
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿಯೇ ಸಂವಿಧಾನದ 371J ಕಲಂ ಅಡಿಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನ ಸ್ಥಾಪಿಸಿ ಅಗತ್ಯ ಆರ್ಥಿಕ ಸಂಪನ್ಮೂಲಗಳನ್ನ ಒದಗಿಸಿದೆ.
ಪ್ರತಿ ವರ್ಷ 1,500 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ನೀಡುತ್ತಿದೆ. ಆದರೆ, ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿಲ್ಲಾ. ಇದರ ನಡುವೆ ಈ ಭಾಗದ ಜನರಿಗೆ ಸರ್ಕಾರ ಒಂದು ಬಿಗ್ ಶಾಕ್ ನೀಡಿದೆ. ಹೌದು, ಕೊರೊನಾ ನೆಪ ಹೇಳಿ 2020-21ರ ಹಣಕಾಸಿನ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್ಲಾಗ್ ಹುದ್ದೆಗಳು ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡದಂತೆ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ, ಮುಂದಿನ ಆದೇಶದವರಗೆ ಎಲ್ಲಾ ನೇಮಕಾತಿಗಳನ್ನು ತಡೆ ಹಿಡಿಯಲಾಗಿದೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಕೊರೊನಾದಿಂದ ಸಾಕಷ್ಟು ಆರ್ಥಿಕ ಸಮಸ್ಯೆ ಉಂಟಾಗಿದೆ. ಹೀಗಾಗಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಅಂತಾ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದ್ರೆ ಸರ್ಕಾರದ ಆದೇಶ ಕಲ್ಯಾಣ ಕರ್ನಾಟಕ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗೆ ದಿಢೀರನೆ ನೇಮಕಾತಿಗೆ ಬ್ರೇಕ್ ಹಾಕಿರೋದು ಇಲ್ಲಿನ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಯಾಕಂದ್ರೆ ಈಗಾಗಲೇ ಹಣಕಾಸು ಇಲಾಖೆಯ ಅನುಮತಿಯನ್ನು ಪಡೆದು, ನೇಮಕಾತಿಯ ವಿವಿಧ ಹಂತದಲ್ಲಿರುವ ಹುದ್ದೆಗಳನ್ನು ಸಹ ತಡೆ ಹಿಡಿಯಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 50 ಸಾವಿರ ಖಾಲಿ ಹುದ್ದೆಗಳನ್ನು ಗುರುತಿಸಲಾಗಿತ್ತು. ಅದ್ರೆ, ಇಲ್ಲಿಯವರಗೆ ಕೇವಲ 14 ಸಾವಿರ ಹುದ್ದೆಗಳನ್ನ ಮಾತ್ರ ಭರ್ತಿಮಾಡಲಾಗಿದೆ.
ಈ ಬಾರಿ ಸರ್ಕಾರ ಹುದ್ದೆಗಳನ್ನು ಭರ್ತಿ ಮಾಡುತ್ತೆ. ನಮಗೆ ಸರ್ಕಾರಿ ನೌಕರಿ ಸಿಗುತ್ತೆ ಎಂಬ ಆಸೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಈ ನಿರ್ಧಾರದಿಂದ ಬರಸಿಡಿಲು ಬಡಿದಂತಾಗಿದೆ. ಹೀಗಾಗಿ ಖಾಲಿಯಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಅಂತಾ ಜನರು ಆಗ್ರಹಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಇನ್ನೂ ಕೂಡ ಅಧ್ಯಕ್ಷ್ಯರ ನೇಮಕಾತಿಯಾಗಿಲ್ಲ. ಸ್ವತಃ ಮಂಡಳಿಯಲ್ಲೇ ಅನೇಕ ಹುದ್ದೆಗಳು ಖಾಲಿಯಿದೆ. ಜೊತೆಗೆ, ಮಂಡಳಿಗಾಗಿಯೇ ಪ್ರತ್ಯೇಕ ಸಚಿವಾಲಯವನ್ನು ಕೂಡಾ ಪ್ರಾರಂಭಿಸೋದಾಗಿ ಸಿಎಂ ಹೇಳಿದ್ರು. ಅದು ಕೂಡಾ ಭರವಸೆಯಾಗಿಯೇ ಉಳಿದುಬಿಟ್ಟಿದೆ. ಇದೀಗ ಮತ್ತೊಂದು ಪೆಟ್ಟನ್ನು ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನೀಡಿದ್ದು, ಸರ್ಕಾರದ ವಿರುದ್ಧ ಜನರ ಸಿಟ್ಟು ಹೆಚ್ಚಾಗುವಂತೆ ಮಾಡಿದೆ. -ಸಂಜಯ್.ಚಿಕ್ಕಮಠ
Published On - 11:57 am, Wed, 8 July 20