ದೆಹಲಿ: ನಿಗದಿತ ವಯೋಮಾನ ಮೀರಿದ, ಯುಪಿಎಸ್ಸಿ ನಾಗರಿಕ ಸೇವಾ (UPSC Civil Service Examination) ಅಭ್ಯರ್ಥಿಗಳಿಗೆ ಪರೀಕ್ಷೆ ಎದುರಿಸಲು ಹೆಚ್ಚುವರಿ ಅವಕಾಶ ನೀಡುವ ವಿಚಾರವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ಮಂಗಳವಾರ (ಫೆ. 9) ಹೇಳಿಕೆ ನೀಡಿದೆ. 2020ರಲ್ಲಿ ಕೊವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಕೊನೆಯ ಬಾರಿ ಪರೀಕ್ಷೆ ಎದುರಿಸಲು ವಿಫಲರಾದವರು ಕೂಡ ವಯಸ್ಸು ಮೀರಿದ್ದರೆ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಲು ಬಯಸುವುದಿಲ್ಲ ಎಂದು ಸರ್ಕಾರ ಕೋರ್ಟ್ಗೆ ತಿಳಿಸಿದೆ.
ಒಂದು ವೇಳೆ, UPSC Civil Service ಪರೀಕ್ಷೆ ಬರೆಯಲು ಅರ್ಹ ವಯಸ್ಸಿನ ಮಿತಿಯೊಳಗೆ ಅಭ್ಯರ್ಥಿ ಇದ್ದಾರೆ ಎಂದಾದರೆ ಅಂಥವರಿಗೆ ಈ ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಬಹುದು ಎಂದು ಹೇಳಿದೆ. ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಎ.ಎಮ್. ಖನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.
ಕೊರೊನಾ ಕಾರಣದಿಂದ ಕಳೆದ ಬಾರಿಯ UPSC Civil Service ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ, ಮತ್ತೊಂದು ಅವಕಾಶ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸರ್ಕಾರ ಈ ರೀತಿ ತಿಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಇದು ಕೊನೆಯ ಕ್ಷಣದಲ್ಲಿ ತಯಾರಾಗಿ ಬರೆಯುವ ಪರೀಕ್ಷೆ ಅಲ್ಲ. ಅಭ್ಯರ್ಥಿಗಳು ವರ್ಷಾನುಗಟ್ಟಲೆ ಈ ಪರೀಕ್ಷೆಗೆ ತಯಾರಾಗುತ್ತಾರೆ. ಹಾಗಾಗಿ, ಬದಲಾವಣೆಯ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ (Union Public Service Commission – UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (Civil Service Examination – CSE) ಪಾಲ್ಗೊಳ್ಳಲು 2020 ಕೊನೆಯ ಅವಕಾಶವಾಗಿದ್ದ, ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಲು ಕೇಂದ್ರ ಸರ್ಕಾರ ಶುಕ್ರವಾರ (ಫೆ.5) ಒಪ್ಪಿಕೊಂಡಿತ್ತು. ಕೋವಿಡ್-19 ಪಿಡುಗಿನಿಂದಾಗಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಸಾವಿರಾರು ಮಂದಿಯ ಉತ್ತಮ ನೌಕರಿ ಕನಸಿಗೆ ಇದರಿಂದ ಮರುಜೀವ ಬಂದಂತೆ ಆಗಿತ್ತು.
ಈ ನಿಯಮ ಸಡಿಲಿಕೆಯು ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ಒದಗಿಸಲು ಮಾತ್ರ ಸೀಮಿತವಾಗಿರುತ್ತದೆ. CSE-2021ಕ್ಕೆ ಮಾತ್ರ ಈ ಸಡಿಲಿಕೆ ಊರ್ಜಿತದಲ್ಲಿರುತ್ತದೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು 2020 ಕೊನೆಯ ಅವಕಾಶವಾಗಿದ್ದ ಮತ್ತು ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಮಾತ್ರ ಈ ವಿನಾಯ್ತಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿತ್ತು.
UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ
Published On - 11:50 am, Wed, 10 February 21