ಮುಂದಿನ ಚುನಾವಣೆಗೆ ಇಂದೇ ಪ್ರಣಾಳಿಕೆ ಘೋಷಿಸಿದ HDK
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನೇರಳಕೆರೆ ಗ್ರಾಮದ ಸಭೆಯೊಂದರಲ್ಲಿ ಮಾತನಾಡಿದ ಹೆಚ್‌ಡಿಕೆ ಮುಂಬರುವ ಚುನಾವಣೆಗೆ ಈಗಲೇ ಪ್ರಣಾಳಿಕೆ ಘೋಷಿಸಿದ್ದಾರೆ.
ಮಂಡ್ಯ: ತಾನು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಏನೆಲ್ಲಾ ಮಾಡುವ ಕನಸು ಹೊತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು ನೇರಳಕೆರೆ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಗೆ ಆಶ್ವಾಸನೆ ರೂಪದ ಪ್ರಣಾಳಿಕೆಯನ್ನೇ ಘೋಷಿಸಿದರು.
ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ರಾಜ್ಯದಲ್ಲಿ ಹೊಸದಾಗಿ 50 ಲಕ್ಷ ಮನೆ ನಿರ್ಮಾಣ, 2ನೇ ವರ್ಷದಲ್ಲಿ ಪ್ರತಿ ಗ್ರಾ.ಪಂ ಮುಖ್ಯ ಕೇಂದ್ರದಲ್ಲಿ ಒಂದು ಪಬ್ಲಿಕ್ ಶಾಲೆ, 5,600 ಗ್ರಾ.ಪಂ ವ್ಯಾಪ್ತಿಯಲ್ಲಿ ಸುಸಜ್ಜಿತ ಶಾಲೆಗಳ ನಿರ್ಮಾಣ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ನೇಮಿಸುವ ಭರವಸೆ ನೀಡಿದ್ದಾರೆ.
ಇವಿಷ್ಟೇ ಅಲ್ಲ, ಇನ್ನೂ ಸಾಕಷ್ಟಿದೆ. ಚುನಾವಣೆ ಘೋಷಣೆಯಾಗಲಿ ಎಲ್ಲವನ್ನೂ ಹೇಳುತ್ತೇನೆ ಎಂದು ಕುಮಾರಸ್ವಾಮಿ ನಿರೀಕ್ಷೆ ಹುಟ್ಟುಹಾಕಲು ಯತ್ನಿಸಿದ್ದಾರೆ.
ನಮ್ಮ ಬಗ್ಗೆ ಅನುಮಾನ ಪಡಬೇಡಿ ಮೋದಿ 2 ಸಾವಿರ ರೂ. ರೈತರ ಖಾತೆಗೆ ಹಾಕಿದರೆ ಬಿಜೆಪಿಯವರು ಅದನ್ನೇ ದೊಡ್ಡ ಸಾಧನೆ ಎನ್ನುತ್ತಾರೆ. ನಾನು ಜಿಲ್ಲೆಗೆ ₹9 ಸಾವಿರ ಕೋಟಿ ಯೋಜನೆ ಕೊಟ್ಟೆ. ಆದರೂ ನನ್ನ ಸರ್ಕಾರವನ್ನು ಇಳಿಸಿದರು. ಮಂಡ್ಯ ಮೈಷುಗರ್ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಗುತ್ತಿಗೆ ನೀಡ್ತಿದ್ದಾರೆ. ನಾನು ಸಕ್ಕರೆ ಕಾರ್ಖಾನೆಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಯಾರೂ ಸಹ ನಮ್ಮ ಬಗ್ಗೆ ಅನುಮಾನ ಪಡಬೇಡಿ ಎಂದು ನೇರಳಕೆರೆಯಲ್ಲಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಪ್ರಹಾರ ಬೀಸಿದ್ದಾರೆ.
ನನ್ನದು ಕಮಿಷನ್ ಸರ್ಕಾರವೆಂದು ಕರೆಯಲು ಸಾಧ್ಯವಾ. ನಾನು ಕಮಿಷನ್ ಪಡೆದಿದ್ದರೆ 1 ಸಾವಿರ, 2 ಸಾವಿರ ಕೋಟಿ ಹಣ ಮಾಡಬಹುದಿತ್ತು. 25 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ನಾನು ರೈತರಿಂದ ಕಮಿಷನ್ ಪಡೆದಿದ್ದೇನಾ ಎಂದು HDK ಪ್ರಶ್ನೆ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ರೆ ಏನೂ ಕಮಿಷನ್ ಸಿಗಲ್ಲ. ಹಾಗಾಗಿ ಯಾರೂ ರೈತರ ಸಾಲ ಮನ್ನಾ ಮಾಡೋದಿಲ್ಲ. ಬಿಜೆಪಿಯವರು ರಾಮಮಂದಿರ ಕಟ್ಟುತ್ತೇವೆಂದು ಹೇಳ್ತಾರೆ. ಆದ್ರೆ ಅದೇ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಆಗ್ತಿದೆ. ಇವರು ಯುವಕರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಮನಗರದಂತೆ ಮಂಡ್ಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೆ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿದ್ದೀರಿ. ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಹಣ ಇಲ್ಲ ಅಂತಾರೆ. ಆದರೆ ಇವರಿಗೆ ದೋಚುವುದಕ್ಕೆ ಮಾತ್ರ ಹಣ ಇರುತ್ತೆ. ಚುನಾವಣೆ ಘೋಷಣೆಯಾಗಲಿ ಎಲ್ಲವನ್ನೂ ಹೇಳ್ತೀನಿ. ರಾಮನಗರದಂತೆ ಮಂಡ್ಯ ಅಭಿವೃದ್ಧಿಗೆ ನಾನು ಅಧಿಕಾರದಲ್ಲಿದ್ದಾಗ ಹಣ ಬಿಡುಗಡೆ ಮಾಡಿದ್ದೆ. ಆದ್ರೆ ಎಲ್ಲಾ ಕಳ್ಳರು ಬೇರೆ ಕೆಲಸಕ್ಕೆ ಹಣ ಬಳಸಿಕೊಳ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನಾನು ಮಂಡ್ಯ ಜಿಲ್ಲೆ ಜನರ ಋಣವನ್ನು ತೀರಿಸಬೇಕಿದೆ. ಈ ಭೂಮಿಗೆ ಸೇರುವ ಮೊದಲು ಋಣ ತೀರಿಸಬೇಕಿದೆ. ಅಲ್ಲಿಯವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ನನ್ನನ್ನು ಮತ್ತೆ ಸಿಎಂ ಮಾಡಿ. ಸಿಎಂ ಆದರೆ ಆಡಳಿತ ನಡೆಸೋದು ಹೇಗೆಂದು ತೋರಿಸ್ತೇನೆ ಎಂದು ಹೆಚ್‌ಡಿಕೆ ಮನವಿ ಮಾಡಿಕೊಂಡ್ರು.
ಮಂಡ್ಯ ಜಿಲ್ಲಾಧಿಕಾರಿ ಗುಮಾಸ್ತನಾಗುವುದಕ್ಕೂ ಲಾಯಕ್ಕಿಲ್ಲ ಇನ್ನು ಮಾತು ಮುಂದುವರೆಸಿದ HDK ಮಂಡ್ಯ ಜಿಲ್ಲಾಧಿಕಾರಿ ಗುಮಾಸ್ತನಾಗುವುದಕ್ಕೂ ಲಾಯಕ್ಕಿಲ್ಲ. ಆದ್ರೆ ಸಚಿವ ಜೆ.ಸಿ.ಮಾಧುಸ್ವಾಮಿಯಂತೆ ನಾನು ಮಾತಾಡಲ್ಲ. ಮಾಧುಸ್ವಾಮಿ ತುಮಕೂರಿನಲ್ಲಿ ಹೇಳಿದಂತೆ ಇಲ್ಲಿ ಹೇಳಲಿ. ಮಂಡ್ಯ ಜಿಲ್ಲೆಗೆ ಬಂದು ಜಿಲ್ಲಾಧಿಕಾರಿಗಳಿಗೆ ಹೇಳಬೇಕಿತ್ತು ಎಂದು ಮಾಧುಸ್ವಾಮಿ ವಿರುದ್ಧ ಗುಡುಗಿದ್ದಾರೆ.
‘ಆತ್ಮನಿರ್ಭರ’ ಜಾರಿಗೆ ಬರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆಯನ್ನು ಹೊಂದಿತ್ತು: ಎಚ್ಡಿ ಕುಮಾರಸ್ವಾಮಿ
Published On - 3:19 pm, Sun, 10 January 21