ಬೆಂಗಳೂರಲ್ಲಿ ಹಸಿರು ಪಟಾಕಿ ಸೃಷ್ಟಿಸಿದ ವಾಯು ಮಾಲಿನ್ಯ ಪ್ರಮಾಣ ಕಡಿಮೆ | Green crackers reduced air pollution levels in Bengaluru city
ಪಟಾಕಿಯನ್ನು ನೆನೆದರೆ ಸಾಕು ಕೆಲವರಿಗೆ ಮೈ ನಡುಕ ಉಂಟಾಗುತ್ತೆ. ಇದರಿಂದಾಗುವ ಸಮಸ್ಯೆಗಳು ಒಂದೆರೆಡಲ್ಲ. ಜನರ ನಿರ್ಲಕ್ಷ್ಯದಿಂದ ಜೀವನ ಪೂರ್ತಿ ಕಣ್ಣನ್ನು ಕಳೆದುಕೊಳ್ಳುವ ಜೊತೆಗೆ ಸುಂದರ ಪರಿಸರವನ್ನು ಹಾಳುಮಾಡುವ ಎಲ್ಲಾ ಲಕ್ಷಣಗಳು ಪಟಾಕಿಗಳಿಗಿವೆ. ಪಟಾಕಿಯಿಂದ ಹಲವಾರು ಸಮಸ್ಯೆಗಳು ಎದುರಾಗಬಹುದಾದರೂ, ಅವುಗಳನ್ನು ಸಿಡಿಸುವ ಉತ್ಸಾಹ ಮಾತ್ರ ಜನರಲ್ಲಿ ಬತ್ತುತ್ತಿಲ್ಲ. ಪಟಾಕಿಯಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ತಜ್ಞರ ಸಲಹೆ ಮೇರೆಗೆ ರಾಜ್ಯ ಸರ್ಕಾರ ಪಟಾಕಿ ಬಳಕೆಯನ್ನು ನಿಷೇಧಿಸಿತ್ತು. ವಾಯು ಮಾಲಿನ್ಯವನ್ನು ತಡೆಗಟ್ಟಲು ಉತ್ತಮ ನಿರ್ಧಾರವೆಂದು ಯೋಚಿಸಿ, ಕೇವಲ ಹಸಿರು ಪಟಾಕಿ […]
ಪಟಾಕಿಯನ್ನು ನೆನೆದರೆ ಸಾಕು ಕೆಲವರಿಗೆ ಮೈ ನಡುಕ ಉಂಟಾಗುತ್ತೆ. ಇದರಿಂದಾಗುವ ಸಮಸ್ಯೆಗಳು ಒಂದೆರೆಡಲ್ಲ. ಜನರ ನಿರ್ಲಕ್ಷ್ಯದಿಂದ ಜೀವನ ಪೂರ್ತಿ ಕಣ್ಣನ್ನು ಕಳೆದುಕೊಳ್ಳುವ ಜೊತೆಗೆ ಸುಂದರ ಪರಿಸರವನ್ನು ಹಾಳುಮಾಡುವ ಎಲ್ಲಾ ಲಕ್ಷಣಗಳು ಪಟಾಕಿಗಳಿಗಿವೆ. ಪಟಾಕಿಯಿಂದ ಹಲವಾರು ಸಮಸ್ಯೆಗಳು ಎದುರಾಗಬಹುದಾದರೂ, ಅವುಗಳನ್ನು ಸಿಡಿಸುವ ಉತ್ಸಾಹ ಮಾತ್ರ ಜನರಲ್ಲಿ ಬತ್ತುತ್ತಿಲ್ಲ.
ಪಟಾಕಿಯಿಂದ ಕೊರೊನಾ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ತಜ್ಞರ ಸಲಹೆ ಮೇರೆಗೆ ರಾಜ್ಯ ಸರ್ಕಾರ ಪಟಾಕಿ ಬಳಕೆಯನ್ನು ನಿಷೇಧಿಸಿತ್ತು. ವಾಯು ಮಾಲಿನ್ಯವನ್ನು ತಡೆಗಟ್ಟಲು ಉತ್ತಮ ನಿರ್ಧಾರವೆಂದು ಯೋಚಿಸಿ, ಕೇವಲ ಹಸಿರು ಪಟಾಕಿ ಸಿಡಿಸಬಹುದೆಂದು ಹೇಳಿತ್ತು. ಈ ಹಸಿರು ಪಟಾಕಿ ಇತರ ಪಟಾಕಿಗಳಿಗಿಂತ ಹೆಚ್ಚು ರಾಸಾಯನಿಕ ಅಂಶಗಳಿಂದ ಕೂಡಿಲ್ಲವಾದರೂ ವಾಯು ಮಾಲಿನ್ಯ ಉಂಟುಮಾಡುವ ಎಲ್ಲಾ ಅಂಶಗಳು ಅದರಲ್ಲಿವೆ ಎಂಬುದನ್ನು ತಜ್ಞರೇ ಸ್ಪಷ್ಟಪಡಿಸಿದ್ದರು.
ಹಸಿರು ಪಟಾಕಿಯಿಂದ ವಾಯು ಮಾಲಿನ್ಯ ಆಗಿದ್ದಂತು ಸತ್ಯ. ಆದರೆ ಎಷ್ಟು ಪ್ರಮಾಣದಲ್ಲ್ಲಿ ಮಾಲಿನ್ಯ ಉಂಟಾಗಿದೆ ಅನ್ನೊ ಪ್ರಶ್ನೆಗೆ ಟಿವಿ9 ಡಿಜಿಟಲ್ ಟೀಮ್ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಹಿತಿಯನ್ನು ಕಲೆಹಾಕಿದೆ.
ದೀಪಾವಳಿಯಿಂದ ಪ್ರತಿ ವರ್ಷ ಹೆಚ್ಚು ವಾಯು ಮಾಲಿನ್ಯವಾಗುತ್ತಿತ್ತು, ಆದರೆ ಈ ಬಾರಿ ಮಾಲಿನ್ಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಸುಮಾರು ಶೇಕಡಾ 30.34ರಷ್ಟು ಮಾಲಿನ್ಯ ಕಡಿಮೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಪಷ್ಟಪಡಿಸಿದೆ. ಕೊರೊನಾ ಸೋಂಕಿನ ಭಯದಿಂದ ಪಟಾಕಿ ಸಿಡಿಸುವ ವಿಷಯದಲ್ಲಿ ಜನ ಹಿಂದೇಟು ಹಾಕಿರುವುದು ಮತ್ತು ಹಸಿರು ಪಟಾಕಿಯ ಬಳಕೆಯಿಂದ ಕಡಿಮೆ ವಾಯು ಮಾಲಿನ್ಯವಾಗಿರುವುದು ಮಂಡಳಿ ನೀಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ:
2019ರಲ್ಲಿ ಬೆಂಗಳೂರಿನ ಸಿಟಿ ರೈಲ್ವೇ ಸ್ಟೇಷನ್ ಪ್ರದೇಶದಲ್ಲಿ ವಾಯು ಮಾಲಿನ್ಯ (Air Quality) ಪ್ರಮಾಣ 111.00 ರಷ್ಟಿತ್ತು, 2020ರಲ್ಲಿ ಅದು 76.67ಕ್ಕೆ ಇಳಿದಿದೆ. ಬಸವೇಶ್ವರ ನಗರದಲ್ಲಿ 2019ರಲ್ಲಿ 85ರಷ್ಟಿದ್ದಿದ್ದು 2020 ರಲ್ಲಿ 39.33ರಷ್ಟು ದಾಖಲಾಗಿದೆ. ಹೆಬ್ಬಾಳದಲ್ಲಿ 2019ರಲ್ಲಿ 71ರಷ್ಟಿದ್ದ ವಾಯು ಮಾಲಿನ್ಯ 2020ರಲ್ಲಿ ಆದಕ್ಕಿಂತ ಕಡಿಮೆ ಅಂದರೆ 63.67ಕ್ಕೆ ಕುಸಿದಿದೆ.
2019ರಲ್ಲಿ 90 ರಷ್ಟು ವಾಯು ಮಾಲಿನ್ಯ ಜಯನಗರದಲ್ಲಿ ಕಾಣಿಕೊಂಡರೆ, 2020ರಲ್ಲಿ ಕೇವಲ 44ರಷ್ಟು ಮಾತ್ರ ಮಾಲಿನ್ಯವಾಗಿರುವುದು ಗೊತ್ತಾಗಿದೆ. ಕಳೆದ ವರ್ಷ ಮೈಸೂರು ರಸ್ತೆ ಭಾಗದಲ್ಲಿ ವಾಯು ಮಾಲಿನ್ಯದಿಂದ 76ರಷ್ಟಿದ್ದರೆ, ಈ ಬಾರಿ 61.67ರಷ್ಟು ಮಾಲಿನ್ಯ ಉಂಟಾಗಿದೆ. 2019ರಲ್ಲಿ ನಿಮ್ಹಾನ್ಸ್ ಏರಿಯಾದಲ್ಲಿ 69 ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಪ್ರದೇಶದಲ್ಲಿ 67ರಷ್ಟು ವಾಯು ಮಾಲಿನ್ಯವಾಗಿದ್ದರೆ, 2020ರಲ್ಲಿ ಕ್ರಮವಾಗಿ 61 ಮತ್ತು 43ರಷ್ಟು ಮಾಲಿನ್ಯ ದಾಖಲಾಗಿದೆ.