ಉಡುಪಿ: ಹೊಸದಾಗಿ ಮದುವೆಯಾದ ವಧು ವರರು ಮಧುಚಂದ್ರನ ಕನಸ್ಸು ಕಾಣುವುದು ಸಹಜ. ಮದುವೆ ಆದ ತಕ್ಷಣ ಯಾವ ದೇಶಕ್ಕೆ ಹೋಗಿ ಹನಿಮೂನ್ ಮಾಡಿಕೊಳ್ಳೋಣ ಎಂದು ಯೋಚಿಸ್ತಿರ್ತಾರೆ. ಆದರೆ ಇಲ್ಲೊಂದು ನವ ಜೋಡಿ ಮದುವೆ ಮುಗಿಸಿ ಬಿಂದಾಸಾಗಿ ಹನಿಮೂನ್ಗೆ ಹೋಗೋದು ಬಿಟ್ಟು ಪೊರಕೆ, ಚೀಲ ಹಿಡಿದು ಬೀಚ್ಗಳಲ್ಲಿ ಕಸ ಹೆಕ್ಕುತ್ತಾ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಐಟಿ-ಬಿಟಿ ಕಂಪನಿಗಳು ಒಂತರಾ ಸೃಜನಶೀಲ ಕನಸುಗಳಿಗೆ ಕಾವು ಕೊಡುವ ಕ್ಷೇತ್ರಗಳು. ದಿನಪೂರ್ತಿ ಕೆಲಸದ ಒತ್ತಡದಲ್ಲಿರುವ ಇಲ್ಲಿನ ಸಿಬ್ಬಂದಿಗೆ ಏನಾದರೂ ಡಿಫರೆಂಟಾಗಿ, ಕ್ರಿಯೇಟಿವ್ ಕೆಲಸ ಮಾಡಬೇಕು ಎಂಬ ಹಂಬಲ ಇರುತ್ತೆ. ಅದೇ ರೀತಿ ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಕೆಲಸ ಮಾಡುತ್ತಿರುವ ಅನುದೀಪ್ ಹೆಗಡೆ, ಫಾರ್ಮಸಿಟಿಕಲ್ ಉದ್ಯೋಗಿಯಾಗಿರುವ ಮಿನುಷ ಕಾಂಚನ್ ಅವರನ್ನ ತಮ್ಮ ಬಾಳಸಂಗಾತಿಯಾಗಿ ಆಯ್ದುಕೊಂಡಿದ್ದಾರೆ. ಇಲ್ಲಿ ವಿಶೇಷ ಅಂದ್ರೆ ಇವರಿಬ್ಬರೂ ಮದುವೆ ಮುಗಿಸಿ ಸಮಾಜಕ್ಕೆ ಮಾದರಿಯಾಗಬಹುದಾದ ಏನಾದರೂ ಕೆಲಸ ಮಾಡೋಣವೇ ಎಂದು ಯೋಚಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.
ಬೀಚ್ ಸ್ವಚ್ಛತೆಗೆ ನಿಂತ ನವ ವಧು ವರ:
ಹನಿಮೂನ್ಗೆ ಎಲ್ಲಿ ಹೋಗೋಣ ಎಂದು ಯೋಚಿಸುವ ಬದಲು ಸಮಾಜಕ್ಕೆ ಏನು ಸೇವೆ ಮಾಡಬಹುದು ಎಂದು ಯೋಚಿಸುವಾಗ ಇವರಿಗೆ ತಕ್ಷಣ ಹೊಳೆದಿದ್ದು ನರೇಂದ್ರ ಮೋದಿ ಅವರ ಸ್ವಚ್ಛ್ ಭಾರತ್ ಯೋಜನೆಯ ಕನಸು ಮತ್ತು ಪ್ರವಾಸಿಗರ ಬೇಜವಾಬ್ದಾರಿತನದಿಂದ ಕಸದ ಕೊಂಪೆಯಾಗಿರುವ ಕರಾವಳಿಯ ಬೀಚುಗಳು.
ಹನಿಮೂನ್ ಹೊರಡುವ ಮೊದಲು ತನ್ನ ಹುಟ್ಟೂರಾದ ಸೋಮೇಶ್ವರದ ಬೀಚಿನ ಸ್ವಲ್ಪ ಭಾಗವನ್ನಾದರೂ ಸ್ವಚ್ಛಗೊಳಿಸಬೇಕು ಎಂದು ಅನುದೀಪ್ ಪಣತೊಟ್ಟರು. ಹೀಗೆ ಈ ಇಬ್ಬರಿಂದ ಆರಂಭವಾದ ಈ ಕೆಲಸ ಈಗ ಹತ್ತಾರು ಜನರ ನೇತೃತ್ವದಲ್ಲಿ ಮುಂದುವರೆಯುತ್ತಿದೆ.
ನವೆಂಬರ್ 18 ನೇ ತಾರೀಖಿನಂದು ಹಸೆಮಣೆ ಏರಿದ ಅನುದೀಪ್ ಹೆಗಡೆ ಮತ್ತು ಮಿನುಷ ಕಾಂಚನ ದಂಪತಿ ಸೋಮೇಶ್ವರದ ಬೀಚ್ನಲ್ಲಿ ಲೋಡ್ ಗಟ್ಟಲೆ ಕಸ ಹೊರ ತೆಗೆದಿದ್ದಾರೆ. ತಮ್ಮ ಹನಿಮೂನ್ ಪ್ಲಾನನ್ನು ಮುಂದೂಡಿದ ಈ ದಂಪತಿ 7 ದಿನದ ಅವಧಿಯಲ್ಲಿ ಬರೋಬ್ಬರಿ 700 ಕೆಜಿ ಕಸ ಮತ್ತು 500 ಕೆಜಿ ಪ್ಲಾಸ್ಟಿಕ್ ವಿಲೇವಾರಿ ಮಾಡಿದ್ದಾರೆ.
ಪ್ರತಿದಿನ 2 ಗಂಟೆ ಶ್ರಮದಾನ ಮಾಡಿ ಈ ದಂಪತಿಗಳು ಬೀಚ್ ಸ್ವಚ್ಛತೆಯಲ್ಲಿ ತೊಡಗಿರುವುದನ್ನು ಗಮನಿಸಿದ ಸ್ಥಳೀಯ ಸಂಘಟನೆಗಳು ನಾವು ನಿಮ್ಮೊಂದಿಗೆ ಕೈಜೋಡಿಸುತ್ತೇವೆ ಎಂದು ಮುಂದೆ ಬಂದಿದ್ದಾರೆ.
ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸಿದ ಸಂಘಟನೆಗಳು:
ಇಬ್ಬರಿಂದ ಆರಂಭವಾದ ಈ ಸ್ವಚ್ಛತಾ ಕಾರ್ಯ ಈಗ ಹತ್ತಾರು ಜನರನ್ನು ಒಳಗೊಂಡಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಕೆಲಸಗಳಿಗೆ ಸ್ಟಾರ್ಟಪ್ ಕೊರತೆ ಇದೆ ಅನ್ನೋದು ಇದೇ ಕಾರಣಕ್ಕೆ. ಯಾರಾದರೊಬ್ಬರು ಆರಂಭ ಮಾಡಿದರೆ ಮುಂದುವರಿಸುವುದಕ್ಕೆ ಹತ್ತಾರು ಸಮಾಜಮುಖಿ ಸಂಘಟನೆಗಳು ಕೈಜೋಡಿಸುತ್ತವೆ.
ಸೋಮೇಶ್ವರದಲ್ಲಿ ಹಸನ್ ಮತ್ತು ತಂಡ ಮಂಜುನಾಥ್ ಶೆಟ್ಟಿ ಮತ್ತು ಬಳಗ ಈ ದಂಪತಿ ಜೊತೆ ಬೀಚ್ ಸ್ವಚ್ಛತೆಗೆ ಸಾಥ್ ನೀಡಿವೆ. ಈ ಅಭಿಯಾನವನ್ನು ಮಲ್ಪೆ, ಮರವಂತೆ, ಕಾಪು ಮತ್ತು ತಣ್ಣೀರುಬಾವಿ ಬೀಚ್ಗಳಲ್ಲಿ ಮುಂದುವರೆಸುವ ಇಚ್ಛೆಯನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ತಮ್ಮ ಮದುವೆಯ ಮಧುರ ಕ್ಷಣಗಳನ್ನು ಜೀವನದಲ್ಲಿ ಅವಿಸ್ಮರಣೀಯ ಘಳಿಗೆಯಾಗಿಸುವುದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಈ ದಂಪತಿ ಎಲ್ಲರಿಗೂ ಒಂದು ಮಾದರಿ.
ಮದುವೆ ಪೂರ್ವ ಶಾಸ್ತ್ರಕ್ಕೆ 32 ವರ್ಷ ಹಳೆಯ ಸೀರೆಯುಟ್ಟ ಚಿರಂಜೀವಿ ತಮ್ಮನ ಪುತ್ರಿ; ಈ ನೀಲಿ ಸೀರೆಯೇ ಯಾಕೆ?
Published On - 12:00 pm, Tue, 8 December 20