ಮೈಸೂರು: ಜಿಲ್ಲೆಯ ಕೊವಿಡ್ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಚಿನ್ನದ ಸರ ಕಳ್ಳತನವಾಗಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯ ಕುತ್ತಿಗೆಯಲ್ಲಿದ್ದ 26 ಗ್ರಾಂ ಚಿನ್ನದ ಸರ ಕಳವು ಆಗಿದೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಆಗಸ್ಟ್ 13ರಂದು ಜಿಲ್ಲೆಯ ಮೇಟಗಳ್ಳಿ ಆಸ್ಪತ್ರೆಯಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
56 ವರ್ಷದ ಮೈಸೂರಿನ ವಿದ್ಯಾ ನಗರದ ನಿವಾಸಿಯಾಗಿದ್ದ ಮಹಿಳೆ ಉಸಿರಾಟದ ಸಮಸ್ಯೆಯಿಂದ ಬಳಲ್ತಿದ್ದರು. ಹೀಗಾಗಿ, ಮಹಿಳೆಯನ್ನ ಮೇಟಗಳ್ಳಿ ಕೊವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತು. ಆದರೆ, ಆಸ್ಪತ್ರೆಗೆ ದಾಖಲಾದ ಕೆಲವೇ ಸಮಯದಲ್ಲಿ ಮಹಿಳೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ಕೊರೊನಾ ಟೆಸ್ಟ್ ಬಳಿಕ ಮಹಿಳೆಯ ಕುಟುಂಬಕ್ಕೆ ಆಸ್ಪತ್ರೆ ಸಿಬ್ಬಂದಿ ಮೃತದೇಹವನ್ನ ಹಸ್ತಾಂತರಿಸಿದ್ದರು. ಈ ವೇಳೆ ಮೃತಳ ಕುತ್ತಿಗೆಯಲ್ಲಿದ್ದ 26 ಗ್ರಾಂ ಚಿನ್ನದ ಸರ ಪತ್ತೆಯಾಗಿಲ್ಲ. ಆದ್ದರಿಂದ ಆಕೆಯ ಸರವನ್ನು ಯಾರೋ ಕದ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಆಸ್ಪತ್ರೆಯ ಮುಖ್ಯಸ್ಥರಿಗೂ ಮೃತ ಮಹಿಳೆಯ ಪುತ್ರ ರವೀಶ್ ದೂರು ನೀಡಿದ್ದಾರೆ. ಅವರಿಂದ ಇದುವರೆಗೂ ಯಾವುದೇ ಪ್ರತಿಕ್ರಿಯಿ ಸಿಕ್ಕಿಲ್ಲವಂತೆ. ಜೊತೆಗೆ, ಮೃತಳ ಕುಟುಂಬದ ಐವರಿಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಸಹ ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗಾಗಿ, ರವೀಶ್ ಪೊಲೀಸ್ ಠಾಣೆಗೆ ದೂರು ನೀಡಲು ಕೂಡ ಸಾಧ್ಯವಾಗಿಲ್ಲವಂತೆ. ಸದ್ಯ, ರವೀಶ್ ಮೇಟಗಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.