ರೈಲಿನಲ್ಲಿ ಶಾಲೆಯೋ? ಶಾಲೆಯಲ್ಲಿ ರೈಲೋ..?
ಧಾರವಾಡ: ಶಾಲೆಗಳು ಒಳ್ಳೆಯ ಪ್ರಜೆಗಳನ್ನು ನಿರ್ಮಾಣ ಮಾಡುವ ತಾಣಗಳು. ಶಾಲೆಯಲ್ಲಿ ಕಲಿಯಲು ಪೂರಕವಾದ ವಾತಾವರಣವಿದ್ದರೆ ಮಕ್ಕಳಿಗೆ ಶಾಲೆಗೆ ಹೋಗಲು ಖುಷಿ ಆಗುತ್ತೆ. ಇದೇ ಕಾರಣಕ್ಕೆ ಶಾಲೆಗಳ ಕಟ್ಟಡದ ಜೊತೆಗೆ ಸರ್ಕಾರಿ ಶಾಲೆಗಳ ಅಂದ-ಚೆಂದಕ್ಕೂ ಹೆಚ್ಚು ಗಮನ ನೀಡುತ್ತೆ. ಅಷ್ಟೆಲ್ಲಾ ಯೋಜನೆಗಳು ಇದ್ದರೂ ಎಷ್ಟೋ ಶಾಲೆಗಳಲ್ಲಿ ಅಂಥ ಯೋಜನೆಗಳ ಸದುಪಯೋಗವಾಗಿಲ್ಲ. ಶಾಲೆ ಜಾಗದಲ್ಲಿ ನೀಲಿ ಬಣ್ಣದ ರೈಲು: ಆದರೆ ಧಾರವಾಡ ತಾಲೂಕಿನ ಮನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದರೆ ಒಮ್ಮೆಲೆ ಆಶ್ಚರ್ಯವುಂಟಾಗುತ್ತದೆ. ಶಾಲಾ ಕಟ್ಟಡವಿದ್ದ ಜಾಗದಲ್ಲಿ ಇದೀಗ […]

ಧಾರವಾಡ: ಶಾಲೆಗಳು ಒಳ್ಳೆಯ ಪ್ರಜೆಗಳನ್ನು ನಿರ್ಮಾಣ ಮಾಡುವ ತಾಣಗಳು. ಶಾಲೆಯಲ್ಲಿ ಕಲಿಯಲು ಪೂರಕವಾದ ವಾತಾವರಣವಿದ್ದರೆ ಮಕ್ಕಳಿಗೆ ಶಾಲೆಗೆ ಹೋಗಲು ಖುಷಿ ಆಗುತ್ತೆ. ಇದೇ ಕಾರಣಕ್ಕೆ ಶಾಲೆಗಳ ಕಟ್ಟಡದ ಜೊತೆಗೆ ಸರ್ಕಾರಿ ಶಾಲೆಗಳ ಅಂದ-ಚೆಂದಕ್ಕೂ ಹೆಚ್ಚು ಗಮನ ನೀಡುತ್ತೆ. ಅಷ್ಟೆಲ್ಲಾ ಯೋಜನೆಗಳು ಇದ್ದರೂ ಎಷ್ಟೋ ಶಾಲೆಗಳಲ್ಲಿ ಅಂಥ ಯೋಜನೆಗಳ ಸದುಪಯೋಗವಾಗಿಲ್ಲ.
ಶಾಲೆ ಜಾಗದಲ್ಲಿ ನೀಲಿ ಬಣ್ಣದ ರೈಲು: ಆದರೆ ಧಾರವಾಡ ತಾಲೂಕಿನ ಮನಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದರೆ ಒಮ್ಮೆಲೆ ಆಶ್ಚರ್ಯವುಂಟಾಗುತ್ತದೆ. ಶಾಲಾ ಕಟ್ಟಡವಿದ್ದ ಜಾಗದಲ್ಲಿ ಇದೀಗ ನೀಲಿ ಬಣ್ಣದ ಇಂಡಿಯಲ್ ರೈಲು ಬಂದು ನಿಂತಿದೆ. ಆದರೆ ಅಸಲಿಗೆ ಇದು ರೈಲಲ್ಲ, ಬದಲಿಗೆ ಕಟ್ಟಡವನ್ನು ಆ ರೀತಿ ಪೇಂಟಿಂಗ್ ಮೂಲಕ ವಿನ್ಯಾಸಗೊಳಿಸಲಾಗಿದೆ.
ಮನಗುಂಡಿ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗೆ ಹೀಗೆ ರೈಲು ಬೋಗಿಗಳಂತೆ ಬಣ್ಣ ಬಳಿಯಲಾಗಿದೆ. ರೈಲಿನ ಎಂಜಿನ್, ಬೋಗಿಗಳು, ಕಿಟಕಿ ಹಾಗೂ ಚಕ್ರಗಳು ಎಲ್ಲವೂ ಥೇಟು ರೈಲಿನಂತೆಯೇ ಭಾಸವಾಗುತ್ತದೆ. ಮಕ್ಕಳು ಶಾಲಾ ಕೊಠಡಿಯ ಬಾಗಿಲಲ್ಲಿ ನಿಂತು ಇಣುಕಿದರೆ ರೈಲು ಬೋಗಿಯಿಂದ ಇಣುಕಿದಂತೆಯೇ ಕಾಣುತ್ತದೆ.

₹15 ಸಾವಿರ ವೆಚ್ಚದಲ್ಲಿ ರೈಲಿನ ರೂಪ:
‘ಶಾಲೆಯ ನಲಿ-ಕಲಿ ವಿಭಾಗದ ಐದು ಕೊಠಡಿಗಳಿಗೆ ರೈಲಿನಂತೆ ವಿನ್ಯಾಸ ಮಾಡಲಾಗಿದೆ. ಶಾಲೆಯ ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ₹15 ಸಾವಿರ ವೆಚ್ಚದಲ್ಲಿ ಕೊಠಡಿಗಳಿಗೆ ರೈಲಿನ ರೂಪ ನೀಡಲಾಗಿದೆ. ಶಾಲೆ ದುರಸ್ತಿ ಕಾರ್ಯ ಇದ್ದಿದ್ದರಿಂದ ಅದರೊಂದಿಗೆ ಈ ಕಾರ್ಯವನ್ನೂ ಮಾಡಿ ಹೊಸ ರೂಪ ನೀಡಲಾಗಿದೆ. ಶಾಲೆಯಲ್ಲಿ ಒಟ್ಟು 402 ವಿದ್ಯಾರ್ಥಿಗಳಿದ್ದಾರೆ.
ನಲಿ-ಕಲಿ ವಿಭಾಗದಲ್ಲಿ 186 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಪಾಲಕರು, ಸ್ಥಳೀಯ ಶಿಕ್ಷಣ ಪ್ರೇಮಿಗಳು ನೀಡುತ್ತಿರುವ ಸಹಾಯ, ಸಹಕಾರ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿದೆ.
ವಂಚಿತ ಮಕ್ಕಳನ್ನ ಶಾಲೆಯತ್ತ ಸೆಳೆಯಲು ಪ್ರಯತ್ನ: ಈ ಕುರಿತು ಪ್ರತಿಕ್ರಿಯಿಸಿದ ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಹಡಪದ, ‘ಸರ್ಕಾರ ಹತ್ತು ಹಲವು ಯೋಜನೆಗಳ ಮೂಲಕ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಕಸರತ್ತು ಮಾಡುತ್ತಿದೆ. ಅದರಂತೆಯೇ ನಮ್ಮ ಶಾಲೆಯತ್ತಲೂ ಮಕ್ಕಳನ್ನು ಸೆಳೆಯಲು ವಿಶಿಷ್ಟ ರೀತಿಯ ವಿನ್ಯಾಸಗೊಳಿಸಲು ನಿರ್ಧರಿಸಲಾಯಿತು. ರೈಲಿನ ಚಿತ್ರ ಬಿಡಿಸಿ, ಶಾಲೆಯ ಚಿತ್ರಣವನ್ನು ಬದಲಿಸಿ ಆಕರ್ಷಕವಾಗಿ ಕಾಣುವಂತೆ ಮಾಡಲಾಗಿದೆ. ಶಾಲೆ ವಂಚಿತ ಮಕ್ಕಳನ್ನೂ ಶಾಲೆಯತ್ತ ಸೆಳೆಯಲು ಈ ರೀತಿ ಶಾಲಾ ಅಭಿವೃದ್ಧಿ ಮಂಡಳಿ ಹಾಗೂ ಶಾಲೆಯ ಶಿಕ್ಷಕರು ಪ್ರಯತ್ನಿಸಿದ್ದೇವೆ’ ಎನ್ನುತ್ತಾರೆ.
ಶಾಲಾ ಕಟ್ಟಡಕ್ಕೆ ಈ ರೀತಿಯ ಹೊಸ ವಿನ್ಯಾಸಗೊಳಿಸಿದ್ದು ಇಡೀ ಶಾಲೆಯ ಅಂದವನ್ನು ಹೆಚ್ಚಿಸಿದ್ದಲ್ಲದೇ ಶಾಲೆಯಿಂದ ದೂರವುಳಿದ ಮಕ್ಕಳನ್ನು ಕೂಡ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.





