ಕೊಡಗು: ಜಿಲ್ಲೆಯಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದಾರೆ. ಗ್ರಾಮದ ಚಿಣ್ಣಿ(60) ಹುಲಿ ದಾಳಿಗೆ ಬಲಿಯಾದ ಕಾರ್ಮಿಕ ಮಹಿಳೆ. ನಿನ್ನೆ ರಾತ್ರಿ ಕೊಡಗು ಸಮೀಪದ ಕುಮಟೂರು ಗ್ರಾಮದ ಪಣೆಯರವರ ಅಯ್ಯಪ್ಪ ಎಂಬ 14ವರ್ಷದ ಬಾಲಕನೊಬ್ಬ ಈ ಹಿಂದೆ ಹುಲಿ ದಾಳಿಗೆ ಬಲಿಯಾಗಿದ್ದ.
ಮೃತ ಬಾಲಕ ಶ್ರೀಮಂಗಲದ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಸೌದೆ ತರಲೆಂದು ಹೋಗಿದ್ದ ವೇಳೆ ಹುಲಿ ದಾಳಿ ನಡೆಸಿತ್ತು. ಕೊಟ್ರಂಗಡ ಅಶ್ವಥ್ ಎಂಬುವವರ ತೋಟದಲ್ಲಿ ಮೃತದೇಹ ಪತ್ತೆಯಾಗಿತ್ತು. ಹುಲಿಯ ಕೂದಲು ಮೃತದೇಹದ ಮೇಲಿತ್ತು ಎಂದು ಸ್ಥಳೀಯರು ತಿಳಿಸಿದ್ದರು. ಈಗಾಗಲೇ ಹುಲಿ ದಾಳಿಗೆ ಇಬ್ಬರು ಬಲಿಯಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹುಲಿ ಸೆರೆ ಹಿಡಿಯಲು ಆಗ್ರಹಿಸಿದ್ದಾರೆ. ಕುಟ್ಟ, ಶ್ರೀಮಂಗಲದಲ್ಲಿ ಪ್ರತಿಭಟನೆ ನಡೆಸಲು ಸ್ಥಳೀಯರು ಸಜ್ಜಾಗಿದ್ದಾರೆ.
ಹುಲಿ ಸೆರೆಗೆ ಕಾರ್ಯಾಚರಣೆ
ಇಬ್ಬರನ್ನು ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಶುರು ಮಾಡಿಕೊಂಡಿದ್ದು ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿಯಲ್ಲಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಮತ್ತಿಗೋಡು ಶಿಬಿರದಿಂದ ಸಾಕಾನೆಗಳನ್ನು ಕರೆಸಿಕೊಳ್ಳಲಾಗಿದೆ. ಅಭಿಮನ್ಯು, ಗೋಪಾಲಸ್ವಾಮಿ ಎಂಬ ಎರಡು ಸಾಕಾನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ.
ಇದನ್ನೂ ಓದಿ: ಹುಲಿಗಳ ನಡುವೆಯೂ ಜಾಗಕ್ಕಾಗಿ ನಡೆಯುತ್ತೆ ಯುದ್ಧ.. ಕುತೂಹಲಕಾರಿ ಮಾಹಿತಿ ಇಲ್ಲಿದೆ