ಉತ್ತರ ಕನ್ನಡ: ಹಳ್ಳ (Pit) ದಾಟುವಾಗ ನೀರಿನ ರಬಸಕ್ಕೆ ಸಿದ್ದಿ ಬುಡಕಟ್ಟು ಮಹಿಳೆ (Woman) ಕೊಚ್ಚಿ ಹೋಗಿರುವ ಘಟನೆ ಅಂಕೋಲಾ (Ankola) ತಾಲೂಕಿನ ಹಳವಳ್ಳಿ ಬಾಳೆಗದ್ದೆ ಬಳಿ ನಡೆದಿದೆ. ಕಮಲಾ ಗಣಪತಿ ಸಿದ್ದಿ (50) ನೀರಲ್ಲಿ ಕೊಚ್ಚಿ ಹೋದ ಮಹಿಳೆ. ಸ್ಥಳದಲ್ಲಿ ಮಹಿಳೆಯ ಸೀರೆ ಹಾಗೂ ಬ್ಯಾಗ್ ಪತ್ತೆಯಾಗಿದೆ. ಮಹಿಳೆ ಗದ್ದೆಗೆ ಹೋಗಿ ವಾಪಾಸ್ ಬರುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ. ಅಂಕೋಲ ಗ್ರಾನೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಾವು
ಚಾಮರಾಜನಗರ: ಕಾಲುವೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಚಂದ್ರು(19), ಸುನಿಲ್(27) ಮೃತ ದುರ್ದೈವಿಗಳು. ಮೃತರು ಮಂಡ್ಯ ಜಿಲ್ಲೆಯ ಹಲಗೂರು ನಿವಾಸಿಗಳು ಎಂದು ತಿಳಿದು ಬಂದಿದೆ. ಯುವಕರು ಕುಟುಂಬದವರ ಜತೆ ದೇಗುಲಕ್ಕೆ ಬಂದಿದ್ದಾಗ ಪೂಜೆ ನಂತರ ಕಾಲುವೆಯಲ್ಲಿ ಈಜಲು ತೆರಳಿದ್ದಾಗ ದುರಂತ ಸಂಭವಿಸಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವು
ರಾಮನಗರ: ಕನಕಪುರ ತಾಲ್ಲೂಕಿನ ಚುಂಚಿಫಾಲ್ಸ್ ಬಳಿ ಯುವಕ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಪ್ರವೀಣ್ ಚಂದ್ರ (26) ಮೃತ ಯುವಕ. ಮೃತ ಯುವಕ ಬೆಂಗಳೂರಿನ ಶಂಕರಮಠದ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದನು. ಪ್ರವೀಣ್ ಚಂದ್ರ ಭಾನುವಾರ ತನ್ನ ಇಬ್ಬರು ಸ್ನೇಹಿತರ ಜೊತೆ ಚುಂಚಿಫಾಲ್ಸ್ಗೆ ಬಂದಿದ್ದನು.
ಈ ವೇಳೆ ಅಪಾಯದ ಸ್ಥಳದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಚಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇಂದು ಚುಂಚಿಪಾಲ್ಸ್ ನಿಂದ ಒಂದು ಕಿಲೋಮೀಟರ್ ದೂರದಲ್ಲಿದೆ ಮೃತ ದೇಹ ಪತ್ತೆಯಾಗಿದೆ. ಸಾತನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿರವಾರ- ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ ಮೂವರು ಅಪಘಾತದಲ್ಲಿ ಸಾವು, ಹುಬ್ಬಳ್ಳಿಯಲ್ಲಿ ಇಬ್ಬರಿಗೆ ಚಾಕು ಇರಿತ
ರಾಯಚೂರು: ಸಿರವಾರ ತಾಲ್ಲೂಕಿನ ಹೊಕ್ರಾಣಿ ಗ್ರಾಮದ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ಸಿರವಾರ ತಾಲೂಕಿನ ಕಲ್ಲೂರಿನ ಭೀಮವ್ವ ಮಾಸಳಿ (50), ಬಸವರಾಜ್ ಮಾಸಳಿ (40), ನರೇಶ್ (8) ಮೃತರು. ಸಂಬಂಧಿಯೊಬ್ಬರ ಅಂತ್ಯಕ್ರಿಯೆಗಾಗಿ ಕಲ್ಲೂರಿನಿಂದ ಕುರ್ಡಿ ಗ್ರಾಮಕ್ಕೆ ಇವರು ತೆರಳುತ್ತಿದ್ದರು. ಬೈಕ್ಗೆ ಡಿಕ್ಕಿಯಾದ ನಂತರ ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ಪಕ್ಕದ ಜಮೀನಿಗೆ ನುಗ್ಗಿತು. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಅರ್ಬಾಜ್ ಹತ್ಯೆ: ಮೂವರ ಬಂಧನ ಆರೋಪಿ ಬಂಧನ
ಬೆಂಗಳೂರು: ಕೆ.ಜಿ.ಹಳ್ಳಿಯಲ್ಲಿ ವಿದ್ಯಾರ್ಥಿ ಅರ್ಬಾಜ್ ಹತ್ಯೆಗೈದ ಪ್ರಮುಖ ಆರೋಪಿ ಮೊಹಮ್ಮದ್ ಸಾದ್ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ನಾಲ್ವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅರ್ಬಾಜ್ ಮತ್ತು ಅವನ ಸ್ನೇಹಿತರು ಮೊಹಮ್ಮದ್ ಸಾದ್ನನ್ನು ನಿಂದಿಸಿದ್ದರು. ಇದಕ್ಕೆ ಪ್ರತಿಯಾಗಿ ಆಗಸ್ಟ್ 12ರಂದು ಹತ್ಯೆ ಮಾಡಿದ್ದೆ ಎಂದು ಮೊಹಮದ್ ಸಾದ್ ತಪ್ಪೊಪ್ಪಿಕೊಂಡಿದ್ದ.
ಟಿಬೆಟಿಯನ್ ಕಾಲೊನಿಯಲ್ಲಿ ಗಾಂಜಾ ಪತ್ತೆ
ಕಾರವಾರ: ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, 7 ಕೆಜಿ ಹಸಿ ಗಾಂಜಾ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ನ್ಯಾಮಗಲ್ ಚೋಟೇನ್ ಎಂದು ಗುರುತಿಸಲಾಗಿದೆ.
ಹುಬ್ಬಳ್ಳಿ: ಇಬ್ಬರಿಗೆ ಚಾಕು ಇರಿತ
ಹುಬ್ಬಳ್ಳಿ: ನಗರದಲ್ಲಿ ತಡರಾತ್ರಿ ಎರಡು ಕಡೆ ಚಾಕು ಇರಿತದ ಪ್ರಕರಣಗಳು ವರದಿಯಾಗಿವೆ. ಹಳೇ ಹುಬ್ಬಳಿಯ ಇಬ್ರಾಹಿಂಪುರದಲ್ಲಿ ಬಾಡಿಗೆಗೆ ಸಂಬಂಧಿಸಿದಂತೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿ, ಆಟೊ ಚಾಲಕನ ಕುತ್ತಿಗೆಗೆ ಬ್ಲೇಡ್ನಿಂದ ಹಲ್ಲೆ ಮಾಡಲಾಗಿದೆ. ಆರೋಪಿ ಇರ್ಫಾನ್ ನಡೆಸಿದ ಹಲ್ಲೆಯಿಂದ ಚಾಲಕ ಅಖ್ತರ್ಗೆ ತೀವ್ರ ಗಾಯಗಳಾಗಿವೆ. ತಕ್ಷಣ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ಹಣಕಾಸಿನ ವಿಷಯದ ವಿವಾದ ವಿಕೋಪಕ್ಕೆ ಹೋಗಿ ಸನ್ಮೂನ್ ಕಬಾಡೆ ಎಂಬಾತನಿಗೆ ಅನಿಲ್ ಎಂಬಾತ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಗಿ ಇಲ್ಲಿ ಕ್ಲಿಕ್ ಮಾಡಿ
Published On - 9:27 pm, Tue, 16 August 22