ದಾವಣಗೆರೆ: ದಸರಾ ಅಂದ್ರೆ ಒಂದು ರೀತಿಯಲ್ಲಿ ದುಷ್ಟ ಶಕ್ತಿಗಳ ಸಂಹಾರದ ಪ್ರತೀಕ. ಪೌರಾಣಿಕವಾಗಿ ಪಾಂಡವರು ಅಜ್ಞಾತ ವಾಸ ಮುಗಿಸಿ ಧರ್ಮ ಯುದ್ಧಕ್ಕಾಗಿ ಬನ್ನಿ ಮರದಲ್ಲಿ ಇಟ್ಟ ಆಯುಧಗಳನ್ನ ಪಡೆದ ದಿನ. ಇದರ ಪ್ರತೀಕವಾಗಿ ಬನ್ನಿಮರಕ್ಕೆ ಪೂಜೆ ಸಲ್ಲಿಸುವುದು ಒಂದು ಸಂಪ್ರಾಯ.
ಇದೇ ರೀತಿ ದಸರಾ ಅಂದ್ರೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರದಲ್ಲಿ ವಿಶೇಷ ಆರಾಧನೆ ಇರುತ್ತೆ. ನವರಾತ್ರಿಯ ಪ್ರಯುಕ್ತ ನಿತ್ಯ ವಿಭಿನ್ನ ಪೂಜೆ ನೆರವೇರಿಸಲಾಗುತ್ತೆ. ಕೊನೆಯ ದಿನ ಬನ್ನಿ ಮುಡಿದು ಅಂಭುಚೇಧನ ಮಾಡಲಾಗುವುದು. ಅಲ್ಲಿಯ ತನಕ ದೇವಿಯ ಆರಾಧನೆ ನಡೆಯುತ್ತದೆ.
ದುಷ್ಟ ಶಕ್ತಿ ಸಂಹಾರಕ್ಕೆ ಉಚ್ಚಂಗೆಮ್ಮ ಮೀಸೆ ಧರಿಸಿದ್ದಳು:
ಈ ವೇಳೆ ಉಚ್ಚಂಗೆಮ್ಮನೇ ಮೀಸೆ ಧರಿಸಿ ಖಡ್ಗ ಹಿಡಿದು ದುಷ್ಟ ಶಕ್ತಿಯ ಸಂಹಾರ ಮಾಡಿದ್ದಳು ಎಂದು ಹೇಳಲಾಗುತ್ತೆ. ಹಾಗೂ ಇದೊಂದು ಐತಿಹಾಸಿಕ ಸತ್ಯ. ಇದೇ ರೀತಿ ಸವದತ್ತಿ ಯಲ್ಲಮ್ಮನಿಗೂ ಮಡ್ರಳ್ಳಿ ಚೌಡಮ್ಮನಿಗೂ ಮೀಸೆ ಇರುವುದನ್ನ ನೋಡಬಹುದು. ಹೀಗೆ ಹೆಣ್ಣು ದೇವತೆಗಳಾದ್ರು ಮೀಸೆ ಧರಿಸಿ ಯಾರ ಕೈಯಿಂದಲೂ ಆಗದ ದುಷ್ಟ ಶಕ್ತಿಯ ಸಂಹಾರ ಮಾಡಿದ್ದು ದಸರಾದ ವಿಜಯದಶಮಿ ದಿನ. ಹೀಗಾಗಿ ಮೀಸೆ ಧರಿಸಿದ ದೇವತೆಗೆ ದಸರಾದಲ್ಲಿ ಒಂದು ರೀತಿಯ ವಿಶೇಷ ಪೂಜೆ ಸಲ್ಲಿಸಲಾಗುತ್ತೆ.