ಅಮಿತ್ ಶಾ ಭೇಟಿಯಾದ ಯಡಿಯೂರಪ್ಪ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ
ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಇಂದು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಭೇಟಿ ಹಾಗೂ ಮಾತುಕತೆಯ ವಿವರಗಳ ಬಗ್ಗೆ ಕುತೂಹಲ ಮೂಡಿದೆ.
ದೆಹಲಿ: ಕೇಂದ್ರ ಗೃಹ ಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿದ್ದಾರೆ. ದೆಹಲಿಯ ಕರ್ನಾಟಕ ಭವನದಿಂದ ತೆರಳಿದ ಯಡಿಯೂರಪ್ಪ, ನಗರದ ಕೃಷ್ಣ ಮೆನನ್ ಮಾರ್ಗದಲ್ಲಿರುವ ಅಮಿತ್ ಶಾ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಆಗಮಿಸಿದ್ದಾರೆ.
ಸಂಕ್ರಾಂತಿಗೂ ಮೊದಲು ಕರ್ನಾಟಕ ಸರ್ಕಾರದ ಸಂಪುಟ ಪುನಾರಚನೆ ಅಥವಾ ಸಂಪುಟ ವಿಸ್ತರಣೆ ಆಗುವ ಬಗ್ಗೆ ಹೇಳಲಾಗುತ್ತಿತ್ತು. ಶಾಸಕರಾದ ಎಂಟಿಬಿ ನಾಗರಾಜ್, ಮುನಿರತ್ನ ಹಾಗೂ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಸುದ್ದಿಗಳಾಗಿದ್ದವು. ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪ ದಿಢೀರ್ ಆಗಿ ಅಮಿತ್ ಶಾ ಭೇಟಿಯಾಗಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.
ಕಳೆದ ಬಾರಿ ಬಿಜೆಪಿ ರಾಜ್ಯ ಉಸ್ತುವಾರಿ, ಅರುಣ್ ಸಿಂಗ್ ಕರ್ನಾಟಕಕ್ಕೆ ಆಗಮಿಸಿದ್ದಾಗ, ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಅವರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದರು. ಬಳಿಕ, ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಮಾತೆತ್ತಿರಲಿಲ್ಲ. ಇಂದು ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ವಿಶ್ಲೇಷಿಸಲಾಗಿದೆ.
ಕೇವಲ ಸಂಪುಟ ವಿಸ್ತರಣೆಯಾಗಿದ್ರೆ ಯಡಿಯೂರಪ್ಪ ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಅಗತ್ಯವಿರಲಿಲ್ಲ ಎಂಬ ಮಾತುಗಳು ಈಗ ಕೇಳಿಬರುತ್ತಿದೆ. ಹಾಗಾಗಿ, ಇಂದು ಸಂಪುಟ ಪುನಾರಚನೆ ಬಗ್ಗೆ ಸಿಎಂ ಮಾತನಾಡಲಿದ್ದಾರೆ ಎಂಬ ಅಭಿಪ್ರಾಯಗಳಿವೆ. ಈ ಎಲ್ಲಾ ಗೊಂದಲಗಳಿಗೆ ಮುಖ್ಯಮಂತ್ರಿ ಶಾ ಭೇಟಿ ಮುಕ್ತಾಯವಾದ ಬಳಿಕವಷ್ಟೇ ಪರಿಹಾರ ಸಿಗಲಿದೆ.
ಬೆಳಗ್ಗೆ ಮಾತನಾಡಿದ್ದ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಕೂಡ ಭೇಟಿಯಾಗುತ್ತೇನೆ ಎಂದು ತಿಳಿಸಿದ್ದರು. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿರುವ ಕುರಿತು ವರಿಷ್ಠರಿಗೆ ವರದಿ ನೀಡುತ್ತೇನೆ ಎಂದು ಹೇಳಿದ್ದರು. ಜೊತೆಗೆ, ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚಿಸುವುದಾಗಿ ಮಾಹಿತಿ ನೀಡಿದ್ದರು.
ಸಂಕ್ರಾಂತಿಗೂ ಮುನ್ನವೇ ಸಂಪುಟ ವಿಸ್ತರಣೆಯಾಗುತ್ತಾ? ಇಂದು ದೆಹಲಿಗೆ ಹಾರಲಿದ್ದಾರೆ ಸಿಎಂ ಯಡಿಯೂರಪ್ಪ..
Published On - 3:38 pm, Sun, 10 January 21