ಹಾವೇರಿ: ಜೀವನದಲ್ಲಿ ಸನ್ಮಾರ್ಗ ತೋರಿಸುವವನೇ ಗುರು ಅನ್ನೋ ಮಾತಿದೆ. ಆದರೆ, ಹಾವೇರಿಯ ಈ ಶಿಕ್ಷಕರು ಮಾಡಿದ್ದೇ ಬೇರೆ. ನಕಲು ಮಾಡಲು ಸಹಕರಿಸಿದ ಖಾಸಗಿ ಶಾಲೆಯ ನಾಲ್ವರು ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಜಿಲ್ಲೆಯ ಹಿರೇಕೆರೂರು ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಬಂಧಿತ ಶಿಕ್ಷಕರನ್ನ ಜಗದೀಶ ಶಿವಪ್ಪನವರ್, ಮನೋಹರ್ ಬಿ.ಆರ್, ಗುತ್ತೆಪ್ಪ ಬಾಳಂಬೀಡ ಹಾಗೂ ಶಿವಯೋಗಿ ರಾಗಿ ಎಂದು ಗುರುತಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಸ್ಥಳೀಯ ತಹಶೀಲ್ದಾರರಾದ ಆರ್.ಎಚ್.ಭಾಗವಾನ್ ಭೇಟಿ ಕೊಟ್ಟ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತಹಶೀಲ್ದಾರ್ ಹಾಗೂ ಪೊಲೀಸರನ್ನ ಕಂಡ ಶಿಕ್ಷಕರು ಓಡಲು ಯತ್ನಿಸಿದರು ಎಂದು ತಿಳಿದುಬಂದಿದೆ. ನಾಲ್ವರ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.