ದಾವಣಗೆರೆ: ಹಿಜಾಬ್ ಜತೆ ಇದೀಗ ಮತ್ತೊಂದು ಹೊಸ ವಿವಾದ ಶುರುವಾಗಿದೆ. ರಾಜ್ಯಾದ್ಯಂತ ಹಿಜಾಬ್- ಕೇಸರಿ ಶಾಲಿನ ವಿವಾದ ಈ ಮೊದಲು ಆರಂಭವಾಗಿತ್ತು. ಇದೀಗ ಅದರ ಜತೆ ಮತ್ತೊಂದು ಸಂಘರ್ಷ ಶುರುವಾದಂತಾಗಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲೆ ವಿಭಾಗದಲ್ಲಿ ಹೊಸದೊಂದು ಘಟನೆ ನಡೆದಿದೆ. ತಲೆಗೆ ಬಿಳಿ ಟೊಪ್ಪಿಗೆ (ತಖೀಯಾ) ಧರಿಸಿ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದಾರೆ. ನಮಾಜ್ ಸಂದರ್ಭದಲ್ಲಿ ಮುಸ್ಲಿಮರು ಧರಿಸುವ ಬಿಳಿ ಟೊಪ್ಪಿಗೆ ಧರಿಸಿ ಬಂದಿದ್ದಾರೆ.
ಟೊಪ್ಪಿಗೆ ಧರಿಸಿಯೇ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಿದ್ದಾರೆ. ಹೊಸ ಬಗೆಯ ಸಂಘರ್ಷಕ್ಕೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ನಿನ್ನೆವರೆಗೂ ಬಿಳಿ ಟೊಪ್ಪಿಗೆ ಧರಿಸಿ ಬಾರದ ವಿದ್ಯಾರ್ಥಿಗಳು, ಇಂದು ಬಿಳಿ ಟೊಪ್ಪಿಗೆ ಧರಿಸಿ ಶಾಲೆಗೆ ಬಂದಿದ್ದಾರೆ. ಹಿಜಾಬ್-ಬಿಳಿ ಟೊಪ್ಪಿಗೆ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕರು ಶಾಲೆಯಿಂದ ಹೊರಗೆ ಕೂರಿಸಿದ್ದಾರೆ. ಸ್ಥಳಕ್ಕೆ ಹೊನ್ನಾಳಿ ತಹಶಿಲ್ದಾರ ಬಸನಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟೋಪಿ ಹಾಕಿಕೊಂಡೆ ಶಾಲೆಗೆ ಬರುತ್ತೇವೆ ಎಂದು ವಿದ್ಯಾರ್ಥಿಗಳು ಈ ವೇಳೆ ಹೇಳಿರುವ ಬಗ್ಗೆ ಮಾಹಿತಿ ಲಭಿಸಿದೆ.
ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ: ಆರಗ ಜ್ಞಾನೇಂದ್ರ
ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ (ಫೆಬ್ರವರಿ 15) ಹೇಳಿಕೆ ನೀಡಿದ್ದಾರೆ. ನ್ಯಾಯಾಲಯದ ಆದೇಶ ಪಾಲನೆ ಮಾಡುವುದು ಸರ್ಕಾರದ ಕರ್ತವ್ಯ ಮತ್ತು ಬದ್ಧತೆ. ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ, ಸಮಸ್ಯೆ ಆದ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ನಾವು ಪರಿಶೀಲನೆ ಮಾಡ್ತಿದ್ದೇವೆ ಎಂದು ಅರಗ ಜ್ಙಾನೇಂದ್ರ ತಿಳಿಸಿದ್ದಾರೆ.
ಇತ್ತ ದಾವಣಗೆರೆ ಜಿಲ್ಲೆಯಲ್ಲಿ ಶನಿವಾರದವರೆಗೆ ಸೆಕ್ಷನ್ 144 ಮುಂದುವರಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ನೀಡಿದ್ದಾರೆ. ನಾಳೆಯಿಂದ ಪಿಯು, ಪದವಿ ಕಾಲೇಜುಗಳು ಆರಂಭ ಹಿನ್ನೆಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಹೊರತುಪಡಿಸಿ ಬೇರೆಯವರಿಗೆ ಕಾಲೇಜಿನೊಳಗೆ ಪ್ರವೇಶ ಇರಲ್ಲ ಎಂದು ತಿಳಿಸಲಾಗಿದೆ.
ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಮೌಲಾನಾ ಆಜಾದ್ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದ ಘಟನೆ ನಡೆದಿದೆ. ಇದೇ ವಿಚಾರವಾಗಿ ಪಾಲಕರು ಮತ್ತು ಶಿಕ್ಷಕರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಶಿಕ್ಷಕರು ಹೊರಗೆ ನಿಲ್ಲಿಸಿದ್ದಾರೆ. ಹಿಜಾಬ್ ತಗೆದ್ರೆ ಮಾತ್ರ ಶಾಲೆಯೊಳಗೆ ಪ್ರವೇಶ ನೀಡೋದಾಗಿ ಶಿಕ್ಷಕರು ಹೇಳಿದ್ದರು. ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ಪಾಲಕರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ವಾತಾವರಣ ತಿಳಿಯಾಗಿದೆ. ವಿದ್ಯಾರ್ಥಿಗಳ ಮನವೊಲಿಸಿ ಶಿಕ್ಷಕರು ಹಿಜಾಬ್ ತಗೆಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ ಹಿನ್ನೆಲೆ: ಜಮ್ಮು- ಕಾಶ್ಮೀರದ ವಿದ್ಯಾರ್ಥಿಗಳ ಬಳಿ ಮಾಹಿತಿ ಕೇಳಿದ ಆಂತರಿಕ ಭದ್ರತಾ ದಳ
ಇದನ್ನೂ ಓದಿ: ಶಿಕ್ಷಕರಿಗೂ ಸಮವಸ್ತ್ರ ಕಡ್ಡಾಯ ಮಾಡುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ: ಗೃಹ ಸಚಿವ ಆರಗ ಜ್ಞಾನೇಂದ್ರ