Viral Video: 72ವರ್ಷದ ಅನ್ಯೋನ್ಯ ದಾಂಪತ್ಯ; ಈ ಜಮಾನಾದ ಜೋಡಿಗಳಿಗೆ ಪ್ರೀತಿಯ ಗುಟ್ಟು ತಿಳಿಸಿದ ವೃದ್ಧ ದಂಪತಿ

|

Updated on: Apr 06, 2021 | 7:54 PM

ಈ ವಿಡಿಯೋವನ್ನು ವಿವರಿಸುವುದಕ್ಕಿಂತ ಸುಮ್ಮನೆ ನೋಡುವುದೇ ಉತ್ತಮ ಎನಿಸಿಬಿಡುತ್ತದೆ. ಶೇರ್​ ಆದ ಕೆಲವೇ ಕ್ಷಣದಲ್ಲಿ ಅನೇಕರ ಮನಗೆದ್ದಿದೆ. ಕೆಲವರೆಂತೂ ನಮಗೆ ಸಂತೋಷಕ್ಕೆ ಕಣ್ಣಲ್ಲಿ ನೀರು ಬಂತು ಎಂದು ಹೇಳಿಕೊಂಡಿದ್ದಾರೆ.

Viral Video: 72ವರ್ಷದ ಅನ್ಯೋನ್ಯ ದಾಂಪತ್ಯ; ಈ ಜಮಾನಾದ ಜೋಡಿಗಳಿಗೆ ಪ್ರೀತಿಯ ಗುಟ್ಟು ತಿಳಿಸಿದ ವೃದ್ಧ ದಂಪತಿ
ವೃದ್ಧ ದಂಪತಿ
Follow us on

ಈಗೀಗ ವೈವಾಹಿಕ ಸಂಬಂಧವೆನ್ನುವುದು ತೀರ ಜೊಳ್ಳೆನಿಸಿಕೊಳ್ಳುತ್ತಿದೆ. ಎಲ್ಲರೂ ಹಾಗೆಂದಲ್ಲ ಆದರೆ ವಿಚ್ಛೇದನದ ಪ್ರಮಾಣ ಜಾಸ್ತಿಯಾಗಿದ್ದಂತೂ ಸುಳ್ಳಲ್ಲ. ಮದುವೆಯಾಗಿ 10-20ವರ್ಷ ಕಳೆದ ಮೇಲೆ ಕೂಡ ಹೊಂದಾಣಿಕೆ ಸಾಧ್ಯವಾಗದೆ, ಇನ್ಯಾವುದೋ ಕಾರಣಕ್ಕೆ ಬೇರೆಯಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ನಮ್ಮ ಪೂರ್ವಜರು ಹಾಗಿರಲಿಲ್ಲ. ಈ ವೈವಾಹಿಕ ಬಂಧವನ್ನು ಗಟ್ಟಿಯಾಗಿಡುತ್ತಿದ್ದರು. ಅದೆಷ್ಟೇ ಮನಸ್ತಾಪಗಳು ಇದ್ದರೂ ವಿಚ್ಛೇದನದವರೆಗೆ ಹೋಗುತ್ತಿರಲಿಲ್ಲ. ಹೊಂದಾಣಿಕೆ, ಪ್ರೀತಿಯಿಂದ ಬಾಳುತ್ತಿದ್ದರು. ಈಗ ಅಂಥದ್ದೇ ಒಂದು ವೃದ್ಧ ದಂಪತಿಯ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ, ಪ್ರಮುಖ ಮಾಧ್ಯಮಗಳಲ್ಲಿ ಭರ್ಜರಿ ಸುದ್ದಿಯಾಗುತ್ತಿದೆ.

ಪತಿಗೆ 101 ವರ್ಷ, ಪತ್ನಿಗೆ 90 ವರ್ಷ. ಇವರಿಬ್ಬರ ವಯಸಿನ ಅಂತರ 11 ವರ್ಷ. ಮದುವೆಯಾಗಿ 72ವರ್ಷ ಒಟ್ಟಿಗೆ ಕಳೆದಿದ್ದಾರೆ. ಈಗಲೂ ತುಂಬ ಖುಷಿಯಿಂದ, ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಹೃದಯಸ್ಪರ್ಶಿ ಘಟನೆಗಳನ್ನು ಶೇರ್​ ಮಾಡಿಕೊಳ್ಳುವ ಹ್ಯೂಮನ್ಸ್ ಆಫ್​ ಬಾಂಬೆ ಎಂಬ ಇನ್​ಸ್ಟಾಗ್ರಾಂ ಪೇಜ್​ ಇವರಿಬ್ಬರ ಸ್ಟೋರಿಯ ಸಣ್ಣ ವಿಡಿಯೋವನ್ನು ಶೇರ್​ ಮಾಡಿಕೊಂಡಿದೆ. ಈ ಜೋಡಿ ತಮ್ಮ ಅನ್ಯೋನ್ಯ ದಾಂಪತ್ಯದ ಗುಟ್ಟನ್ನು ಹೇಳಿಕೊಂಡಿದೆ. ಅದನ್ನು ನೋಡಿದರೆ ತುಂಬ ಕ್ಯೂಟ್ ಎನ್ನಿಸದೆ ಇರದು.

ವಿಡಿಯೋ ಕ್ಲಿಪ್​ ನೋಡಿದರೆ ಎಂಥವರಿಗೂ ಮುಖದಲ್ಲೊಂದು ಮಂದಹಾಸ ಖಂಡಿತ ಮೂಡುತ್ತದೆ. ನೆಟ್ಟಿಗರೂ ಸಹ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ದಂಪತಿಯ ವಿಡಿಯೋದೊಟ್ಟಿಗೆ ಬರ್ಫಿ ಸಿನಿಮಾದ ಇತನಿ ಸೀ ಖುಷಿ ಎಂಬ ಹಾಡನ್ನು ಹಿನ್ನೆಲೆಯಾಗಿ ಸಂಯೋಜಿಸಲಾಗಿದೆ. ಗಂಡ-ಹೆಂಡತಿ ದಿನದಲ್ಲಿ ಒಂದು ಹೊತ್ತಾದರೂ ಪರಸ್ಪರ ಹಂಚಿಕೊಂಡು ತಿನ್ನಬೇಕು, ಏನೇ ಇರಲಿ ಪರಸ್ಪರ ಕೈ ಹಿಡಿದುಕೊಳ್ಳಿ, ಯಾವುದೇ ಜಗಳವಾಗಲಿ ಕ್ಷಮೆ ಕೇಳುವುದರಲ್ಲಿ ಸದಾ ಮುಂದಿರಿ. ಕೆಲವೊಮ್ಮೆ ಕಿವಿ, ಬಾಯಿಯನ್ನು ಸ್ವಲ್ಪ ಮುಚ್ಚಿಕೊಂಡಿದ್ದರೆ ತುಂಬ ಒಳ್ಳೆಯದು, ಯಾವುದೇ ಸಂದರ್ಭ ಬಂದರೂ ಒಟ್ಟಾಗಿರುತ್ತೇವೆ ಎಂಬ ಭರವಸೆಯನ್ನು ಪರಸ್ಪರರಿಗೆ ಕೊಡಿ ಮತ್ತು ಅದಕ್ಕೆ ಬದ್ಧವಾಗಿರಿ ಎಂಬಿತ್ಯಾದಿ ಒಳ್ಳೆಯ ಸಲಹೆಗಳನ್ನು ದಂಪತಿ ಕೊಟ್ಟಿದ್ದಾರೆ. ಇವೆಲ್ಲ ಸಂಬಂಧವನ್ನು ಗಟ್ಟಿಗೊಳಿಸುವ ಅಂಶಗಳು ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ವಿವರಿಸುವುದಕ್ಕಿಂತ ಸುಮ್ಮನೆ ನೋಡುವುದೇ ಉತ್ತಮ ಎನಿಸಿಬಿಡುತ್ತದೆ. ಶೇರ್​ ಆದ ಕೆಲವೇ ಕ್ಷಣದಲ್ಲಿ ಅನೇಕರ ಮನಗೆದ್ದಿದೆ. ಕೆಲವರೆಂತೂ ನಮಗೆ ಸಂತೋಷಕ್ಕೆ ಕಣ್ಣಲ್ಲಿ ನೀರು ಬಂತು ಎಂದು ಹೇಳಿಕೊಂಡಿದ್ದಾರೆ. ಹಾಗೇ, ವೈವಾಹಿಕ ಜೀವನಕ್ಕೆ ಸಂಬಂಧಪಟ್ಟಂತ ಹಲವು ಕಾಮೆಂಟ್​ಗಳನ್ನು ನೆಟ್ಟಿಗರು ನೀಡಿದ್ದಾರೆ. ಇನ್ನು ಈ ವೃದ್ಧ ದಂಪತಿಯದ್ದೇ ಒಂದು ಇನ್​ಸ್ಟಾಗ್ರಾಂ ಪೇಜ್​ ಇದ್ದು, ಅದರಲ್ಲಿ ಕೂಡ ತಮ್ಮ ವಿಡಿಯೋ, ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

Published On - 7:33 pm, Tue, 6 April 21