ಅಭಿಮಾನವೆಂದರೆ ಪ್ರಾಯಶಃ ಇದೇ ಇರಬೇಕು.
ಇಲ್ಲಿರುವ ಬ್ಯಾನರ್ ಮೇಲೆ ಬರೆದಿರುವುದನ್ನು ಓದಿದರೆ ನಾವು ಏನು ಹೇಳಲು ಪ್ರಯತ್ನಿಸುತ್ತಿದ್ದೇವೆನ್ನುವುದು ನಿಮಗೆ ಅರ್ಥವಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮಿಗೆ ಕೋಟ್ಯಾಂತರ ಅಭಿಮಾನಿಗಳಿರಬಹುದು, ಅದರೆ ಇವರಂಥ ಅಭಿಮಾನಿ ಪ್ರಾಯಶಃ ಇರಲಾರರು.
ಮೈಸೂರಿನವರಿಗೆ ಇವರ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ, ಈ ಅಭಿಮಾನಿ ಅಲ್ಲಿ ‘ನಾಟಿ ಹಟ್’ ಹೆಸರಿನ ಮಾಂಸಾಹಾರಿ ಹೋಟೆಲೊಂದನ್ನು ನಡೆಸುತ್ತಿದ್ದಾರೆ. ಆರ್ಸಿಬಿ ಟೀಮನ್ನು ಇವರು (ಹೆಸರು ಹೇಳಿಕೊಂಡಿಲ್ಲ) ಐಪಿಎಲ್ ಟೂರ್ನಿ ಆರಂಭವಾದಾಗಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್ಸಿಬಿಯ ಪಂದ್ಯ ನಡೆಯುವ ದಿನಗಳಂದು ತಮ್ಮ ಹೊಟೇಲಿನಲ್ಲಿ ದೊರೆಯುವ ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಮಟನ್ ಚಾಪ್ಸ್ ಮತ್ತಿತರ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ಅರ್ಧದಷ್ಟು ಬೆಲೆಗೆ ನೀಡುತ್ತಾರೆ. ಅವತ್ತಿನ ದಿನ ಹೊಟೇಲ್ ಮುಂದೆ, ‘ಆರ್ಸಿಬಿ ಪಂದ್ಯದ ಪ್ರಯುಕ್ತ ನಮ್ಮಲ್ಲಿ ದೊರೆಯುವ ಆಹಾರ ಪದಾರ್ಥಗಳನನ್ನು ಕೇವಲ ಅರ್ಧ ಬೆಲೆಯಲ್ಲಿ ಸವಿಯಿರಿ’ ಎಂದು ಸೂಚಿಸುವ ಬ್ಯಾನರನ್ನು ನೇತು ಹಾಕುತ್ತಾರೆ.
ವಿರಾಟ್ ಕೊಹ್ಲಿಯ ಟೀಮು ಪಂದ್ಯ ಗೆದ್ದರೆ ಇತರ ಅಭಿಮಾನಿಗಳು ಸಂತೋಷಪಡುವಂತೆ ಅವರು ಸಹ ಆಕಾಶದಲ್ಲಿ ತೇಲಾಡುತ್ತಾರೆ. ಅದರೆ ಸೋತರೆ ಉಳಿದವರಿಗಿಂತ ಜಾಸ್ತಿ ಬೇಜಾರು ಮಾಡಿಕೊಳ್ಳುತ್ತಾರೆ. ಶುಕ್ರವಾರದಂದು ಎಲಿಮಿನೇಟರ್ ಸುತ್ತಿನಲ್ಲಿ ಆರ್ಸಿಬಿ ಸನ್ರೈಸರ್ಸ್ ಹೈದರಾಬಾದ್ಗೆ ಸೋತು ಟೂರ್ನಿಯಿಂದ ನಿರ್ಗಮಿಸಿದ ನಂತರ ಇವರು ಯಾವ ಪರಿ ಬೇಜಾರು ಮಾಡಿಕೊಂಡಿದ್ದಾರೆಂದರೆ ಆ ನಿರಾಶೆಯಲ್ಲಿ ತಮ್ಮ ಹೊಟೇಲನ್ನೇ ಮುಚ್ಚಿಬಿಟ್ಟು ಹೊಟೇಲಿನ ಮುಂದೆ ಈ ಬ್ಯಾನರನ್ನು ಇಳಿಬಿಟ್ಟಿದ್ದಾರೆ! ಕೊನೆಯಲ್ಲಿ ಅವರು ‘ಈಗಲೂ ಆರ್ಸಿಬಿ ಅಭಿಮಾನಿ’ ಅಂತ ಹೇಳಿರುವುದು ಮನಮುಟ್ಟುವಂತಿದೆ.
ಐಪಿಎಲ್ ಟೂರ್ನಿಯಿಂದ ಆರ್ಸಿಬಿ ತಂಡ ಹೊರಬಿದ್ದ ಹಿನ್ನೆಲೆಯಲ್ಲಿ ಇಂದು ಹೊಟೇಲ್ಗೆ ರಜೆ ಘೋಷಿಸಲಾಗಿದೆ.
ಇಂತಿ ಮಾಲಿಕರು (ಈಗಲೂ ಆರ್ಸಿಬಿ ಅಭಿಮಾನಿ)……