‘ನಕ್ಸಲ್ ಅಂಕಲ್.. ಪ್ಲೀಸ್ ನನ್ನ ಅಪ್ಪನನ್ನು ಬಿಟ್ಟುಬಿಡಿ’- ನಾಪತ್ತೆಯಾದ ಯೋಧ ರಾಕೇಶ್ವರ್ ಸಿಂಗ್​ರ 5ವರ್ಷದ ಮಗಳಿಂದ ಮನವಿ.. ಕಣ್ಣೀರು

ನನ್ನ ಪತಿ ಸುರಕ್ಷಿತರಾಗಿ ವಾಪಸ್​ ಬರುತ್ತಾರೆಂಬ ನಂಬಿಕೆ ಖಂಡಿತ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಾಯ ಮಾಡುತ್ತಾರೆ ಎಂದೂ ನಂಬಿಕೊಂಡಿದ್ದೇನೆ ಎಂದು ರಾಕೇಶ್ವರ್​ ಸಿಂಗ್​ ಪತ್ನಿ ಹೇಳಿದ್ದಾರೆ.

  • TV9 Web Team
  • Published On - 12:34 PM, 6 Apr 2021
‘ನಕ್ಸಲ್ ಅಂಕಲ್.. ಪ್ಲೀಸ್ ನನ್ನ ಅಪ್ಪನನ್ನು ಬಿಟ್ಟುಬಿಡಿ’- ನಾಪತ್ತೆಯಾದ ಯೋಧ ರಾಕೇಶ್ವರ್ ಸಿಂಗ್​ರ 5ವರ್ಷದ ಮಗಳಿಂದ ಮನವಿ.. ಕಣ್ಣೀರು
ರಾಕೇಶ್ವರ್​ ಸಿಂಗ್ ಪುತ್ರಿ ಅಳುತ್ತ ಮನವಿ ಮಾಡುತ್ತಿರುವುದು

ಚತ್ತೀಸ್​​ಗಡ್​​ನಲ್ಲಿ ನಕ್ಸಲರ ದಾಳಿಗೆ 22 ಯೋಧರು ಹುತಾತ್ಮರಾಗಿದ್ದಾರೆ. ಹಾಗೇ ಸಿಆರ್​ಪಿಎಫ್​ ಯೋಧ ರಾಕೇಶ್ವರ್​ ಸಿಂಗ್​ ಮನ್ಹಾ ನಾಪತ್ತೆಯಾಗಿದ್ದಾರೆ. ರಾಕೇಶ್ವರ್​ ಅವರೀಗ ನಕ್ಸಲರ ಸೆರೆಯಲ್ಲಿದ್ದಾರೆ ಎಂದು ಹೇಳಲಾಗಿದ್ದು, ಅವರ ಪತ್ನಿ ಕಣ್ಣೀರಿಡುತ್ತಿದ್ದಾರೆ. ನನ್ನ ಪತಿಯನ್ನು ಬಿಡಿಸಿಕೊಡಿ ಎಂದು ಮಾಧ್ಯಮಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಇದೀಗ ಅವರ 5ವರ್ಷದ ಮಗಳು ರಾಘವಿ ತನ್ನ ಅಪ್ಪನನ್ನು ಬಿಟ್ಟು ಬಿಡಿ ಎಂದು ನಕ್ಸಲರಿಗೆ ಮನವಿ ಮಾಡಿದ್ದು, ಈ ವಿಡಿಯೋ ತುಂಬ ವೈರಲ್ ಆಗುತ್ತಿದೆ.

‘ನಾನು ಅಪ್ಪನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ನನ್ನ ಅಪ್ಪನೆಂದರೆ ತುಂಬ ಪ್ರೀತಿ, ನಕ್ಸಲ್​ ಅಂಕಲ್​ ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟು ಕಳಿಸಿ..’ ಎಂದು ಕಣ್ಣೀರಿಡುತ್ತ, ಮುಗ್ಧವಾಗಿ ಕೇಳಿಕೊಂಡಿದ್ದಾಳೆ. ಆಕೆಯ ಜತೆ ಯೋಧನ ಕುಟುಂಬದವರೂ ಇದ್ದಾರೆ. ಅವರೂ ಕೂಡ ಬಿಕ್ಕಿಬಿಕ್ಕಿ ಅಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಶನಿವಾರ ಯೋಧರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 22 ಯೋಧರು ಮೃತಪಟ್ಟಿದ್ದು, ಅಂದಿನಿಂದಲೂ ರಾಕೇಶ್ವರ್​ ಸಿಂಗ್ ಕಾಣಿಸುತ್ತಿಲ್ಲ. ಅವರನ್ನು ನಕ್ಸಲರು ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡಿದ್ದಾರೆ ಎಂಬ ಅಪರಿಚಿತ ಕರೆಗಳು ಸ್ಥಳೀಯ ಪತ್ರಕರ್ತರಿಗೆ ಬರುತ್ತಿರುವುದಾಗಿ ಹೇಳಲಾಗಿದೆ. ಇನ್ನು ಅವರು ಮೂಲತಃ ಜಮ್ಮುವಿನವರಾಗಿದ್ದು, ಪತ್ನಿ, ಮಕ್ಕಳೆಲ್ಲ ಅಲ್ಲೇ ಇದ್ದಾರೆ. ರಾಕೇಶ್ವರ್ ಸಿಂಗ್ ನಾಪತ್ತೆ ಆದಾಗಿನಿಂದ ಅವರ ಜಮ್ಮುವಿನ ಮನೆಗೆ ಸಂಬಂಧಿಕರು, ಕುಟುಂಬದವರು ಭೇಟಿ ನೀಡುತ್ತಿದ್ದಾರೆ. ಸಿಆರ್​ಪಿಎಫ್​ ಅಧಿಕಾರಿಗಳೂ ಕೂಡ ಮನೆಗೆ ತೆರಳಿ ಸಮಾಧಾನ ಹೇಳಿದ್ದಾರೆ. ಸ್ಥಳಕ್ಕೆ ತೆರಳಿದ ಮಾಧ್ಯಮದವರ ಬಳಿ ರಾಕೇಶ್ವರ್​ ಸಿಂಗ್ ಮಗಳಷ್ಟೇ ಅಲ್ಲ, ಸೋದರಿಯ ಮಗ ಏಳು ವರ್ಷದ ಬಾಲಕ ಆಕಾಶ್​ ಕೂಡ ಮನವಿ ಮಾಡುತ್ತಿದ್ದಾನೆ. ‘ಅಂಕಲ್​ ನೀವು ಮೀಡಿಯಾದಲ್ಲಿ ಇದ್ದೀರಿ.. ನಿಮಗೆಲ್ಲ ಗೊತ್ತಿರುತ್ತದೆ. ಹಾಗೇ, ನನ್ನ ಅಂಕಲ್ ಎಲ್ಲಿದ್ದಾರೆಂದೂ ನಿಮಗೆ ಗೊತ್ತಿದೆ ಅಲ್ವಾ? ಪ್ಲೀಸ್ ಹೇಳಿ’ ಎಂದು ಕೇಳಿಕೊಳ್ಳುತ್ತಿದ್ದಾನೆ.

ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ರಾಕೇಶ್ವರ್ ಸಿಂಗ್ ಪತ್ನಿ, ಮೀನು ಮನ್ಹಾಸ್​, ಐದು ದಿನಗಳ ಹಿಂದಷ್ಟೇ ನಾನು ನನ್ನ ಪತಿಯೊಂದಿಗೆ ಫೋನ್​​ನಲ್ಲಿ ಮಾತನಾಡಿದ್ದೆ. ಮುಖ್ಯವಾದ ಕಾರ್ಯಾಚರಣೆಗೆ ಹೋಗುತ್ತಿದ್ದೇನೆ, ಅಲ್ಲಿಂದ ಬಂದ ನಂತರ ಮಾತನಾಡುತ್ತೇನೆ ಎಂದು ಹೇಳಿದ್ದರು. ನಂತರ ಶನಿವಾರ ನಕ್ಸಲರ ಕ್ರೌರ್ಯದ ವರದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ತುಂಬ ಹೆದರಿಕೆಯಾಗಿ ನನ್ನ ಪತಿಗೆ ಕರೆ ಮಾಡಿದೆ. ಆದರೆ ಪ್ರತಿಕ್ರಿಯೆ ಇರಲಿಲ್ಲ. ಅದಾದ ಬಳಿಕ ಪತಿಯ ಸಹೋದ್ಯೋಗಿಗೆ ಕರೆ ಮಾಡಿದೆ. ಆಗ ನನ್ನ ಪತಿ ನಾಪತ್ತೆಯಾಗಿರುವುದು ನನಗೆ ತಿಳಿಯಿತು ಎಂದು ಹೇಳಿದ್ದಾರೆ.

ನನ್ನ ಪತಿ ಸುರಕ್ಷಿತರಾಗಿ ವಾಪಸ್​ ಬರುತ್ತಾರೆಂಬ ನಂಬಿಕೆ ಖಂಡಿತ ಇದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಾಯ ಮಾಡುತ್ತಾರೆ ಎಂದೂ ನಂಬಿಕೊಂಡಿದ್ದೇನೆ. ವಿಂಗ್ ಕಮಾಂಡರ್​ ಅಭಿನಂದನ್​ರನ್ನು ಪಾಕಿಸ್ತಾನ ಬಂಧಿಸಿದಾಗ ಅವರನ್ನು ಸುರಕ್ಷಿತವಾಗಿ ವಾಪಸ್​ ಕರೆದುಕೊಂಡು ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದರು. ಈಗ ನನ್ನ ಪತಿಯನ್ನೂ ಕಾಪಾಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚತ್ತೀಸ್​ಗಡ್​ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ

ಕಾಣೆಯಾದ 35ವರ್ಷದ ಯೋಧ ನಕ್ಸಲರ ಬಂಧನದಲ್ಲಿ; ‘ನನ್ನ ಪತಿಯನ್ನು ಬಿಡಿಸಿಕೊಡಿ’ ಎಂದು ಕಣ್ಣೀರು ಹಾಕುತ್ತಿರುವ ಪತ್ನಿ

 

Daughter of missing CRPF jawan Rakeshwar Singh Manhas request to Naxals for her Father release