ತಂಜಾವೂರು: ಭಾರತೀಯ ಪರಂಪರೆಯ ಸಂತ ಹಾಗೂ ಸಂಗೀತ ರಚನೆಕಾರ ತ್ಯಾಗರಾಜರ ಆರಾಧನೆಯು ನಿನ್ನೆ (ಫೆ. 1) ಆರಂಭವಾಗಿದೆ. ಪ್ರತಿ ವರ್ಷದಂತೆ ತ್ಯಾಗರಾಜರ ಆರಾಧನಾ ಮಹೋತ್ಸವವು ತಮಿಳುನಾಡಿನ ತಿರುವಾಯೂರಿನಲ್ಲಿ ಇದೀಗ ನಡೆಯುತ್ತಿದೆ. ಇಂದು (ಫೆ.2) ರಾತ್ರಿಯವರೆಗೆ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಎಂ. ಗೋವಿಂದ ರಾವ್ ನಡೆಸಿದ್ದಾರೆ. ಶ್ರೀ ತ್ಯಾಗಬ್ರಹ್ಮ ಮಹೋತ್ಸವ ಸಭಾ ಅಧ್ಯಕ್ಷ ಜಿ.ಕೆ. ವಾಸನ್, ಕಾರ್ಯದರ್ಶಿ ಎ.ಕೆ. ಪಳನಿವೇಲು ಹಾಗೂ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಕಾವೇರಿ ತೀರದಲ್ಲಿ ಎರಡು ದಿನಗಳ ಸಮಾರಂಭ ನಡೆಯುತ್ತಿದೆ.
ತ್ಯಾಗರಾಜರ ಆರಾಧನೆಯ ವಿಶೇಷತೆಗಳೇನು?
ಕರ್ನಾಟಕ ಸಂಗೀತ ಇತಿಹಾಸ ಕಂಡ ಶ್ರೇಷ್ಠ ತೆಲುಗು ಸಂಗೀತ ರಚನೆಕಾರ, ಸಂತ ತ್ಯಾಗರಾಜರ ಆರಾಧನೆಯನ್ನು ಶ್ರೀ ತ್ಯಾಗಬ್ರಹ್ಮ ಮಹೋತ್ಸವ ಸಭಾ 150 ವರ್ಷಗಳಿಗೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಕೊರೊನಾ ಅಡಚಣೆಗಳ ನಡುವೆಯೂ ಸೂಕ್ತ ನಿಯಮಾವಳಿಗಳಂತೆ ಕಾರ್ಯಕ್ರಮ ಆಯೋಜಿಸಲಾಗಿದೆ.
ತ್ಯಾಗರಾಜರ ಆರಾಧನಾ ಮಹೋತ್ಸವವು ಇಂದು (ಫೆ.2) ನಡೆಯಲಿರುವ ‘ಹನುಮಾನ್ ಉತ್ಸವಂ’, ಖ್ಯಾತ ‘ಪಂಚರತ್ನ ಕೃತಿ’ ಗಾಯನದೊಂದಿಗೆ ಮಂಗಳ ಹಾಡಲಿದೆ. ಪಂಚರತ್ನ ಕೃತಿ ಗಾಯನವನ್ನು ಕರ್ನಾಟಕ ಸಂಗೀತಗಾರರು ಹಾಗೂ ಪಕ್ಕವಾದ್ಯ ಕಲಾವಿದರು ಸೇರಿ ನಡೆಸಿಕೊಡಲಿದ್ದಾರೆ.
ಸಂತ ತ್ಯಾಗರಾಜರು ಸಮಾಧಿಯಾದ ದಿನ
ಆರಾಧನೆಯು ವರ್ಷಂಪ್ರತಿ ಪುಷ್ಯ ಬಹುಳ ಪಂಚಮಿ ದಿನದಂದು ಆಚರಿಸಲಾಗುತ್ತದೆ. ಸಂತ ತ್ಯಾಗರಾಜರು ಸಮಾಧಿಯಾದ ದಿನವನ್ನು ಆರಾಧನೆಯಾಗಿ ಪೂಜಿಸಲಾಗುತ್ತದೆ. ಪಂಚರತ್ನ ಕೃತಿ ಪಠಣವೇ ಈ ಆರಾಧನೆಯ ವಿಶೇಷವಾಗಿರುತ್ತದೆ.
ತ್ಯಾಗರಾಜರ ಸಮಾಧಿ ಸ್ಥಳ ಕಾವೇರಿ ನದಿ ತೀರದ ತಿರುವಾಯೂರು
ತೆಲುಗು ಸಂತ ತ್ಯಾಗರಾಜರ ಆರಾಧನೆಯನ್ನು ಆಂಧ್ರ ಪ್ರದೇಶ, ತಮಿಳುನಾಡು ಮುಂತಾದ ಕಡೆಗಳಲ್ಲಿ ಆಚರಿಸಲಾಗುತ್ತದೆ. ತ್ಯಾಗರಾಜರ ಸಮಾಧಿ ಸ್ಥಳ ಇರುವ ತಿರುವಾಯೂರು ಎಂಬಲ್ಲಿ ವರ್ಷವೂ ಆರಾಧನೆ ನಡೆಸಲಾಗುತ್ತದೆ.
ತ್ಯಾಗರಾಜರು ನಿಧನ ಹೊಂದುವ ಕೆಲ ವರ್ಷಗಳ ಮೊದಲು ಸನ್ಯಾಸ ಸ್ವೀಕರಿಸಿದ್ದರು ಎಂದು ಹೇಳಲಾಗುತ್ತದೆ. ಅದಾದಮೇಲೆ, 1847ರಲ್ಲಿ ತ್ಯಾಗರಾಜರು ನಿಧನ ಹೊಂದಿದರು ಎಂದು ಗುರುತಿಸಲಾಗಿದೆ. ಅವರನ್ನು ತಿರುವಾಯೂರು ಎಂಬಲ್ಲಿ, ಕಾವೇರಿ ನದಿ ತೀರದ ಬಳಿ ಸಮಾಧಿ ಮಾಡಲಾಗಿದೆ.
ನಿಧನಾನಂತರ 1903ರ ವರೆಗೆ ತ್ಯಾಗರಾಜರು ಸಮಾಧಿಯಾಗಿದ್ದ ಸ್ಥಳ ಅವಗಣನೆಗೆ ಒಳಗಾಗಿತ್ತು. ಅದನ್ನು ಗಮನಿಸಿ, ಸರಿಪಡಿಸಿ, 1903ರ ಬಳಿಕ ತ್ಯಾಗರಾಜರ ಆರಾಧನೆಯನ್ನು ವ್ಯವಸ್ಥಿತವಾಗಿ ಆಚರಿಸಲಾಗುತ್ತಾ ಬರಲಾಗಿದೆ. ತಿರುವಾಯೂರುನಲ್ಲಿ ತ್ಯಾಗರಾಜರ ಆರಾಧಕರು, ಸಂಗೀತ ಆಸಕ್ತರು ಸಂವಾದ, ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ತಮಿಳುನಾಡು, ಆಂಧ್ರಪ್ರದೇಶ ಹೊರತಾಗಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ಹಲವೆಡೆ ಆರಾಧನೆ ನಡೆಸಲಾಗುತ್ತದೆ. ಭಾರತ ಮಾತ್ರವಲ್ಲದೆ, ಅಮೆರಿಕಾ, ಮಾರಿಷಸ್, ನೈಜೀರಿಯಾ, ಯುನೈಟೆಡ್ ಕಿಂಗ್ಡಮ್ಗಳಲ್ಲೂ ಆರಾಧನಾ ಮಹೋತ್ಸವ ಆಚರಿಸಲಾಗುತ್ತದೆ. 1847ರಲ್ಲಿ ತ್ಯಾಗರಾಜರು ಕೀರ್ತಿಶೇಷರಾದರು. ಅದರಂತೆ ಈ ವರ್ಷದ್ದು 174ನೇ ವರ್ಷದ ಆರಾಧನಾ ಮಹೋತ್ಸವವಾಗಿದೆ.
Published On - 5:52 pm, Tue, 2 February 21