ಸಿಡ್ನಿ: ಎಸ್‌ಸಿಜಿಯಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರ ಬಗೆಗಿನ ಜನಾಂಗೀಯ ನಿಂದನೆ ಆರೋಪದ ಮೇಲೆ 6 ಪ್ರೇಕ್ಷಕರನ್ನು ಕ್ರೀಡಾಂಗಣದಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ.
ಈ ಎಲ್ಲಾ ಆರೋಪಿಗಳನ್ನು ಕ್ರೀಡಾಂಗಣದಲ್ಲಿ ಹಾಜರಿದ್ದ ಭದ್ರತಾ ಅಧಿಕಾರಿಗಳು ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ (ಸಿಎ) ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ. ಅದೇ ಸಮಯದಲ್ಲಿ, ಇಂತಹ ಘಟನೆ ಸತತ ಎರಡನೇ ದಿನವೂ ಮರುಕಳಿಸಿರುವುದರಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯಾ, ಭಾರತೀಯ ತಂಡದ ಕ್ಷಮೆಯಾಚಿಸಿದೆ. ಜೊತೆಗೆ ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ಭಾರತ ತಂಡಕ್ಕೆ ಭರವಸೆ ನೀಡಲಾಗಿದೆ.
ಸಿಡ್ನಿ ಟೆಸ್ಟ್‌ನ ಎರಡನೇ ದಿನ, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ, ಪ್ರೇಕ್ಷಕರಿಂದ ಜನಾಂಗೀಯ ನಿಂದನೆಯಾಗುತ್ತಿದೆ ಎಂದು ಅಂಪೈರ್‌ಗಳಿಗೆ ದೂರು ನೀಡಿದ್ದರು. ಇದಾದ ಬಳಿಕ ಭಾರತೀಯ ತಂಡದ ಆಡಳಿತ ಮಂಡಳಿ ಅಧಿಕೃತವಾಗಿ ಈ ವಿಷಯವನ್ನು ಕೈಗೆತ್ತಿಕೊಂಡು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ದೂರು ನೀಡಿತ್ತು. ಆ ವಿಷಯದ ತನಿಖೆ ಐಸಿಸಿಯಿಂದ ನಡೆಯುತ್ತಿದೆ, ಆದರೆ ಜನವರಿ 10ರ ಭಾನುವಾರ, ಎರಡನೇ ಅಧಿವೇಶನದಲ್ಲಿ ಮತ್ತೊಮ್ಮೆ, ಕೆಲವು ವೀಕ್ಷಕರು ಸಿರಾಜ್ ಕುರಿತು ಇಂತಹ ಕಾಮೆಂಟ್‌ಗಳನ್ನು ಪುನರಾವರ್ತಿಸಿದರು.
6 ಆರೋಪಿಗಳ ವಿಚಾರಣೆ; ಕ್ರೀಡಾಂಗಣದಿಂದ ಸ್ಥಳಾಂತರ
ಸಿರಾಜ್ ಅವರ ದೂರಿನ ನಂತರ, ಅಂಪೈರ್‌ಗಳು ಆಟವನ್ನು ನಿಲ್ಲಿಸಿ ಕ್ರೀಡಾಂಗಣದ ಭದ್ರತಾ ಸಿಬ್ಬಂದಿಯೊಂದಿಗೆ ಮಾತನಾಡಿದರು. ಸಿರಾಜ್ ದೂರಿನನ್ವಯ ಭದ್ರತಾ ಸಿಬ್ಬಂದಿಗಳು ಅನೇಕ ಜನರನ್ನು ಪ್ರಶ್ನಿಸಿ, 6 ಜನರನ್ನು ಕ್ರಿಡಾಂಗಣದಿಂದ ಹೊರಕ್ಕೆ ಕಳುಹಿಸಿದರು. ಈ ಘಟನೆಯಿಂದಾಗಿ ಪಂದ್ಯವು ಸುಮಾರು 10 ನಿಮಿಷಗಳ ಕಾಲ ನಿಂತುಹೋಯಿತು.
ಆಸ್ಟ್ರೇಲಿಯಾದ ಮಾಧ್ಯಮಗಳ ವರದಿ ಪ್ರಕಾರ, ಈ ಎಲ್ಲಾ ಆರೋಪಿಗಳನ್ನು ಕ್ರೀಡಾಂಗಣದ ಪೊಲೀಸ್ ಕೋಣೆಗೆ ಕರೆದೊಯ್ದು ಪ್ರಶ್ನಿಸಲಾಗಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಸಮಗ್ರತೆ ಮತ್ತು ಭದ್ರತಾ ಘಟಕದ ಮುಖ್ಯಸ್ಥ ಸೀನ್ ಕರೋಲ್ ಕೂಡ ಪ್ರಶ್ನಿಸಿದ್ದಾರೆ ಎಂಬುದು ತಿಳಿದುಬಂದಿದೆ.
ಮಂಡಳಿಯು ಇಂತಹ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ..
ಸತತ 2 ದಿನಗಳಿಂದ ಇಂತಹ ಪ್ರಕರಣಗಳು ನಡೆದಿದರಿಂದ, ಕ್ರಿಕೆಟ್ ಆಸ್ಟ್ರೇಲಿಯಾ ಈ ಘಟನೆಯನ್ನು ಖಂಡಿಸಿ ಅಧಿಕೃತ ಹೇಳಿಕೆ ನೀಡಿದೆ. ಮಂಡಳಿಯು ಇಂತಹ ಯಾವುದೇ ರೀತಿಯ ದುಷ್ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದೆ. ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಮತ್ತು ಘಟನೆಯನ್ನು ಬಲವಾಗಿ ಖಂಡಿಸಲಾಗಿದೆ ಎಂದು ಸಿಎ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ನೀವು ಯಾವುದೇ ಜನಾಂಗೀಯ ಟೀಕೆಗಳನ್ನು ಮಾಡಿದರೆ, ನಿಮ್ಮನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ವಾಗತಿಸುವುದಿಲ್ಲ ಎಂದು ಕರೋಲ್ ಹೇಳಿಕೆ ನೀಡಿದ್ದಾರೆ.
ಟೀಂ ಇಂಡಿಯಾದ ಕ್ಷಮೆಯಾಚಿಸಿದ ಆತಿಥೇಯರು..
ಐಸಿಸಿ ತನಿಖೆಯ ಫಲಿತಾಂಶಕ್ಕಾಗಿ ಮಂಡಳಿ ಕಾಯುತ್ತಿದ್ದು, ಆಪಾದಿತರು, ತಪ್ಪಿತಸ್ಥರೆಂದು ಕಂಡುಬಂದಲ್ಲಿ ನಿಷೇಧ ಸೇರಿದಂತೆ ಇತರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಈ ಬಗ್ಗೆ ನ್ಯೂ ಸೌತ್ ವೇಲ್ಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಭಾರತ ತಂಡಕ್ಕೆ ಕ್ಷಮೆಯಾಚಿಸಿದೆ ಎಂದು ಕರೋಲ್ ಹೇಳಿದರು.
ಜೊತೆಗೆ ಸರಣಿಯ ಆತಿಥೇಯರಾದ ನಾವು, ಭಾರತೀಯ ಕ್ರಿಕೆಟ್ ತಂಡದ ನಮ್ಮ ಸ್ನೇಹಿತರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ಈ ವಿಷಯದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡುತ್ತೇವೆ ಎಂದಿದ್ದಾರೆ. ಕ್ರಿಕೆಟ್ ಜಗತ್ತು ಈ ಇಡೀ ವಿಷಯವನ್ನು ನಾಚಿಕೆಗೇಡಿನ ಸಂಗತಿಯೆಂದು ಬಣ್ಣಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
We have launched an investigation in parallel with NSW Police following a crowd incident at the SCG today. Full statement ? pic.twitter.com/D7Qu3SenHo
— Cricket Australia (@CricketAus) January 10, 2021