ದೆಹಲಿ: ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರ ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿ 9 ದಿನಗಳಾದ ನಂತರ ಕಾಂಗ್ರೆಸ್ ಗುರುವಾರ ದೂರು ಹಿಂಪಡೆದಿದೆ. ದೆಹಲಿ ಪೊಲೀಸರು ನಡೆಸುತ್ತಿರುವ ಪ್ರಾಥಮಿಕ ತನಿಖೆಯು ಅಕ್ರಮ ಮತ್ತು ಕಾನೂನು ಉಲ್ಲಂಘನೆಯ ಕೃತ್ಯ ಎಂದು ಕಾಂಗ್ರೆಸ್ ವಿವರಿಸಿದೆ.
ಈ ಸಂಬಂಧ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರಬರೆದಿರುವ ಕಾಂಗ್ರೆಸ್ ನಾಯಕರಾದ ರಾಜೀವ್ ಗೌಡ ಮತ್ತು ರೋಹನ್ ಗುಪ್ತ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಛತ್ತೀಸಗಡಕ್ಕೆ ವರ್ಗಾಯಿಸಬೇಕು. ಬಿಜೆಪಿ ನಾಯಕರಾದ ರಮಣ್ ಸಿಂಗ್ ಮತ್ತು ಸಂಬಿತ್ ಪಾತ್ರಾ ಕಾಂಗ್ರೆಸ್ ವಿರುದ್ಧ ‘ಸುಳ್ಳು ಮತ್ತು ತಿರುಚಿದ’ ಟೂಲ್ಕಿಟ್ ದಾಖಲೆಗಳನ್ನು ಹಂಚುತ್ತಿದ್ದಾರೆ ಎಂದು ಅಲ್ಲಿಯೇ ಮೊದಲ ಎಫ್ಐಆರ್ ದಾಖಲಾಗಿದೆ ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಹಿಂದೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಂತೆ ಮೊದಲು ದಾಖಲಾದ ಎಫ್ಐಆರ್ ಆಧರಿಸಿಯೇ ತನಿಖೆ ನಡೆಯಬೇಕು. ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ 2ನೇ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ ಎಂಬ ಸಂಗತಿಯನ್ನು ರಾಜೀವ್ ಗೌಡ ಮತ್ತು ರೋಹನ್ ಗುಪ್ತಾ ಪ್ರಸ್ತಾಪಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ‘2ನೇ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ. ಒಂದೇ ಅಪರಾಧಕ್ಕೆ ಸಂಬಂಧಿಸಿದಂತೆ ಪೂರಕ ಮಾಹಿತಿ ದೊರೆತಾಗ ಹೊಸದಾಗಿ ಮತ್ತೊಂದು ತನಿಖೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
‘ನಮ್ಮ ದೂರು ಆಧರಿಸಿ ಎಫ್ಐಆರ್ ದಾಖಲಿಸಲು ದೆಹಲಿ ಪೊಲೀಸರು ವಿಫಲರಾಗಿದ್ದಾರೆ. ಛತ್ತೀಸಗಡದಲ್ಲಿ ದಾಖಲಿಸಿರುವ ಎಫ್ಐಆರ್ಗೆ ನಾವು ಬದ್ಧರಾಗಿದ್ದೇವೆ. ಹೊಸದಾಗಿ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಕಾನೂನು ಮತ್ತು ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲಂಘಿಸಿದ್ದಾರೆ‘ ಎಂದು ಗೌಡ ಟ್ವಿಟರ್ನಲ್ಲಿ ಈ ಕುರಿತು ಬರೆದ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
Our letter to Delhi Police. They failed to file an FIR based on our complaint. We were impleaded in an FIR registered in Chhattisgarh and are pursuing the matter there. By carrying on with its investigation, Delhi Police is in violation of law & SC judgements. Satyameva Jayate! pic.twitter.com/kyE3kUjHTz
— Rajeev Gowda (@rajeevgowda) May 27, 2021
ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರನ್ನು ರಕ್ಷಿಸುವ ಉದ್ದೇಶದಿಂದ ದೆಹಲಿ ಪೊಲೀಸರು ನಮ್ಮ ದೂರಿನ ಸಂಬಂಧ ಸುಳ್ಳು ಮತ್ತು ತಪ್ಪು ಮಾಹಿತಿ ಹರಡುವುದನ್ನು ನಿಲ್ಲಿಸಬೇಕು. ‘ನಾವು ನಮ್ಮ ದೂರನ್ನು ಹಿಂಪಡೆದಿದ್ದೇವೆ. ದೆಹಲಿ ಪೊಲೀಸರು ಯಾವುದೇ ಕ್ರಮ ಜರುಗಿಸದ ಕಾರಣ ಮೇ 18ರಂದು ನೀಡಿದ್ದ ದೂರನ್ನು ಹಿಂಪಡೆದಿದ್ದೇವೆ. ಈ ತನಿಖೆಯು ಬಿಜೆಪಿ ಹಂಚಿಕೊಂಡ ತಿರುಚಿದ ಟೂಲ್ಕಿಟ್ನಂತೆಯೇ ಸುಳ್ಳು ಮತ್ತು ಅಕ್ರಮ’ ಎಂದು ಗುಪ್ತ ಟ್ವೀಟ್ನಲ್ಲಿ ಹೇಳಿದ್ದಾರೆ.
ಗಂಭೀರ ಅಪರಾಧ ಮಾಡಿರುವ ಬಿಜೆಪಿ ನಾಯಕರನ್ನು ಕಾಪಾಡಲು ಕೇಂದ್ರ ಗೃಹ ಇಲಾಖೆಯೇ ಮಧ್ಯಪ್ರವೇಶಿಸಿದೆ. ಕೇಂದ್ರ ಗೃಹ ಇಲಾಖೆಯಿಂದ ಒತ್ತಡ ಅನುಭವಿಸುತ್ತಿರುವ ದೆಹಲಿ ಪೊಲೀಸರು ನಾವು ಮೇ 18ರಂದು ನೀಡಿರುವ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಬಿಜೆಪಿ ನಾಯಕರನ್ನು ಕಾಪಾಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ಛತ್ತೀಸಗಡ ಪೊಲೀಸರು ಮೇ 19ರಂದೇ ಎಫ್ಐಆರ್ ದಾಖಲಿಸಿದ್ದಾರೆ. ದೆಹಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ತನಿಖೆ ನಡೆಸಲು ಅಧಿಕಾರ ವ್ಯಾಪಿ ಇರುವುದಿಲ್ಲ. ದೆಹಲಿ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯು ಸರ್ಕಾರದ ಸಂಪನ್ಮೂಲಗಳ ದುರುಪಯೋಗವಲ್ಲದೇ ಬೇರೇನೂ ಅಲ್ಲ. ಈಗಾಗಲೇ ಎಫ್ಐಆರ್ ದಾಖಲಾಗಿರುವ ಪ್ರಕರಣದಲ್ಲಿ ಮತ್ತೊಮ್ಮೆ ಪ್ರಾಥಮಿಕ ತನಿಖೆ ನಡೆಸುವ ಔಚಿತ್ಯವಾದರೂ ಏನು ಕಾಂಗ್ರೆಸ್ ಪ್ರಶ್ನಿಸಿದೆ.
‘ದೆಹಲಿ ಪೊಲೀಸರಿಗೆ ಇಂಥ ಪ್ರಕರಣಗಳ ತನಿಖೆ ನಡೆಸುವ ಸಾಮರ್ಥ್ಯವಿಲ್ಲ. ಛತ್ತೀಸಗಡ ಪೊಲೀಸರು ಈಗಾಗಲೇ ಈ ಪ್ರಕರಣ ಸಂಬಂಧ ಹಲವು ಬಿಜೆಪಿ ನಾಯಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ. ದೆಹಲಿ ಪೊಲೀಸರು ಈ ಪ್ರಕರಣ ಸಂಬಂಧ ಹೇಳಿಕೆ ನೀಡುವುದರಿಂದ ಮತ್ತು ಬಿಜೆಪಿ ನಾಯಕರನ್ನು ಕಾಪಾಡುವ ಕೆಲಸದಿಂದ ದೂರ ಉಳಿಯಬೇಕೆಂದು ಆಗ್ರಹಿಸುತ್ತೇವೆ. ಬಿಜೆಪಿ ನಾಯಕರು ಮತ್ತು ಕೇಂದ್ರ ಸಚಿವರನ್ನು ಕಾಪಾಡಲೆಂದೇ ಹರಕೆಯ ಕುರಿಗಳನ್ನು ಹುಡುಕಲು ದೆಹಲಿ ಪೊಲೀಸರು ನಾಟಕವಾಡುತ್ತಿದ್ದಾರೆ. ಇಂಥ ಅಕ್ರಮಗಳನ್ನು ತಕ್ಷಣ ನಿಲ್ಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ’ ಎಂದು ದೆಹಲಿ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
(Toolkit complaint Congress withdraws case filed with Delhi Police alleges probe as illegal)
ಇದನ್ನೂ ಓದಿ: ಟೂಲ್ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್ ಪಾತ್ರಾ ವಿಚಾರಣೆ ಸಾಧ್ಯತೆ
ಇದನ್ನೂ ಓದಿ: ಕೇಂದ್ರ ಸಚಿವರ ಕಾಂಗ್ರೆಸ್ ಟೂಲ್ಕಿಟ್ ಟ್ವೀಟ್ಗಳನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಗುರುತಿಸುವಂತೆ ಟ್ವಿಟರ್ಗೆ ಪತ್ರ
Published On - 2:29 pm, Fri, 28 May 21