KSRTC BMTC Strike: ಎಲ್ಲೆಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ? ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ?

Bus Strike: ಸಾರಿಗೆ ಬಸ್​ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಬಿಸಿ ತಟ್ಟಿದೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಎಂದಿನಂತೆ ಬಸ್ ಸಂಚರಿಸುತ್ತಿದೆ. ಹಾಗಾದರೆ ಬಸ್​ಗೆಂದು ಕಾದು ಕುಳಿತಿರುವ ಜನರ ಪರಿಸ್ಥಿತಿ ಹೇಗಿದೆ ಎಂಬುದನ್ನು ಗಮನಿಸೋಣ.

KSRTC BMTC Strike: ಎಲ್ಲೆಲ್ಲಿ ಸಾರಿಗೆ ನೌಕರರ ಮುಷ್ಕರದ ಬಿಸಿ? ಜಿಲ್ಲೆಗಳಲ್ಲಿ ಹೇಗಿದೆ ಪರಿಸ್ಥಿತಿ?
ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್​ಗಳು
Follow us
|

Updated on:Apr 07, 2021 | 11:52 AM

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಕೋಪಗೊಂಡು ಕೆಎಸ್​​ಆರ್​ಟಿಸಿ, ಬಿಎಂಟಿಸಿ ಬಸ್​ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಇರದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್​ಆರ್​​ಟಿಸಿ, ಬಿಎಂಟಿಸಿ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ತರು ಬೆಳಿಗ್ಗೆಯಿಂದ ಬಸ್ಟ್ಯಾಂಡ್​ನಲ್ಲಿ ಕಾದು ಕುಳಿತಿದ್ದಾರೆ. ಬಸ್​ ಮಾತ್ರ ಸಂಚರಿಸುತ್ತಿಲ್ಲ. ಇದರ ಪರ್ಯಾಯವಾಗಿ ಖಾಸಗಿ ಬಸ್​ಗಳನ್ನು ರಸ್ತೆಗೆ ಬಿಡಲಾಗುತ್ತಿದ್ದರೂ ಕೂಡಾ ಪ್ರಯಾಣಿಕರೆಲ್ಲ ತುಂಬಿ ಖಾಸಗಿ ಬಸ್​ನಲ್ಲಿ ಜಾಗವೇ ಇಲ್ಲದಂತಾಗಿದೆ. ಅರ್ಧಕ್ಕರ್ಧ ಜನರು ಪ್ರಯಾಣ ಕೈಗೊಳ್ಳದೇ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವರು ಕಾಲ್ನಡಿಗೆಯಲ್ಲಿ ಮನೆಗೆ ತೆರಳುತ್ತಿದ್ದಾರೆ. ಯಾವ ಯಾವ ಜಿಲ್ಲೆಗಳಲ್ಲಿ ಸಾರಿಗೆ ಮುಷ್ಕರ ಬಿಸಿ ತಟ್ಟಿದೆ. ಎಲ್ಲೆಲ್ಲಿ ಬಸ್​ಗಳು ಎಂದಿನಂತೆ ಸಂಚರಿಸುತ್ತಿವೆ. ಪ್ರಯಾಣಿಕರ ಸ್ಥಿತಿ ಹೇಗಿದೆ ಎಂಬುದನ್ನು ನೋಡೋಣ.

ಬೆಂಗಳೂರು ಮೆಜೆಸ್ಟಿಕ್‌ನ ಬಸ್ ನಿಲ್ದಾಣಕ್ಕೆ ಏರ್‌ಪೋರ್ಟ್- ಕೆ.ಆರ್.ಪುರಂ ಮಾರ್ಗದ 2 ಬಿಎಂಟಿಸಿ ಬಸ್ ಬೆಳಿಗ್ಗೆ ಬಂದಿದೆ. ಆದರೂ ಕೂಡಾ ಶಿಫ್ಟ್ ಮುಗಿದಿದೆ ಬಸ್‌ ಡಿಪೋಗೆ ಹಾಕಿ ಮನೆಗೆ ಹೋಗುತ್ತೇವೆ ಎಂದು ಬಿಎಂಟಿಸಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಪ್ರತಿಕ್ರಿಯೆ ನೀಡಿದ್ದಾರೆ. ಬಸ್​ ಸಂಚಾರವಿಲ್ಲದ ಕಾರಣ ಮೆಜೆಸ್ಟಿಕ್​ ಬಸ್​ಟ್ಯಾಂಡ್​ನ ಒಳಗೆ ಆಟೋಗಳು ಬಂದು ನಿಂತಿವೆ. ಪ್ರಯಾಣಿಕರು ಕಾದು ಕುಳಿತಿದ್ದರೂ ಒಂದಾನೊಂದು ಖಾಸಗಿ ಬಸ್​ಗಳ ಸಂಚಾರವೂ ಕಂಡು ಬಂದಿಲ್ಲ. ಬಸ್ ಇಲ್ಲದ ಕಾರಣ ಪುಟ್ಟ ಕಂದಮ್ಮನ ಜೊತೆಗೆ ತಾಯಿ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ. ಮೆಜೆಸ್ಟಿಕ್​ನಿಂದ ಬನಶಂಕರಿಯ ಕಡೆಗೆ ತಾಯಿ-ಮಗು ತೆರಳಬೇಕಿತ್ತು. ಬೇರೆ ವಿಧಿ ಇಲ್ಲದೇ ನಡೆದೇ ಸಾಗುವ ಪರಿಸ್ಥಿತಿ ಎದುರಾಗಿದೆ.

ಕೊಪ್ಪಳದ ಎಂದಿನಂತೆ ಬಸ್​ ಸಂಚಾರ ಇಂದು ಸಾರಿಗೆ ನೌಕರರ ಮುಷ್ಕರ ಹಿನ್ನೆಯಲ್ಲಿ ಇಲ್ಲಿನ ಜನರಿಗೆ ಯಾವುದೇ ಬಿಸಿ ತಟ್ಟಿಲ್ಲ. ಎಂದಿನಂತೆಯೇ ಪ್ರಯಾಣಿಕರು ಬಸ್​ನಲ್ಲಿ ಸಂಚರಿಸುತ್ತಿದ್ದಾರೆ. ಬೆಳಿಗ್ಗೆ ಐದು ಗಂಟೆಯಿಂದಲೇ ಬಸ್ ಸಂಚಾರ ಆರಂಭಗೊಂಡಿದೆ. ಪ್ರತಿನಿತ್ಯದಂತೆ ಸಾರಿಗೆ ನೌಕರರು ಕೆಲಸಕ್ಕೆ ಹಾಜಾರಾಗಿದ್ದಾರೆ. ಮುಷ್ಕರದ ಬಿಸಿ ತಟ್ಟಬಹುದು ಎಂಬ ಕಾರಣಕ್ಕೆ ಬಸ್​ಸ್ಟಾಂಡಿನಲ್ಲಿ ಪೊಲೀಸರು ಕಾವಲು ನಿಂತಿದ್ದಾರೆ. ಬಸ್ ಸಂಚಾರ ಆರಂಭಿಸುವಂತೆ ಸಿಬ್ಬಂದಿಗೆ, ವಿಭಾಗೀಯ ನಿಯಂತ್ರಣಾಧಿಕಾರಿ ಎ.ಹೆಚ್​ ಮುಲ್ಲಾ ಒತ್ತಾಯ ಮಾಡಿದ್ದಾರೆ. ಹೀಗಾಗಿ ಒತ್ತಡಕ್ಕೆ ಮಣಿದು ನಿಲ್ದಾಣದಲ್ಲಿ ಬಸ್ ನಿಲ್ಲಿಸಲಾಗಿದೆ. ಆದರೆ, ರೂಟ್‌ಗೆ ತೆರಳುವುದಕ್ಕೆ ಚಾಲಕರ ಹಿಂದೇಟು ಹಾಕುತ್ತಿದ್ದಾರೆ.

ಯಾದಗಿರಿಯಲ್ಲಿ ಬಸ್​ಗಳಿಲ್ಲದೇ ತಾಯಿ ಜೊತೆ 5 ತಿಂಗಳ ಮಗು ಪರದಾಟ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಸ್ ಇಲ್ಲದೆ ತಾಯಿ ಮಗು ಪರದಾಡುವ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಗೆ ಹೋಗಲು ತನ್ನ 5 ತಿಂಗಳ ಮಗುವಿನ ಜೊತೆ ತಾಯಿ ಬಂದಿದ್ದರು. ಬಸ್​ಗಳಿಲ್ಲದೇ ತಾಯಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹೊನಗೇರ ಗ್ರಾಮದ ಕಮಲಮ್ಮ ತನ್ನ ಪುಟ್ಟ ಕಂದಮ್ಮನೊಂದಿಗೆ ಆಸ್ಪತ್ರೆಗೆ ತೆರಳಬೇಕಿತ್ತು.

ಬಾಗಲಕೋಟೆ ಜಿಲ್ಲೆಯಲ್ಲಿ ಬಸ್​ ಸಂಚಾರ ಸ್ಥಗಿತ ಸರ್ಕಾರದ ಮುಂದಿಟ್ಟ ಬೇಡಿಕೆ ಈಡೇರಿಕೆಗಾಗಿ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಸ್​ ಸಂಚಾರ ಸ್ಥಗಿತಗೊಂಡಿದೆ. ಬಸ್​ ನಿಲ್ದಾಣದಲ್ಲಿ ಬಸ್​ಗಳೆಲ್ಲ ನಿಂತಲ್ಲೇ ನಿಂತಿವೆ. ಚಿಕ್ಕ-ಪುಟ್ಟ ಮಕ್ಕಳ ಜೊತೆಗಿದ್ದ ಪೋಷಕರು ದಿಕ್ಕು ತೋಚದೆ ಬಸ್​ ನಿಲ್ದಾಣದಲ್ಲಿಯೇ ಕಾಯುವ ಪರಿಸ್ಥಿತಿ ಎದುರಾಗಿದೆ. ಇನ್ನು ಕೆಲವರು ನಡೆದುಕೊಂಡು ತಮ್ಮ ಮನೆಗೆ ತೆರಳುತ್ತಿದ್ದಾರೆ.

ಚಿತ್ರದುರ್ಗದಲ್ಲೂ ಬಸ್​ ಬಂದ್​ ಜಿಲ್ಲೆಯಲ್ಲಿ ಬಸ್​ಗಳಿಲ್ಲದೆ ಬಸ್ ನಿಲ್ದಾಣ ಖಾಲಿ ಖಾಲಿ ಅನಿಸುತ್ತಿದೆ. ಸಾರಿಗೆ ಬಸ್​ ನಿಲ್ದಾಣಕ್ಕೆ ಬಂದು ಪ್ರಯಾಣಿಕರು ಕಾದು ಕುಳಿತಿದ್ದಾರೆ. ಬೆಳಿಗ್ಗೆ ಖಾಸಗಿ ಬಸ್​ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ.

ನೆಲಮಂಗಲದಲ್ಲಿ ಖಾಸಗಿ ಬಸ್‌, ಆಟೋಗಳದ್ದೇ ಕಾರುಬಾರು‌ ಸಾರಿಗೆ ಬಸ್​ ಮುಷ್ಕರ ಹಿನ್ನೆಲೆಯಲ್ಲಿ ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಬೆಳಿಗ್ಗೆ ಉದ್ಯೋಗಕ್ಕೆ ತೆರಳುವವರು ಆಟೋಗಳನ್ನು, ಖಾಸಗಿ ಬಸ್​ಗಳನ್ನು ಹತ್ತಿ ತಮ್ಮ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇದೇ ಒಳ್ಳೆಯ ಸಮಯ ಅಂದುಕೊಂಡು ಹೆಚ್ಚಿನ ಹಣ ಪಡೆದು ಆಟೋ ಚಾಲಕರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಬೇರೆ ಗತಿಯಿಲ್ಲದೇ ಪ್ರಯಾಣಿಕರು ಸಂಚರಿಸುವ ಪರಿಸ್ಥಿತಿ ಎದುರಾಗಿದೆ.

ಮಂಡ್ಯದಲ್ಲೂ ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಾರಿಗೆ ನೌಕರರ ಮುಷ್ಕರಕ್ಕೆ ಮಂಡ್ಯ ಜಿಲ್ಲೆಯಲ್ಲಿ ಬೆಂಬಲ ಸಿಕ್ಕಿದ್ದು, ಯಾವುದೇ ಬಸ್​ಗಳು ರಸ್ತೆಗಿಳಿದಿಲ್ಲ. ಬೆಳಿಗ್ಗೆಯಿಂದಲೇ ಖಾಸಗಿ ಬಸ್​ಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬಸ್​ನಿಲ್ದಾಣದಲ್ಲಿ ಖಾಸಗಿ ಬಸ್​ಗಳು ಸಾಲುಗಟ್ಟಿ ನಿಂತಿವೆ.

ಬೀದರ್ – ವಿಜಯಪುರ ಜಿಲ್ಲೆಯಲ್ಲಿ ಸಾರಿಗೆ ಮುಷ್ಕರಕ್ಕೆ ವಿಶ್ರ ಪ್ರತಿಕ್ರಿಯೆ ಜಿಲ್ಲೆಯಲ್ಲಿ ಶೇಕಡಾ 40ರಷ್ಟು ಮಾತ್ರ ಕೆಎಸ್​ಆರ್​ಟಿಸಿ ಬಸ್​ ಸಂಚಾರವಾಗಿದೆ. ತೆಲಂಗಾಣ, ಮಹಾರಾಷ್ಟ್ರಕ್ಕೆ ಕೆಎಸ್​ಆರ್​ಟಿಸಿ ಬಸ್‌ಗಳ ಸಂಚಾರ ನಡೆಯುತ್ತಿದೆ. ಶೇ. 60ರಷ್ಟು ಬಸ್​ ಸ್ಥಗಿತಗೊಂಡಿದೆ. ಆದ್ದರಿಂದ ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದೆ.

ತುಮಕೂರಿನಲ್ಲಿ ನೌಕರರ ಮುಷ್ಕರ ಹಿನ್ನೆಲೆ ಇಂದು ನಡೆಯಬೇಕಿದ್ದ ಸ್ನಾತಕೋತ್ತರ ಪರಿಕ್ಷೆಗಳು ಏಪ್ರಿಲ್19 ಕ್ಕೆ ಮುಂದೂಡಿಕೆ ಸಾರಿಗೆ ನೌಕರರ ಮುಷ್ಕರದ ಬಿಸಿ ಜಿಲ್ಲೆಗೆ ತಟ್ಟಿದ್ದು, ಬಸ್​ ನಿಲ್ದಾಣದಲ್ಲಿ ಯಾವುದೇ ಬಸ್​ಗಳು ಸಂಚರಿಸುತ್ತಿಲ್ಲ. ಸರ್ಕಾರಿ ಬಸ್ ನಿಲ್ದಾಣದ ಹೊರಗಡೆ ಖಾಸಗಿ ಬಸ್​ಗಳು ಬಂದು ನಿಂತಿವೆ. ಜಿಲ್ಲೆಯಲ್ಲಿ 650 ಕ್ಕೂ ಹೆಚ್ಚು ಸರ್ಕಾರಿ ಬಸ್​ಗಳ ಸಂಚಾರವಿತ್ತು. ಆದರೆ, ಇಂದು ಸಂಪೂರ್ಣ ಬಂದ್​ ಆಗಿದೆ. ಕರ್ತವ್ಯಕ್ಕೆ ಹಾಜರಾಗದೇ ನೌಕರರೆಲ್ಲ ಮನೆಯಲ್ಲಿಯೇ ಇರಲು ನಿರ್ಧಾರ ಕೈಗೊಂಡಿದ್ದಾರೆ.

ಡಿಪೋ ಹಾಗೂ ಸರ್ಕಾರಿ ಬಸ್ ನಿಲ್ದಾಣದ 500 ಮೀಟರ್ ಸುತ್ತಲೂ ಜಿಲ್ಲಾಡಳಿತ ನಿಷೇದಾಜ್ಞೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್​ಗಳು, ಮ್ಯಾಕ್ಸಿ ಕ್ಯಾಬ್​ಗಳು ಹಾಗೂ ಖಾಸಗಿ ಶಾಲಾ ಕಾಲೇಜುಗಳ ಬಸ್​ ಬಳಸಲು ಜಿಲ್ಲಾಡಳಿತ ಸೂಚಿಸಿದೆ. ತುಮಕೂರು ವಿವಿಯ ಪರಿಕ್ಷೆಗಳು ಮುಂದೂಡಿಕೆ ಆಗಿದೆ. ಇಂದು ನಡೆಯಬೇಕಿದ್ದ ಸ್ನಾತಕ, ಸ್ನಾತಕೋತ್ತರ ಪರಿಕ್ಷೆಗಳು ಏಪ್ರಿಲ್19 ಕ್ಕೆ ಮುಂದೂಡಿಕೆಯಾಗಿದೆ.

ಯಾದಗಿರಿ, ಹಾವೇರಿ ಸೇರಿದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ ವಾಣಿಜ್ಯ ನಗರಿ ಹುಬ್ಬಳ್ಳಿಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ಖಾಲಿ ಖಾಲಿ ಅನಿಸುತ್ತಿದೆ. ಪ್ರತಿದಿನ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್ ನಿಲ್ದಾಣ ಇದೀಗ ಬಿಕೋ ಎನ್ನುತ್ತಿದೆ. ಇಲ್ಲಿಯವರೆಗೆ ಇಂದು ಒಂದೇ ಒಂದು ಬಸ್ ಕೂಡಾ ನಿಲ್ದಾಣಕ್ಕೆ ಆಗಮಿಸಿಲ್ಲ. ಪ್ರಯಾಣಿಕರೆಲ್ಲ ಖಾಸಗಿ ಬಸ್​ಗಳ ಮೊರೆ ಹೋಗುತ್ತಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು, ಶಿವಮೊಗ್ಗ, ಗದಗದಲ್ಲಿ ಬಸ್​ಗಳ ಸಂಚಾರವಿಲ್ಲ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಸಾರಿಗೆ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿದೆ. ಬಸ್​ ಚಾಲಕರು ಮತ್ತು ಕಂಡಕ್ಟರ್​ ಕರ್ತವ್ಯಕ್ಕೆ ಬಾರದೇ ಮುಷ್ಕರಕ್ಕೆ ಮುಂದಾಗಿದ್ದಾರೆ.

ಶಿವಮೊಗ್ಗ; ಖಾಸಗಿ ಬಸ್ ಸಂಚಾರ ವಿಚಾರದಲ್ಲಿ ಟ್ರಾಫಿಕ್​ ಎಎಸ್​ಐ ಮತ್ತು ಖಾಸಗಿ ಬಸ್​ ಮಾಲೀಕರ ನಡುವೆ ಮಾತಿನ ಚಕಮಕಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಸಂಚಾರ ಕೈಗೊಳ್ಳಲಾಗಿದೆ. ಖಾಸಗಿ ಬಸ್ ಸಂಚಾರ ವಿಚಾರದಲ್ಲಿ ಟ್ರಾಫಿಕ್ ಎಎಸ್​ಐ ಮಂಜುನಾಥ್ ಮತ್ತು ಖಾಸಗಿ ಬಸ್ ಮಾಲೀಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಖಾಸಗಿ ಬಸ್ ಸಂಚಾರ ಹಾಗೂ ನಿಲ್ದಾಣದಲ್ಲಿ ನಿಯಮಗಳ ವಿಚಾರದಲ್ಲಿ ವಾಗ್ವಾದ ನಡೆದಿದೆ. ಸ್ಥಳಕ್ಕೆ ದೊಡ್ಡಪೇಟೆ ಸಿಪಿಐ ಹರೀಶ್ ಪಟೇಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published On - 11:08 am, Wed, 7 April 21