ಮಂಗಳೂರು: ಅಮ್ಮ ಈ ಪದಕ್ಕೆ ಎಷ್ಟು ಶಕ್ತಿ ಇದೆ ಅಂದ್ರೆ ಅದು ಆ ದೇವರು ಕೂಡ ಹೇಳಲಾರ. ಯಾಕೆಂದರೆ ಆ ದೇವರಿಗೂ ತಾಯಿಯ ಋಣ ತೀರಿಸೋಕೆ ಆಗಿರಲ್ಲ. ತಾಯಿಯ ಋಣ ಅಂದ್ರೆ ಅದು ತೀರಿಸೋಕೆ ಆಗದ ಋಣ. ತಾಯಿ ತನ್ನ ಮಗುವನ್ನು ಸಾಕಲು ತನ್ನೆಲ್ಲಾ ಸರ್ವಸ್ವವನ್ನು ಧಾರೆ ಎರೆಯುತ್ತಾಳೆ. ತನ್ನ ಕಷ್ಟ ಮಕ್ಕಳಿಗೆ ತಿಳಿಯದಂತೆ ಅವರನ್ನ ಸಂತೋಷದಿಂದ ಬೆಳೆಸುತ್ತಾಳೆ. ಆದರೆ ಅಂತಹ ದೇವತೆಗೆ ಮಕ್ಕಳು ಕೊಡಮಾಡುವ ಉಡುಗೊರೆ ಏನು?
ಕೊರೊನಾ ಸಂಕಷ್ಟದಲ್ಲಿ ಎಷ್ಟೂ ಮಕ್ಕಳು ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಪರದಾಡಿರುವುದನ್ನು ನಾವು ನೋಡಿದ್ವಿ, ಆದರೆ ಇಲ್ಲೊಬ್ಬ ಮಗ ಹಾಗೂ ಮೊಮ್ಮಗ ತನ್ನ ವೃದ್ಧ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯ ಸವಣಾಲು ಎಂಬಲ್ಲಿ ನಡೆದಿದೆ. ಸವಣಾಲು ಹಲಸಿನಕಟ್ಟೆ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬುವವರಿಗೆ ಅವರ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ಬಂದು, ಅಜ್ಜಿ ಮಲಗಿದಲ್ಲೇ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ!
ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿ ಅಪ್ಪಿಶೆಟ್ಟಿ ಕೆಲ ವರ್ಷದಿಂದ ಮಲಗಿದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದು, ಇದರಿಂದ ನೊಂದ ಅಸಹಾಯಕ ಮೊಮ್ಮಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಹಲ್ಲೆ ನಡೆಸಿದ ಈ ಇಬ್ಬರ ಮೇಲೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕ್ರಮಕೈಗೊಳ್ಳಬೇಕಿದೆ.
ತಾಯಿ ಮೇಲೆ ಹಲ್ಲೆ ಮಾಡಿದ ಪಾಪಿಗಳು ಅರೆಸ್ಟ್
ಅಜ್ಜಿಗೆ ಹಲ್ಲೆ ಮಾಡಿದ ಮಗ ಶ್ರೀನಿವಾಸ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಸೇರಿದಂತೆ ಮೂವರನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ ವೃದ್ಧೆಯನ್ನು ಆರೈಕೆಗಾಗಿ ಹಿರಿಯ ನಾಗರಿಕ ಪಾಲನಾ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
Published On - 3:29 pm, Fri, 17 July 20