಕಷ್ಟು ಅನಾಥಶ್ರಮ ಹಾಗು ವೃದ್ಧಾಶ್ರಮಗಳಿಗೆ ನೀಡುತ್ತಾ ಬಂದಿದ್ದಾರೆ. ಅದಲ್ಲದೇ ತಾಯಿ ಪಾರ್ವತಮ್ಮ ಪ್ರತಿಷ್ಠಾಪಿಸಿದ ಶಕ್ತಿಧಾಮ ಸಂಸ್ಥೆಯ ಸಾಮಾಜಿಕ ಕೆಲಸದಲ್ಲು ತೊಡಗಿಸಿಕೊಂಡಿದ್ದಾರೆ.
ತಾಯಿ ಪಾರ್ವತಮ್ಮ ಹೆಸರಿನಲ್ಲಿ ಪಿಆರ್‌ಕೆ ಪ್ರೋಡಕ್ಷನ್ ಸಂಸ್ಥೆಯನ್ನ ಸ್ಥಾಪಿಸಿದ್ದು, ಹೊಸ ಪ್ರತಿಭೆಗಳಿಗೆ ತಮ್ಮ ಸಂಸ್ಥೆಯಲ್ಲಿ ನಟಿಸುವ ಅವಕಾಶಗಳನ್ನ ನೀಡೋ ಮೂಲಕ ಉತ್ತಮ ಕೆಲಸವನ್ನ ಮಾಡ್ತಿದ್ದಾರೆ. ಪುನೀತ್, ನಟನಾಗಿ ಅಷ್ಟೇ ಅಲ್ಲಾ ಗಾಯಕನಾಗಿ, ನಿರೂಪಕನಾಗಿಯೂ ತಮ್ಮನ್ನ ತಾವು ಗುರುತಿಸಿಕೊಂಡಿದ್ದು, ತಂದೆಗೆ ತಕ್ಕ ಮಗ ಅಂತ ಅನ್ನಿಸಿಕೊಂಡಿದ್ದಾರೆ ಈ ರಾಜಕುಮಾರ. ಈ ರಾಜರತ್ನನಿಗೆ ಈಗ ಎಲ್ಲಾ ಕಡೆಯಿಂದ್ಲೂ ಹುಟ್ಟು ಹಬ್ಬದ ಶುಭಾಶಯ ಹರಿದು ಬರುತ್ತಿದೆ.
ಇದನ್ನೂ ಓದಿ: Yuvarathnaa Movie Patashala Song: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪಾಠಶಾಲಾ ಗೀತೆ 3 ದಿನದಲ್ಲಿ 4 ಮಿಲಿಯನ್ ವೀಕ್ಷಣೆ