
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಆಟವಾಡುತ್ತಿದ್ದ ವೇಳೆ ಲಿಫ್ಟ್ ಗುಂಡಿಗೆ ಬಿದ್ದು ಮಗು ಮೃತಪಟ್ಟಿರುವ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯ ಕೋಡಿಪಾಳ್ಯದಲ್ಲಿ ನಡೆದಿದೆ. 2 ವರ್ಷದ ವಿನೋದ್ ಮೃತಪಟ್ಟ ಮಗು.
ಉತ್ತರ ಕರ್ನಾಟಕ ಮೂಲದ ದಂಪತಿಯ ಪುತ್ರ 2ವರ್ಷದ ವಿನೋದ್, ರಮೇಶ್ ಎಂಬುವರ 4 ಅಂತಸ್ತಿನ ಕಟ್ಟಡದಲ್ಲಿ ಆಟವಾಡುತ್ತಿದ್ದ. ಈ ವೇಳೆ ಲಿಫ್ಟ್ ಅಳವಡಿಸಲು ತೆಗೆದಿದ್ದ 6 ಅಡಿ ಆಳದ ಗುಂಡಿಗೆ ಬಿದ್ದಿದ್ದಾನೆ. ಗುಂಡಿಯಲ್ಲಿ ನೀರಿದ್ದ ಕಾರಣ ಮಗು ಉಸಿರು ಕಟ್ಟಿಕೊಂಡಿದೆ. ತಕ್ಷಣವೇ ಅಸ್ವಸ್ಥಗೊಂದಿದ್ದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.
ಮಗುವಿನ ತಂದೆ ವೃತ್ತಿಯಲ್ಲಿ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದಾರೆ. ಘಟನೆ ವೇಳೆ ಅವರು ಕೆಲಸಕ್ಕೆ ಹೊಗಿದ್ದರು. ಹಾಗೂ ಇದೇ ವೇಳೆ ಮಗುವಿನ ತಾಯಿ ಸ್ನಾನಕ್ಕೆ ತೆರಳಿದ್ದಳು. ಮಗುವನ್ನು ಯಾರು ನೋಡಿಕೊಳ್ಳವರಿಲ್ಲದೆ ಈ ದುರ್ಘಟನೆ ಸಂಭವಿಸಿದೆ. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.