ಭಾರತದ ಅತಿ ದೊಡ್ಡ ಸಾಫ್ಟ್ವೇರ್ ಸೇವಾ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನಿಂದ ಶುಕ್ರವಾರ (ಮಾರ್ಚ್ 19, 2021) ಉದ್ಯೋಗಿಗಳಿಗೆ ವೇತನ ಹೆಚ್ಚಳವನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್ 1ನೇ ತಾರೀಕಿನಿಂದ ವೇತನ ಹೆಚ್ಚಳ ಜಾರಿಗೆ ಬರಲಿದೆ. ಈ ಬಗ್ಗೆ ಮಿಂಟ್ ವರದಿ ಮಾಡಿದ್ದು, ಈ ಕುರಿತು ಟಿಸಿಎಸ್ ವಕ್ತಾರರನ್ನು ಮಾತನಾಡಿಸಿದೆ. 2021ರ ಏಪ್ರಿಲ್ನಿಂದ ಎಲ್ಲ ಕಡೆಯಲ್ಲಿ ಈ ವೇತನದ ಹೆಚ್ಚಳವನ್ನು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.
ಮುಂಬೈ ಮೂಲದ ಈ ಐ.ಟಿ. ಕಂಪೆನಿಯಲ್ಲಿ 4 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಾರೆ. ಈ ನಿರ್ಧಾರದಿಂದ ಅವರಿಗೆಲ್ಲ ಅನುಕೂಲ ಆಗಲಿದೆ. FY22ಕ್ಕೆ ವೇತನ ಹೆಚ್ಚಳವನ್ನು ಘೋಷಿಸಿದ ಮೊದಲ ಐ.ಟಿ. ಕಂಪೆನಿ ಟಿಸಿಎಸ್. ಆರು ತಿಂಗಳಲ್ಲಿ ಇದು ಎರಡನೇ ಬಾರಿಗೆ ಟಿಸಿಎಸ್ ವೇತನ ಹೆಚ್ಚಳ ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸಂಬಳ ಹೆಚ್ಚಳ ಘೋಷಣೆ ಮಾಡಿತ್ತು.
ಮೂಲಗಳು ತಿಳಿಸಿರುವ ಪ್ರಕಾರ, ಕೋವಿಡ್ 19 ಬಿಕ್ಕಟ್ಟಿನ ಮಧ್ಯೆಯೂ FY21ರಲ್ಲಿ ಐಟಿ ವಲಯದ ನಿಯಮಾವಳಿಯಂತೆಯೇ ಸಂಬಳ ಹೆಚ್ಚು ಮಾಡಿತ್ತು. ಇನ್ನು ಮಾಮೂಲಿಯಾದ ಬಡ್ತಿ ಕ್ರಮದಂತೆ ಅದನ್ನು ಸಹ ಮುಂದುವರಿಸಿಕೊಂಡು ಹೋಗಲಿದೆ. FY22ಕ್ಕೆ ಟಿಸಿಎಸ್ ಉದ್ಯೋಗಿಗಳಿಗೆ ಸರಾಸರಿ ಶೇಕಡಾ 12ರಿಂದ 14ರಷ್ಟು ಹೆಚ್ಚಳ ಆರು ತಿಂಗಳ ಅವಧಿಯಲ್ಲಿ ದೊರೆಯಲಿದೆ.
ಡಿಸೆಂಬರ್ 31, 2020ಕ್ಕೆ ಕೊನೆಯಾದ ತ್ರೈಮಾಸಿಕದಲ್ಲಿ ಟಿಸಿಎಸ್ ಶೇಕಡಾ 7ರಷ್ಟು ಹೆಚ್ಚಿಗೆ ನಿವ್ವಳ ಲಾಭ ಪಡೆದು, 8701 ಕೋಟಿ ರೂಪಾಯಿಯನ್ನು ದಾಖಲಿಸಿದೆ. ಕೋವಿಡ್- 19 ಬಿಕ್ಕಟ್ಟಿನ ಸಂದರ್ಭದಲ್ಲಿ ಟಿಸಿಎಸ್ ಕಂಪೆನಿಯ ಕ್ಲೌಡ್ ಸೇವೆಗೆ ಹೆಚ್ಚಿನ ಬೇಡಿಕೆ ಬಂದು, ಅದರಿಂದ ಅನುಕೂಲ ಆಗಿದೆ. ಕಳೆದ ಒಂಬತ್ತು ವರ್ಷದಲ್ಲೇ ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಸಿಎಸ್ ದಾಖಲಿಸಿದ ಅತ್ಯುತ್ತಮ ಫಲಿತಾಂಶ ಇದು ಎಂದು ಹೇಳಿಕೊಳ್ಳಲಾಗಿದೆ. ಟಿಸಿಎಸ್ ಕಂಪೆನಿ ಷೇರಿನ ಬೆಲೆ ಶುಕ್ರವಾರದ ಕೊನೆಗೆ ಎನ್ಎಸ್ಇಯಲ್ಲಿ ರೂ. 3050.20ಕ್ಕೆ ವಹಿವಾಟು ಮುಗಿಸಿದೆ.
ಇದನ್ನೂ ಓದಿ: Accenture Employees Bonus: ಆಕ್ಸೆಂಚರ್ನ 2 ಲಕ್ಷ ಸಿಬ್ಬಂದಿಗೆ ದೊರೆಯಲಿದೆ ಬೋನಸ್