
ದಾವಣಗೆರೆ: ದೇವರ ದುಡ್ಡನ್ನು ಕದಿಯಲೇಬೇಕು ಎಂದು ಗಟ್ಟಿಮನಸ್ಸು ಮಾಡಿದ ಕಳ್ಳರಿಗೆ ಭಯ ಅಥವಾ ಪಾಪಪ್ರಜ್ಞೆ ಕಾಡುವುದಿಲ್ಲವಂತೆ. ಹಾಗಾಗಿ, ದೇವರ ಹುಂಡಿ ಮತ್ತು ಚಿನ್ನಾಭರಣಗಳನ್ನ ಕದ್ದರೂ ಹಾಯಾಗಿ ನಿದ್ರಿಸುತ್ತಾರಂತೆ.
ಇದೀಗ, ಪೂಜೆಗೆ ಇಡುತ್ತಿದ್ದ ಹಣವನ್ನ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಪಟ್ಟಣದ ವಿನೋಬನಗರದ 3ನೇ ಮುಖ್ಯರಸ್ತೆಯಲ್ಲಿ ನಡೆದಿದೆ. KSRTC ಚಾಲಕ ಅನಿಲ್ ಕುಮಾರ್ ಎಂಬುವವರ ಮನೆಯಲ್ಲಿ ದೇವರಿಗೆ ಇಟ್ಟಿದ್ದ ಹಣವನ್ನು ಖದೀಮರು ಕದ್ದಿದ್ದಾರೆ.
ಪ್ರತಿ ವರ್ಷ ಲಕ್ಷ್ಮಿ ಪೂಜೆಗೆ ಅನಿಲ್ ಕುಮಾರ್ ಕುಟುಂಬ ಹತ್ತು ಸಾವಿರ ರೂಪಾಯಿ ನಗದನ್ನು ಇಟ್ಟು ಪೂಜೆ ಮಾಡುತ್ತಿದ್ದರಂತೆ. ಹಲವು ವರ್ಷಗಳಿಂದ ಈ ರೀತಿ ಪೂಜೆಗೆ ಇಟ್ಟ ಹಣವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದರು. ಆದರೆ ಕುಟುಂಬ ಊರಿಗೆ ಹೋಗಿದ್ದ ಸಮಯದಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಖದೀಮರು ದೇವರ ದುಡ್ಡನ್ನು ಕದ್ದು ಪರಾರಿಯಾಗಿದ್ದಾರೆ. ಇದಲ್ಲದೆ, ಮನೆಯಲ್ಲಿದ್ದ ಆಭರಣವನ್ನು ದೋಚಿದ್ದಾರೆ. ಇನ್ನು ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.