ಉಡುಪಿ: ಅದೆಷ್ಟೋ ಯುವಕರು ಲಾಕ್ಡೌನ್ ಮುಗಿದರೆ ಸಾಕಪ್ಪ ಒಮ್ಮೆ ಹೊರಹೋಗಿ ಸುತ್ತಾಡುವ ಎನ್ನುವವರೇ ಜಾಸ್ತಿ. ಅಲ್ಲದೆ ಇಷ್ಟು ದಿನ ಮನೆಯಲ್ಲಿ ಕೂತು ಕಾಲಹರಣ ಮಾಡಿದವರೇ ಹೆಚ್ಚು. ಆದ್ರೆ ಉಡುಪಿಯ ಯುವಕನೊಬ್ಬ ಲಾಕ್ಡೌನ್ನನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಮಾಡಿಕೊಂಡಿದ್ದಾನೆ. ಅದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಸ್ಟೋರಿ..
ಲಾಕ್ಡೌನ್ ಆದ ನಂತರ ಯುವಕರು ಮನೆಯಲ್ಲೇ ಲಾಕ್ ಆಗಿದ್ದಾರೆ. ಉದ್ಯೋಗ, ಆಟೋಟ, ಸುತ್ತಾಟ ಎಲ್ಲಾವೂ ಬಂದ್ ಆಗಿದೆ. ಯುವಕರು ಈ ಸಮಯವನ್ನು ಉತ್ತಮವಾಗಿ ಬಳಸಿಕೊಂಡಿದ್ದು ಕೆಲವೇ ಮಂದಿ. ಆದ್ರೆ ಉಡುಪಿಯ ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದುಗ್ಲಿ ಪದವು ಎಂಬಲ್ಲಿನ ಯುವಕ ಈ ಸಮಯವನ್ನು ಬಳಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.
ಮನೆಯ ಗೋಡೆ ತುಂಬಾ ವಿವಿಧ ಕಲಾಕೃತಿಗಳು:
ಪೇಂಟಿಂಗ್ ಈತನಿಗೆ ಅಚ್ಚುಮೆಚ್ಚು. ಮದುವೆ ಸಮಾರಂಭದ ಸಂದರ್ಭದಲ್ಲಿ ಫೋಟೋಗ್ರಾಫರ್ ವೃತ್ತಿ ಮಾಡಿದರೆ ಇನ್ನುಳಿದ ಸಮಯವನ್ನು ಕೂಲಿ ಕೆಲಸ ಮಾಡಿ ಕಳೆಯುತ್ತಾನೆ. ಆದ್ರೆ ಲಾಕ್ಡೌನ್ ನಂತ್ರ ಏನು ಮಾಡೋದು ಅಂತ ಯೋಚಿಸಿದಾಗ ಮನೆಯ ಗೋಡೆ ಮೇಲೆ ಪೇಂಟಿಂಗ್ಸ್ ಬಿಡಿಸುವ ಪ್ಲಾನ್ ಹೊಳೆದಿದೆ. ತಡ ಮಾಡದೇ ಈ ಕಾರ್ಯಕ್ಕೆ ಇಳಿದಿದ್ದು ಇದೀಗ 7ಕ್ಕೂ ಅಧಿಕ ಕಲಾಕೃತಿಗಳನ್ನ ಗೋಡೆ ತುಂಬೆಲ್ಲಾ ಬಿಡಿಸಿದ್ದಾನೆ.
ಯೂಟ್ಯೂಬ್ನಲ್ಲಿ ಇರುವ ಕಲಾಕೃತಿಗಳನ್ನ ನೋಡಿ ಅದೇ ರೀತಿಯಲ್ಲಿ ಬಿಡಿಸಿರುವ ಸಂದೇಶ್ ಶೆಟ್ಟಿ ಈಗಾಗಲೇ ಬುದ್ಧ, ಪಾಂಡಾ, ಗೂಬೆ, ಮಿನಿಯನ್ಸ್ ಸೇರಿದಂತೆ ಪ್ರಾಕೃತಿಕ ಸೌಂದರ್ಯದ ಆರ್ಟ್ಗಳನ್ನು ಗೋಡೆಯಲ್ಲಿ ಬಿಡಿಸಿದ್ದಾನೆ. ಬೆಳಗ್ಗೆ ಆರಂಭಿಸಿ ಸಂಜೆ ಒಳಗೆ ಆರ್ಟ್ ಮುಗಿಸುವ ಸಂದೇಶ್ ಶೆಟ್ಟಿ ಇದಕ್ಕಾಗಿ ತನ್ನಲ್ಲಿರುವ ಹಣವನೆಲ್ಲಾ ಬಣ್ಣ ಖರೀದಿಗೆ ಖರ್ಚು ಮಾಡಿದ್ದಾನೆ. ಮೊದ ಮೊದಲು ತಾಯಿ ಗೋಡೆ ಹಾಳು ಮಾಡುತ್ತಿದ್ದೀಯ ಎಂದು ಗದರಿಸಿದ್ದಾರೆ. ಆದ್ರೆ ಅದರ ಬಳಿಕ ಮಗ ಇಷ್ಟು ಉತ್ತಮವಾಗಿ ಪೇಂಟ್ ಮಾಡುವುದನ್ನು ಕಂಡು ದಂಗಾಗಿದ್ದಾರೆ. ಈಗ ಆತನ ಪೇಂಟಿಂಗ್ಸ್ಗೆ ಮನೆ ಮಂದಿಯೆಲ್ಲಾ ಸಪೋರ್ಟ್ ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಉಡುಪಿಯ ಯುವಕ ಲಾಕ್ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾನೆ. ಈತನ ವಾಲ್ ಪೇಂಟಿಂಗ್ಸ್ ಜೊತೆಗೆ ಬಾಟಲ್ ಪೇಂಟಿಂಗ್ಸ್ ಕೂಡಾ ಯಾವುದೇ ಕಲಾಕಾರರಿಗಿಂತ ಕಮ್ಮಿ ಇಲ್ಲ.
Published On - 1:03 pm, Fri, 22 May 20