
ಬೆಂಗಳೂರು: ರಾಜಧಾನಿಯಲ್ಲಿ ಇದೀಗ ಲಾಕ್ಡೌನ್ ವಿಸ್ತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.
BBMP ನಗರದಲ್ಲಿ 15ದಿನಗಳ ಲಾಕ್ಡೌನ್ಗೆ ಸರ್ಕಾರಕ್ಕೆ ಮನವಿ ಮಾಡಿದೆ. 15ದಿನ ಲಾಕ್ಡೌನ್ನಿಂದ ಬೆಂಗಳೂರಿನಲ್ಲಿ ಸೋಂಕು ತಡೆಯಬಹುದು. ಸೋಂಕಿತ ವ್ಯಕ್ತಿ 12 ದಿನದಲ್ಲಿ ಗುಣಮುಖರಾಗುತ್ತಿರೋ ಹಿನ್ನೆಲೆಯಲ್ಲಿ ಜನರು 15 ದಿನ ಮನೆಯಿಂದ ಹೊರಬಾರದಂತೆ ತಡೆಯಬೇಕು. ಹೀಗಾಗಿ, ಲಾಕ್ಡೌನ್ನಿಂದ ಸೋಂಕಿತರ ಸಾರ್ವಜನಿಕ ಓಡಾಟಕ್ಕೆ ಬ್ರೇಕ್ ಬೀಳುತ್ತದೆ ಎಂಬುದು ಬಿಬಿಎಂಪಿ ವಾದ.
ಲಾಕ್ಡೌನ್ನಿಂದ ಸೋಂಕಿತರು ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಗುತ್ತದೆ. ಜೊತೆಗೆ, BBMP ಌಂಟಿಜೆನ್ ಟೆಸ್ಟ್ ಮೂಲಕ ಕೊರೊನಾ ಪರೀಕ್ಷೆ ನಡೆಸುತ್ತಿದೆ. ಕಂಟೇನ್ಮೆಂಟ್ ಜೋನ್ನಲ್ಲಿ ಈ ಟೆಸ್ಟ್ ಮಾಡಲಾಗ್ತಿದ್ದು ಸೋಂಕಿತರ ಪತ್ತೆ ಮಾಡಲು ಸುಲಭವಾಗುತ್ತದೆ. BBMP ವ್ಯಾಪ್ತಿಯಲ್ಲಿ ಈ ಟೆಸ್ಟ್ ಮುಗಿಸಲು ಕನಿಷ್ಠ 15 ದಿನ ಬೇಕಾಗುತ್ತದೆ. ಹೀಗಾಗಿ 15 ದಿನ ಲಾಕ್ಡೌನ್ ಮಾಡುವಂತೆ ಸರ್ಕಾರಕ್ಕೆ BBMP ಮನವಿ ಮಾಡಿತ್ತು.
ಆದರೆ, ಲಾಕ್ಡೌನ್ ವಿಸ್ತರಣೆ ಬೇಡ ಅಂತಾ ಸರ್ಕಾರ ನಿಲುವು ತಾಳಿದೆ ಎಂದು ತಿಳಿದುಬಂದಿದೆ. ಜೊತೆಗೆ, ಪಾಲಿಕೆಯ ಮನವಿಯನ್ನ ಸರ್ಕಾರ ಮತ್ತು ಉಸ್ತುವಾರಿ ಸಚಿವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಲಾಕ್ಡೌನ್ ವಿಸ್ತರಣೆ ಬೇಡ ಅಂತಾ ನಿನ್ನೆ ಸಭೆಯಲ್ಲಿ ಸಿಎಂ ಬಿಎಸ್ವೈ ಸಹ ನಿರಾಸಕ್ತಿ ತೋರಿದ್ದರು.
ಲಾಕ್ಡೌನ್ ಮಾಡಿದ್ರೆ ಆರ್ಥಿಕ ಹೊಡೆತ ಬೀಳುವ ಆತಂಕ ಇದೆ. ಆರ್ಥಿಕ ಮುಗ್ಗಟ್ಟು ಎದುರಾಗಬಹುದಾದ ಆತಂಕದಿಂದಾಗಿ ಸಿಎಂ ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ರಾಜಧಾನಿ ಬೆಂಗಳೂರಿನಿಂದಲೇ ರಾಜ್ಯಕ್ಕೆ ಆತಿಹೆಚ್ಚು ಆದಾಯ ಬರುತ್ತೆ. ಒಟ್ಟು ಆದಾಯದ ಶೇ. 50ಕ್ಕಿಂತಲೂ ಹೆಚ್ಚು ಪಾಲು ಬೆಂಗಳೂರಿನದ್ದು. ಹೀಗಾಗಿ, ಲಾಕ್ಡೌನ್ ವಿಸ್ತರಣೆ ಆದ್ರೆ ಆದಾಯದ ಮೂಲ ಸ್ಥಗಿತಗೊಳ್ಳುತ್ತದೆ ಎಂಬುದು ಸಿಎಂ ಬಿಎಸ್ವೈ ಅಭಿಪ್ರಾಯ.
Published On - 9:47 am, Sat, 18 July 20