ಮುಖ ದೃಢೀಕರಣದ ಮೂಲಕವೂ ಈಗ ಆಧಾರ್ ಕಾರ್ಡ್ ಡೌನ್ಲೋಡ್ ಸಾಧ್ಯ; ಯುಐಡಿಎಐ ವೆಬ್ಸೈಟ್ಗೆ ಹೋಗಿ ಈ ಕ್ರಮಗಳನ್ನು ಅನುಸರಿಸಿ
ಆಧಾರ್ ಕಾರ್ಡ್ ಹೊಂದಿರುವವರು UIDAI ವೆಬ್ಸೈಟ್ಗೆ ಹೋಗಿ ಆಧಾರ್ ನಂಬರ್ ನಮೂದಿಸಬೇಕು. ಅದಾದ ಬಳಿಕ ತಮ್ಮ ಮುಖವನ್ನು ಸರಿಯಾಗಿ ತೋರಿಸಿದರೆ ಆಧಾರ್ ಕಾರ್ಡ್ ಡೌನ್ಲೋಡ್ ಆಗುತ್ತದೆ.
ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸಿಮ್ ಕಾರ್ಡ್ ತೆಗೆದುಕೊಳ್ಳಲು ಸೇರಿ ಬಹುತೇಕ ಕೆಲಸಗಳಿಗೆ ಆಧಾರ್ ನಂಬರ್ ಬೇಕು. ಈಗಂತೂ ಕೊವಿಡ್-19 ಲಸಿಕೆ ತೆಗೆದುಕೊಳ್ಳಲೂ ಆಧಾರ್ ನಂಬರ್ ಕೊಡಲೇಬೇಕು. ಹಾಗೇ ಆನ್ಲೈನ್ ಮೂಲಕ ನಡೆಸುವ ಅದೆಷ್ಟೋ ಕೆಲಸಗಳಿಗೆ ಆಧಾರ್ ದೃಢೀಕರಣ ಮಾಡಲೇಬೇಕಾಗುತ್ತದೆ. ಹಾಗಂತ ಇಡೀ ದಿನ ನಮ್ಮ ಆಧಾರ್ ಕಾರ್ಡ್ ಜತೆಗೆ ಇಟ್ಟುಕೊಂಡೇ ಓಡಾಡಲು ಸಾಧ್ಯವಾಗುವುದಿಲ್ಲ.
ಕೆಲವೊಮ್ಮೆ ಯಾವುದೋ ಕೆಲಸಕ್ಕೆ ತುರ್ತಾಗಿ ನಿಮಗೆ ಆಧಾರ್ ಕಾರ್ಡ್ ಜೆರಾಕ್ಸ್ ಬೇಕಾಗಿರುತ್ತದೆ. ಆ ಸಮಯದಲ್ಲಿ ನಿಮ್ಮ ಬಳಿ ಆಧಾರ್ ಇರುವುದಿಲ್ಲ. ಉದಾಹರಣೆಗೆ ಬ್ಯಾಂಕ್ ಕೆಲಸಕ್ಕೆ ಹೋಗಿರುತ್ತೀರಿ. ಅಲ್ಲಿ ಯಾವುದೋ ಫಾರ್ಮ್ ತುಂಬಿ ಅದರ ಜತೆ ಆಧಾರ್ ಜೆರಾಕ್ಸ್ ಕೊಡಬೇಕಾಗಿರುತ್ತದೆ. ಆದರೆ ನಿಮ್ಮೊಂದಿಗೆ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿರುವುದಿಲ್ಲ. ಆ ಸಂದರ್ಭದಲ್ಲಿ ಸುಮ್ಮನೆ ಬರುವುದು ಅನಿವಾರ್ಯವಾಗುತ್ತದೆ. ಆದರೆ ಅಂಥ ಪರಿಸ್ಥಿತಿಯನ್ನು ನೀವು ಇ -ಆಧಾರ್ ಮೂಲಕ ನಿಭಾಯಿಸಬಹುದು.
UIDAI (Unique Identity – Aadhaar to all Residents of India) ಈಗ ಒಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇಷ್ಟು ದಿನ ನೀವು ನಿಮ್ಮ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ದಾಖಲಾತಿ ಸಂಖ್ಯೆ ಅಥವಾ ಆಧಾರ್ ನಂಬರ್ ನಮೂದಿಸಬೇಕಿತ್ತು. ಆದರೆ ಯುಐಡಿಎಐ ಪರಿಚಯಿಸಿರುವ ಹೊಸ ವೈಶಿಷ್ಟ್ಯದಡಿ, ನಿಮ್ಮ ಫೇಸ್ ಅಥಂಟಿಕೇಶನ್ (ಮುಖ ದೃಢೀಕರಣ) ಮೂಲಕವೂ ಆನ್ಲೈನ್ನಲ್ಲಿ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಆಧಾರ್ ಕಾರ್ಡ್ ಹೊಂದಿರುವವರು UIDAI ವೆಬ್ಸೈಟ್ಗೆ ಹೋಗಿ ಆಧಾರ್ ನಂಬರ್ ನಮೂದಿಸಬೇಕು. ಅದಾದ ಬಳಿಕ ತಮ್ಮ ಮುಖವನ್ನು ಸರಿಯಾಗಿ ತೋರಿಸಿದರೆ ಆಧಾರ್ ಕಾರ್ಡ್ ಡೌನ್ಲೋಡ್ ಆಗುತ್ತದೆ. ಇದು ಮೂಲ ಆಧಾರ್ ಕಾರ್ಡ್ನ ಕಾಪಿಯೇ ಆಗಿರುತ್ತದೆ. ಹಾಗೇ, ಇ -ಆಧಾರ್ ಕಾರ್ಡ್ಗೆ ದೇಶದೆಲ್ಲೆಡೆ ಮಾನ್ಯತೆ ಇದೆ.
ಮುಖದ ದೃಢೀಕರಣದ ಮೂಲಕ ಇ-ಆಧಾರ್ ಡೌನ್ಲೋಡ್ ಮಾಡಿಕೊಳ್ಳಲು ಹೀಗೆ ಮಾಡಿ:
- UIDAI ವೆಬ್ಸೈಟ್ uidai.gov.in ಗೆ ಭೇಟಿ ನೀಡಿ
- ವೆಬ್ಸೈಟ್ ಪೇಜ್ನ ಕೆಳಭಾಗದಲ್ಲಿರುವ Get Aadhaar Card ಎಂಬಲ್ಲಿ ಕ್ಲಿಕ್ ಮಾಡಿ
- ಆಗ ಇನ್ನೊಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅದರಲ್ಲಿನ ಆಧಾರ್ ಕಾರ್ಡ್ ಸೆಕ್ಷನ್ನಲ್ಲಿ ನಿಮ್ಮ ಫೇಸ್ ದೃಢೀಕರಣದ ಆಯ್ಕೆ ಕಾಣಿಸುತ್ತದೆ.
- Face Authentication ಎಂಬಲ್ಲಿ ಕ್ಲಿಕ್ ಮಾಡುವ ಮೊದಲು ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು ಹಾಗೂ CAPTCHA ಕೋಡ್ ದೃಢೀಕರಿಸಬೇಕು.
- ಅದಾದ ಬಳಿಕ ನಿಮ್ಮ ಮುಖವನ್ನು ದೃಢೀಕರಿಸುವ ಪ್ರಕ್ರಿಯೆ ಶುರುವಾಗುತ್ತದೆ. OK ಎಂಬಲ್ಲಿ ಕ್ಲಿಕ್ ಮಾಡಿದರೆ ಕ್ಯಾಮರಾ ತೆರೆದುಕೊಳ್ಳುತ್ತದೆ. UIDAI ಸ್ವಯಂಚಾಲಿತವಾಗಿ ನಿಮ್ಮ ಫೋಟೋ ಸೆರೆಹಿಡಿಯುತ್ತದೆ.
- ಫೋಟೋ ಕ್ಲಿಕ್ ಆಗಿ, ಅದು ಪರಿಶೀಲನೆ ಆದ ಬಳಿಕ ಆಧಾರ್ ಕಾರ್ಡ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
KSRTC BMTC Strike: ಎಲ್ಲೆಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ? ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ?