ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ.ರಮಣ ನೇಮಕ; ಏಪ್ರಿಲ್ 24ಕ್ಕೆ ಪ್ರಮಾಣವಚನ ಸ್ವೀಕಾರ
ಸುಪ್ರಿಂಕೋರ್ಟ್ನ 48ನೇ ನ್ಯಾಯಮೂರ್ತಿಯಾಗಿ ಏಪ್ರಿಲ್ 24ರಂದು ಪ್ರಮಾಣವಚನ ಸ್ವೀಕರಿಸಲಿರುವ ರಮಣ, 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ.
ದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (CJI)ಯಾಗಿ ಎನ್.ವಿ.ರಮಣ ಹೆಸರು ಇಂದು ಅಂತಿಮಗೊಂಡಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ರಮಣ ಅವರನ್ನು ನೇಮಕಮಾಡಿದ್ದು, ಏಪ್ರಿಲ್ 24ರಂದು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಲಿದ್ದಾರೆ. ಈಗಿನ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.. ಹಾಗೇ, ಮುಂದಿನ ಸಿಜೆಐ ಸ್ಥಾನಕ್ಕೆ ಎನ್.ವಿ.ರಮಣ ಹೆಸರನ್ನು ಬೊಬ್ಡೆಯವರೇ ಶಿಫಾರಸು ಮಾಡಿದ್ದರು.
ಸುಪ್ರಿಂಕೋರ್ಟ್ನ 48ನೇ ನ್ಯಾಯಮೂರ್ತಿಯಾಗಿ ಏಪ್ರಿಲ್ 24ರಂದು ಪ್ರಮಾಣವಚನ ಸ್ವೀಕರಿಸಲಿರುವ ರಮಣ, 2022ರ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ. ಎನ್.ವಿ.ರಮಣ 1957ರ ಆಗಸ್ಟ್ 27ರಂದು ಆಂಧ್ರಪ್ರದೇಶದ ಪೊನ್ನಾವರಂ ಗ್ರಾಮದಲ್ಲಿ ಜನಿಸಿದ್ದಾರೆ. 1983ರ ಫೆಬ್ರವರಿ 10ರಿಂದ ವಕೀಲಿ ವೃತ್ತಿ ಪ್ರಾರಂಭಿಸಿದ ಇವರು 2000ರ ಜೂನ್ 27ರಂದು ಆಂಧ್ರಪ್ರದೇಶ ಹೈಕೋರ್ಟ್ನ ಮುಖ್ಯನ್ಯಾಯಾಧೀಶರಾಗಿ ನೇಮಕಗೊಂಡರು. 2014ರ ಫೆಬ್ರವರಿ 17ರಂದು ಸುಪ್ರಿಂಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದಾರೆ. ಕಳೆದವರ್ಷ ಅಕ್ಟೋಬರ್ನಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಮತ್ತು ಎನ್.ವಿ.ರಮಣ ಮಧ್ಯೆ ವಿವಾದವೊಂದು ಎದ್ದಿತ್ತು. ಜಗನ್ ಮೋಹನ್ ರೆಡ್ಡಿಯವರು ರಮಣ ವಿರುದ್ಧ ಗಂಭೀರ ಆರೋಪ ಮಾಡಿ, ಸಿಜೆಐ ಬೋಬ್ಡೆಯವರಿಗೆ ಪತ್ರ ಬರೆದಿದ್ದರು. ಇತ್ತೀಚೆಗಷ್ಟೇ ಈ ಆರೋಪದಿಂದ ಇವರಿಗೆ ಕ್ಲೀನ್ಚಿಟ್ ಸಿಕ್ಕಿದೆ.