ತಮ್ಮ ಟ್ವಿಟ್ಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡಿರುವ ಲೇಖಿ, ‘‘ಟ್ವಿಟ್ಟರ್ ಸಂಸ್ಥೆಯು ಕಳಿಸಿರುವ ಅಫಿಡವಿಟ್ ಇಂದು ನಮಗೆ ತಲುಪಿದೆ. ಲಡಾಕ್ ಪ್ರಾಂತ್ಯದ ಒಂದು ಪ್ರದೇಶವನ್ನು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಪ್ರಮಾದವನ್ನು ಅವರು ಅಂಗೀಕರಿಸಿದ್ದಾರೆ. ನವೆಂಬರ್ 30, 2020ರೊಳಗಾಗಿ ಆಗಿರುವ ತಪ್ಪನ್ನು ಸರಿಪಡಿಸುವುದಾಗಿ ಆ ಸಂಸ್ಥೆಯ ಆಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ,’’ ಎಂದಿದ್ದಾರೆ.
ಟ್ವಿಟ್ಟರ್ ಎಸಗಿದ ಪ್ರಮಾದದ ಬಗ್ಗೆ ಭಾರತ ಸರ್ಕಾರ ದಿಗ್ಭ್ರಮೆ ವ್ಯಕ್ತಪಡಿಸಿದ್ದನ್ನು ಇಲ್ಲಿ ನೆನೆಸಬಹುದಾಗಿದೆ. ಐಟಿ ಕಾರ್ಯದರ್ಶಿ ಅಜಯ ಸಾಹ್ನಿ, ಟ್ವಿಟ್ಟರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಾಕ್ ಡೊರ್ಸಿ ಅವರಿಗೆ ಪತ್ರವೊಂದನ್ನು ಬರೆದು ಸ್ಪಷ್ಟೀಕರಣವನ್ನು ಕೇಳಿದ್ದರಲ್ಲದೆ ಅಗಿರುವ ಪ್ರಮಾದವನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದರು.
ಭಾರತೀಯರ ಸೂಕ್ಷ್ಮ ಸಂವೇದನೆಗಳನ್ನು ಗೌರವಿಸುವಂತೆ ಟ್ವಿಟ್ಟರ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದ ಭಾರತ ಸರ್ಕಾರ, ದೇಶದ ಅಖಂಡತೆ ಮತ್ತು ಸಮಗ್ರತೆಯನ್ನು ಅಗೌರವಿಸುವ ಯಾವುದೇ ಪ್ರಯತ್ನವನ್ನು ಸ್ವೀಕರಿಸಲಾಗದು ಮತ್ತು ಅದನ್ನು ಕಾನೂನುಬಾಹಿರ ಅಂತ ಪರಿಗಣಿಸಲಾಗುವುದೆಂದು ಎಚ್ಚರಿಸಿತ್ತು.
ಪ್ರಮಾದವಾಗಿರುವುದು ತಾಂತ್ರಿಕ ದೋಷವೆಂದು ಹೇಳಿರುವ ಸಂಸ್ಥೆಯ ಅಧಿಕಾರಿಗಳು ಅದನ್ನು ಆದಷ್ಟು ಬೇಗ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.