Karnataka Assembly Session 2021 ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಜನರಿಂದ ಬಹುಮತ ಪಡೆದ ಸರ್ಕಾರ ಅಲ್ಲ. ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ. ಭಾಷಣದಲ್ಲಿ ಮುನ್ನೋಟವೂ ಇಲ್ಲ, ಹಿನ್ನೋಟವೂ ಇಲ್ಲ. ರಾಜ್ಯಪಾಲರನ್ನು ಬಳಸಿಕೊಂಡು ಸುಳ್ಳು ಹೇಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಕುರಿತು ವಿಧಾನಸಭೆಯಲ್ಲಿ ಚರ್ಚೆ ಆರಂಭಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರವಲ್ಲ. ಯೋಜನೆಗಳ ಬಗ್ಗೆ ಸರ್ಕಾರ ವಸ್ತುಸ್ಥಿತಿಯನ್ನ ಹೇಳಬೇಕು. ಕೌಶಲ್ಯಾಭಿವೃದ್ಧಿ ಇಲಾಖೆ ರಚಿಸಿದ್ದು ನಾನು ಎಂದು ಹೇಳಿದರು.
ವರ್ಷಕ್ಕೆ 5 ಲಕ್ಷ ಯುವಕರಿಗೆ ತರಬೇತಿ ಕೊಡಬೇಕು. ತರಬೇತಿ ನೀಡಿ ಕೌಶಲ್ಯ ಇರುವಂತಹ ವ್ಯಕ್ತಿಗಳನ್ನಾಗಿ ಮಾಡಬೇಕು. ರಾಜ್ಯದಲ್ಲಿ ಬಂಡವಾಳ ಹೂಡುವ ವಾತಾವರಣ ಇರಬೇಕು, ಮ್ಯಾನ್ ಪವರ್ ಇರಬೇಕು, ಇಲ್ಲವಾದರೆ, ಬಂಡವಾಳ ಬರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದೆ ಇವರು ಏನೇನು ಸಾಧನೆ ಮಾಡಿದ್ದರು ಎಂದು ಕನ್ನಡಿ ಮುಂದೆ ನಿಂತುಕೊಂಡು ನೋಡಲಿ. ಹಿಂದಿನ ಸರ್ಕಾರದ ಸಾಧನೆ ಬಗ್ಗೆ ನಾನು ಚರ್ಚೆ ಮಾಡಲು ತಯಾರಾಗಿದ್ದೇನೆ. ಬಿಜೆಪಿಯವರು ಅವರ ಪ್ರಣಾಳಿಕೆ ಇಟ್ಟುಕೊಂಡು ಚರ್ಚೆಗೆ ಬರಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಂವಿಧಾನಕ್ಕೆ ವಿರುದ್ಧವಾಗಿರುವ ಸರ್ಕಾರ ಎಂದರೆ ಬಿಜೆಪಿ ಸರ್ಕಾರ. ಆಪರೇಷನ್ ಕಮಲ ಹುಟ್ಟು ಹಾಕಿದ್ದು ಯಾರು? ಆಪರೇಷನ್ ಕಮಲ ಜನಕ ಯಾರಾದರೂ ಇದ್ದಾರೆ ಎಂದರೆ ಅದು ಮಿಸ್ಟರ್ ಯಡಿಯೂರಪ್ಪ. ಪಾಪದ ಹಣ ಖರ್ಚು ಮಾಡಿ, ಶಾಸಕರನ್ನು ಕಾಂಗ್ರೆಸ್ , ಜೆಡಿಎಸ್ನಿಂದ ಕರೆದುಕೊಂಡರು. ಪರ್ಚೇಸ್ ಎನ್ನುವ ಪದ ಬಳಕೆ ಮಾಡಲ್ಲ, ಏಕೆಂದರೆ ಅವರಿಗೆ ಕೋಪ ಬರಬಹುದು. ಇದು ವೆಂಕಟರಮಣಪ್ಪನಿಗೂ ಅನುಭವ ಆಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಟಕಿಯಾಡಿದರು.
ಸಿದ್ದರಾಮಯ್ಯ ಮಾತಿಗೆ ಧ್ವನಿ ಗೂಡಿಸಿದ ಕಾಂಗ್ರೆಸ್ನ ಶಾಸಕ ವೆಂಕಟರಮಣಪ್ಪ ಹೌದು ನಮಗೆ ಅವರು ತುಂಬಾ ಕಿರುಕುಳ ಕೊಟ್ಟು, ನಂತರ ನಮ್ಮನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿದರು. ಈಗ ಹೋಗಿರುವವರಿಗೂ ಇದೇ ಸಂದರ್ಭ ಬರಬಹುದು ಎಂದು ಹೇಳಿದರು.
ಒಂದೂವರೆ ವರ್ಷವಾದರೂ ಸರ್ಕಾರ ಸರಿಯಾಗಿಲ್ಲ. 5 ದಿನದಲ್ಲಿ 4 ಬಾರಿ ಖಾತೆ ಬದಲಾವಣೆ ಮಾಡಿದ್ದಿರಿ. ಮಾಧುಸ್ವಾಮಿಗೆ 3 ಬಾರಿ ಖಾತೆ ಬದಲಾಯಿಸಿದ್ದಿರಿ. ಪಾಪ ಮುಂದೆ ಕೂತು ಮಾಧುಸ್ವಾಮಿ ಕೆಲಸ ಮಾಡುತ್ತಿದ್ದ ಅವನನ್ನು ಹಿಂದಕ್ಕೆ ಹಾಕಿಬಿಟ್ಟಿರಿ. ಕರ್ನಾಟಕದ ಇತಿಹಾಸದಲ್ಲಿ ಏನಾದರೂ ಹೀಗೆ ನಡೆದಿತ್ತಾ ಏನ್ರೀ? ನಾನು ಯಾವತ್ತೂ ಇಷ್ಟೊಂದು ಬಾರಿ ಖಾತೆ ಬದಲಾವಣೆ ಮಾಡಲಿಲ್ಲ. ಒಂದೇ ಒಂದು ಬಾರಿ ರಿಶಫಲ್ ಮಾಡಿದ್ದೆ ಅಷ್ಟೇ. ಯಡಿಯೂರಪ್ಪರನ್ನು ಏನು ಸಮರ್ಥ ಸಿಎಂ ಅಂತಾ ಕರೀಬೇಕಾ ಅಥವಾ ಅಸಮರ್ಥ ಸಿಎಂ ಅಂತಾ ಕರೀಬೇಕಾ? ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ಕಾಲೆಳೆದಿದ್ದಾರೆ.
ಸದನದಲ್ಲಿ ಅಧಿಕಾರಿಗಳು ಒಬ್ಬರೂ ಇಲ್ಲ; ಏರ್ ಶೋ ನೋಡೋಕೆ ಹೋಗಿದ್ದಾರಾ?
ಇನ್ನು ಸದನದಲ್ಲಿ ಅಧಿಕಾರಿಗಳ ಗೈರಿಗೆ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಇಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡ್ತಿದ್ದೇನೆ. ಒಬ್ಬನೇ ಒಬ್ಬ ಅಧಿಕಾರಿ ಇಲ್ಲಿ ಕುಳಿತಿಲ್ಲ. ಸರ್ಕಾರ ಇದ್ಯೋ ಇಲ್ವೋ? ಅವರಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ಎಲ್ಲಾ ಏರ್ ಶೋ ನೋಡೋಕೆ ಹೋಗಿರಬೇಕು. ನಾವು ರಾಜ್ಯದ ಹಿತದ ಬಗ್ಗೆ ಚರ್ಚಿಸುತ್ತಿದ್ದೇವೆ. ಅಧಿಕಾರಿಗಳೇ ಇಲ್ಲ ಎಂದರೆ ಹೇಗೆ.
ನಾವು ಇವತ್ತು ಇಲ್ಲಿ, ನಾಳೆ ಅಲ್ಲಿಗೆ ಬರಬಹುದು, ನೀವು ಇಲ್ಲಿಗೆ ಬರಬಹುದು. ಆದರೆ ಅಧಿಕಾರಿಗಳು ಇಲ್ಲೇ ಇರುತ್ತಾರೆ. ನಾನು ಪ್ರತಿಪಕ್ಷ ನಾಯಕನಾಗಿ ಮಾತನಾಡ್ತಿದ್ದೇನೆ, ನಾಚಿಕೆಯಾಗಬೇಕು ಭಾಷಣ ಮಾಡುವುದಕ್ಕೆ. ನಾನು ಏಕೆ ಮನನೊಂದು ಹೇಳಿದೆ ಎಂದರೆ ಇದು ನನಗೆ ಮಾಡಿದ ಅಗೌರವಕ್ಕಲ್ಲ, ಸದನಕ್ಕೆ ಮಾಡಿದ ಅಗೌರವ. ಅಧಿಕಾರಿಗಳು ತಮ್ಮ ತಪ್ಪನ್ನ ತಿದ್ದಿಕೊಳ್ಳಬೇಕಲ್ಲವಾ ಎಂದು ಹೇಳಿದರು.
ರಾಜ್ಯ ಕೌಶಲ್ಯ ಅಭಿವೃದ್ಧಿಯಲ್ಲಿ ನಂ.1 ಅಂತ ಹೇಳಿದ್ದಾರೆ. ಆ ಕ್ರೆಡಿಟ್ ನಮಗೆ ಬರಬೇಕಾ, ನಿಮಗೆ ಬರಬೇಕಾ? ನಮ್ಮ ಕ್ರೆಡಿಟ್ ಈ ಸರ್ಕಾರ ತೆಗೆದುಕೊಳ್ಳಲು ನೋಡುತ್ತಿದೆ. ನೀವು ಈ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಅರ್ಹರಲ್ಲ ಸಂವಿಧಾನಕ್ಕೆ ವಿರುದ್ಧವಾದ ಸರ್ಕಾರ ನಿಮ್ಮದು. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿಸಿದರು ಎಂದು ಹೇಳಿದರೆ ಕೋಪ ಬರುತ್ತದೆ. ಅದಕ್ಕಾಗಿ ನಾನು ಖರೀದಿಸಿದರು ಎಂದು ಹೇಳುವುದಿಲ್ಲ. ಆಪರೇಷನ್ ಕಮಲದಿಂದ ಅನೈತಿಕವಾಗಿ ಹುಟ್ಟಿದ, ಅಂಗ ವೈಫಲ್ಯ ಇರುವ ಸರ್ಕಾರ ಇದು ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.
ನಮ್ಮ ಸರ್ಕಾರವಿದ್ದಾಗ ಸಚಿವ ಜಗದೀಶ್ ಶೆಟ್ಟರ್ ಪದೇಪದೆ ಟೇಕಾಫ್ ಆಗಿಲ್ಲ ಎನ್ನುತ್ತಿದ್ದರು. ಈಗ ಇವರ ಬಿಜೆಪಿ ಸರ್ಕಾರ ಏನಾಗಿದೆ ಎಂದು ಪ್ರಶ್ನೆ. ಈ ಸರ್ಕಾರ ಟೇಕಾಫ್ ಅಲ್ಲ, ಆಫೇ ಆಗಿಬಿಟ್ಟಿದೆ. ರಾಜ್ಯ ಸರ್ಕಾರ ದಾರಿಯಲ್ಲಿ ನಿಂತಿರುವ ಡಕೋಟಾ ಎಕ್ಸ್ಪ್ರೆಸ್ ಸರ್ಕಾರ ಆಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ನಾವು 140 ಭರವಸೆಗಳನ್ನು ಈಡೇರಿಸಿದ್ದೇವೆ ಎಂದ ಸಿದ್ದರಾಮಯ್ಯ
ನಿಮ್ಮ ಸರ್ಕಾರ ಬಂದು ಇವತ್ತಿಗೆ 18 ತಿಂಗಳಾಗಿದೆ. ಯಡಿಯೂರಪ್ಪ ಡಕೋಟಾ ಬಸ್ ಮೇಲೆ ಕೂತಿದ್ದಾರೆ. ಬಸ್ ಓಡಿಸಲು ಬರುತ್ತಾ ಇಲ್ಲ, ಕೋಟಾ ಬಸ್‌ನ ಎಲ್ಲಾ ಗೇರ್‌ಗಳನ್ನ ಕಿತ್ತುಕೊಂಡಿದ್ದಾರೆ. ಹೀಗಾಗಿ ನಾನು ಯಡಿಯೂರಪ್ಪನವರಿಗೆ ಹೇಳುತ್ತಿದ್ದೇನೆ. ಒಮ್ಮೆ ನೀವು ಕನ್ನಡಿಯ ಮುಂದೆ ನಿಂತುಕೊಂಡು ನೋಡಿ.. ನೀವೇನು ಭರವಸೆ ಕೊಟ್ಟಿದ್ದೀರಿ ಎಂದು ನೀವೇ ಕೇಳಿಕೊಳ್ಳಿ. ನೀವು ಕೊಟ್ಟ ಭರವಸೆಯಲ್ಲಿ ಏನೇನು ಈಡೇರಿಸಿದ್ದೀರಿ? ನಾವು 140 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಾವು ಕೂಡ ನಮ್ಮ ಪ್ರಣಾಳಿಕೆ ಇಟ್ಟುಕೊಂಡು ಬರುತ್ತೇವೆ. ನೀವು ಕೂಡ ನಿಮ್ಮ ಪ್ರಣಾಳಿಕೆ ಇಟ್ಟುಕೊಂಡು ಚರ್ಚೆಗೆ ಬನ್ನಿ. 2018ರಲ್ಲಿ ಮಂಡಿಸಿದ್ದ ಬಜೆಟ್ ಡಿಟೇಲ್ ಆಗಿ ಹೇಳಿದ್ದೇನೆ. ಏನ್ ಹೇಳಿದ್ದೆ, ಏನ್ ಮಾಡಿದ್ದೀನಿ ಅದು ನನ್ನ ಲಾಸ್ಟ್ ಬಜೆಟ್. ಇಲ್ಲಿ ಇವರು ಬೆನ್ನು ತಟ್ಟಿಕೊಳ್ಳಲು ಭಾಷಣ ಮಾಡಿಸಿದ್ದಾರೆ. ರಾಜ್ಯಪಾಲರಿಂದ ಸುಳ್ಳು ಹೇಳಿಸಿದ್ದಾರೆ.
ಹಾಲು ಉತ್ಪಾದನೆಯಲ್ಲಿ ನಂಬರ್ 2 ಎಂದು ಹೇಳುತ್ತಾರೆ. ಏನು ಇದು ನೀವು ಬಂದ ಬಳಿಕ ಮಾಡಿರುವುದಾ? ಇವತ್ತು 82 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಇದರಲ್ಲಿ ನಮ್ಮ ಕೊಡುಗೆಯೂ ಇದೆ. ನಾವು ಕ್ಷೀರಧಾರೆ ಅಡಿ ಪ್ರತಿ ಲೀಟರ್‌ಗೆ ₹5 ಕೊಟ್ಟಿದ್ದೆವು. ಪ್ರೋತ್ಸಾಹ ಧನ ಎಂದು 5 ರೂಪಾಯಿ ಕೊಟ್ಟಿದ್ದೆವು. ಅದನ್ನ ಕೊಟ್ಟಿದ್ದರಿಂದ ಹಾಲು ಉತ್ಪಾದನೆ ಹೆಚ್ಚಾಯಿತು ಎಂದು ಹೇಳಿದ ಸಿದ್ದರಾಮಯ್ಯ ಅವರ ಮಾತಿನ ಮಧ್ಯೆ ಎದ್ದುನಿಂತ ಸಚಿವ ಡಾ. ಸುಧಾಕರ್ ನೀವು ಪ್ರೋತ್ಸಾಹ ಧನ ಕೊಟ್ಟಿದ್ದು 4 ರೂಪಾಯಿ ಎಂದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನೀನು ಕುಳಿತುಕೊಳ್ಳಪ್ಪಾ ಎಂದು ಹೇಳಿದರು.
ಕರ್ನಾಟಕದಲ್ಲಿ ಪಕೃತಿ ವಿಕೋಪ, ಇನ್ನೊಂದು ಕಡೆ ಕೊರೊನಾ ಟೈಂನಲ್ಲಿ ರೈತ ವಿರೋಧಿ ಕಾನೂನುಗಳನ್ನ ಮಾಡಿದ್ದಾರೆ. ಅದು ಏನು ತುಂಬಾ ಎಮರ್ಜೆನ್ಸಿ ಇದೆ ಎನ್ನುವ ರೀತಿಯಲ್ಲಿ ಚರ್ಚೆ ಮಾಡದೆ ಸುಗ್ರೀವಾಜ್ಞೆ ಹೊರಡಿಸಿ ಬಿಟ್ಟಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವುದು ಯಾವಾಗ ಅಸೆಂಬ್ಲಿ ಇಲ್ಲದೇ ಇರುವಾಗ, ತುರ್ತಾಗಿದೆ ಎನ್ನುವಾಗ ಏನೂ ಇಲ್ಲ, ಅಧ್ಯಕ್ಷರೆ ನಮಗೆ ಪ್ರೊಸಿಜರ್ ಗೊತ್ತಿಲ್ಲ ಅಂದರೆ ಬೇರೆ ಮಾತು. ರಾಜ್ಯಪಾಲರ ಭಾಷಣದ ಮೇಲೆ ಪ್ರತಿಪಕ್ಷದ ನಾಯಕರು ತಮ್ಮ ಕರ್ತವ್ಯ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದಲ್ಲಿ ಇವತ್ತು ಜ್ವಾಲಾಮುಖಿ ಪರಿಸ್ಥಿತಿ ಇದೆ. ಯಾವಾಗ ಸ್ಫೋಟ ಆಗುತ್ತೋ ಗೊತ್ತಿಲ್ಲ..
ಯಡಿಯೂರಪ್ಪ ಯಾವಾಗಲೂ ಹಸಿರು ಶಾಲು ಹಾಕಿಸಿಕೊಳ್ಳುತ್ತಾರೆ. ನಾವು ರೈತರ ಪರ ಇದ್ದೀವಿ ಎನ್ನುವುದನ್ನ ತೋರಿಸಿಕೊಳ್ಳೋಕೆ. ಆದರೆ ಕೊರೊನಾ ಹೊತ್ತಲ್ಲೆ ಈ ಮೂರು ಕಾಯ್ದೆಗಳನ್ನ ತಂದಿದ್ದಾರೆ. ಸುಗ್ರೀವಾಜ್ಞೆ ಬೇರೆ ತಂದಿದ್ದಾರೆ, ಇಷ್ಟೊಂದು ಅರ್ಜೆಂಟ್ ಇತ್ತಾ..? ಇವತ್ತು ದೇಶದಲ್ಲಿ ರೈತರು ಬೀದಿಗೆ ಇಳಿದಿದ್ದಾರೆ. ದೇಶದಲ್ಲಿ ಇವತ್ತು ಪರಿಸ್ಥಿತಿ ಹೇಗಿದೆ ಅಂದರೆ ಜ್ವಾಲಾಮುಖಿಗಳ ರೀತಿ ಆಗಿದೆ. ಯಾವಾಗ ಸ್ಫೋಟ ಆಗುತ್ತೋ ಗೊತ್ತಿಲ್ಲ, ಕರ್ನಾಟಕದಲ್ಲೂ ಅದೇ ರೀತಿ ಇದೆ. ರೈತರ ಸ್ಫೋಟಗೊಂಡರೆ ಯಾವ ಸರ್ಕಾರವೂ ಉಳಿದ ಉದಾಹರಣೆಗಳು ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
2008ರಲ್ಲಿ ಗೊಬ್ಬರ ಕೊಡಿ ಅಂದಿದ್ದಕ್ಕೆ ಇಬ್ಬರು ರೈತರನ್ನ ಸಾಯಿಸಿದ್ರು ಕೊರೊನಾ, ಪ್ರವಾಹಾ, ಡ್ರಕೋನಿಯನ್ ಕಾನೂನುಗಳು. ಅದಕ್ಕೆ ನಾನು ಹೇಳಿದ್ದು ಯಡಿಯೂರಪ್ಪನವರು ಕನ್ನಡಿ ಮುಂದೆ ನಿಂತುಕೊಳ್ಳಿ. ಇವರು ಮೊದಲನೇ ಭರವಸೆ ಹೇಳಿದ್ದು, ರಾಷ್ಟ್ರೀಕೃತ ಬ್ಯಾಂಕ್ ರೈತರ 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು 2 ನೇಯದು 5 ಸಾವಿರ ಕೋಟಿಗಳ ರೈತ ಬಂಧು ನಿಧಿ ಸ್ಥಾಪನೆ ಮಾಡುತ್ತೀವಿ ಎಂದರು ಎಲ್ಲಿದೆ ಅದು, 3 ನೇ ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ರೈತ ಬಂಧು ವಿದ್ಯಾರ್ಥಿ ವೇತನ ನಿಧಿ ಸ್ಥಾಪನೆ ಮಾಡುತ್ತೀವಿ ಎಂದು ಎಲ್ಲಿದೆ ಅದು ನಿಧಿನೂ ಇಲ್ಲ 5 ಸಾವಿರ ಪೈಸೇನೂ ಇಲ್ಲ. 4 ನೇ ರೈತರ ಉತ್ಪಾದನೆ, ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಅನುದಾನ ಪ್ರತಿವರ್ಷ 30 ಸಾವಿರ ಕೊಡಬೇಕು, ಆದರೆ ಎಷ್ಟು ಫಂಡ್ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕತ್ತಿಗೆ ಸಪರೇಟ್ ಕರ್ನಾಟಕ ಮಾಡ್ತೀವಿ ಅಂತಿದ್ದರಲ್ಲ, ಎಲ್ಲಪ್ಪ ಮಿಸ್ಟರ್ ಕತ್ತಿ ಎಲ್ಲಿದೆ ಅನುದಾನ? 1 ಸಾವಿರ ರೈತರನ್ನು ಪ್ರತಿ ವರ್ಷ ಇಸ್ರೇಲ್ಗೆ ಕಳಿಸುತ್ತೇವೆ. ಚೈನಾಗೆ ಕಳಿಸುತ್ತೇವೆ ಅಂತಾ ಭರವಸೆ ನೀಡಿದರು. ಯಾರಾದರೂ ಕಳುಹಿಸಿದರಾ? ಫ್ಲೈಟೇ ಇಲ್ಲ, ಕೃಷಿ ಸಂಬಂಧಿಸಿದ ಉಸ್ತುವಾರಿ ನೋಡಿಕೊಳ್ಳೋಕೆ ರೈತ ಬಂಧು ಇಲಾಖೆ ಮಾಡುತ್ತೇವೆ ಎಂದಿದ್ದರೂ ಎಲ್ಲಿದೆ ಆ ಇಲಾಖೆ? ರೈತರ ಮಕ್ಕಳಿಗೂ, ಮಾರುಕಟ್ಟೆ ಇಲ್ಲ ಎಂದು ಸಿದ್ದರಾಮಯ್ಯ ವಿಷಾದದ ದನಿಯಲ್ಲಿ ಹೇಳಿದರು
ಇನ್ನು ಒಂದು ಖಾಲಿ ಇದೆ ಅಲ್ವಾ..
ನಾವು ಪ್ರಣಾಳಿಕೆ ಮಾಡುವುದು ಯಾವ ಕಾರಣಕ್ಕಾಗಿ? ಜನರ ಪರವಾಗಿ ಕೆಲಸ ಮಾಡಬೇಕಲ್ವಾ. ಸತ್ತ ಸರ್ಕಾರದಂತೆ ಏಕೆ ಇರುತ್ತಿದ್ದಾರೆ. ನಾವು ಭರವಸೆಗಳನ್ನು ಕೊಡುವುದು ಈಡೇರಿಸುವುದಕ್ಕಾಗಿ ನನ್ನ ಸರ್ಕಾರ ರಚನೆಗೂ ಮುನ್ನವೇ ಭರವಸೆ ಈಡೇರಿಸಿದ್ದೆ. ಕೃಷಿ ಭಾಗ್ಯ, ಅನ್ನ ಭಾಗ್ಯ ಸೇರಿ 5 ಭರವಸೆ ಈಡೇರಿಸಿದ್ದೆ. ನಿಗಮದ ಮೇಲಿದ್ದ ಎಲ್ಲ ಸಾಲವನ್ನು ಮನ್ನಾ ಮಾಡಿಬಿಟ್ಟೆ. ನೀವು ಇನ್ನೂ ಸರ್ಕಾರವನ್ನೇ ಮಾಡಿಕೊಳ್ಳೋಕೆ ಆಗಲಿಲ್ಲ. ಇನ್ನು ಒಂದು ಖಾಲಿ ಇದೆ ಅಲ್ವಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಹಿಳೆಯರಿಗೆ 2 ಲಕ್ಷ ರೂಪಾಯಿ ವರೆಗೆ ಶೇ. 1 ಬಡ್ಡಿ ದರಲ್ಲಿ ಸಾಲ, ಬಿಪಿಎಲ್ ಕಾರ್ಡ್, ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್, ಮದುವೆಯಾಗುವ ಹೆಣ್ಣುಮಕ್ಕಳಿಗೆ 3 ಗ್ರಾಂ ಚಿನ್ನದ ತಾಳಿ, 25 ಸಾವಿರ ರೂಪಾಯಿ, 10 ಸಾವಿರ ಕೋಟಿ ವೆಚ್ಚದಲ್ಲಿ ಸ್ತ್ರೀ ಉನ್ನತ ನಿಧಿ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಕೊಟ್ಟಿದ್ದನ್ನ ನಿಲ್ಲಿಸಿಬಿಟ್ಟರು. ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದೂವರೆ ಸಾವಿರ ಕೋಟಿ ವಿದ್ಯಾರ್ಥಿ ವೇತನ ನಾವು ಕೊಟ್ಟಿದ್ದನ್ನ ನಿಲ್ಲಿಸಿ ಬಿಟ್ಟರು. ಇವ್ರು ಮಾಡಿದ್ದೇನು ಎಲ್ಲಾ ತಿದ್ದು ಪಡಿತಂದಿದ್ದಾರೆ ಗೋಹತ್ಯೆ ಒಂದು ಬಿಟ್ರೆ ಎಲ್ಲದಕ್ಕೂ ಬಹುಮತ ಇಲ್ಲ ಗೋಹತ್ಯೆ ಕಾಯ್ದೆ ಸಂಘ ಪರಿವಾರದವರ ಅಜೆಂಡಾ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕೊಡವರು ಗೋಮಾಂಸ ತಿಂತಾರೆ ಎಂದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ FIR ದಾಖಲು
Published On - 3:17 pm, Wed, 3 February 21