
ಮೈಸೂರು: ಅಪರಿಚಿತರ ಗುಂಪೊಂದು ರಾತ್ರೋ ರಾತ್ರಿ ಶವಸಂಸ್ಕಾರಕ್ಕೆ ಮುಂದಾದಾಗ ಸ್ಥಳೀಯರಿಂದ ಭಾರಿ ವಿರೋಧ ವ್ಯಕ್ತವಾದ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಹಂಚಿಪುರ ಮತ್ತು ಹೊಸವೀಡು ಗ್ರಾಮದ ಮಧ್ಯಭಾಗದಲ್ಲಿ ಸಂಭವಿಸಿದೆ.
ಮಾಜಿ ಗ್ಯಾಂಗ್ಸ್ಟರ್ ಮುತ್ತಪ್ಪ ರೈ ಸಂಬಂಧಿಗೆ ಸೇರಿದ ಜಮೀನಿನಲ್ಲಿ ಬೆಂಗಳೂರಿಗರಿನಿಂದ ಬಂದ ಕೆಲವರು ನಿನ್ನೆ ರಾತ್ರಿ ಶವಸಂಸ್ಕಾರಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಌಂಬುಲೆನ್ಸ್ ಮೂಲಕ ಗ್ರಾಮಕ್ಕೆ ತರಲಾದ ಶವವನ್ನು ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು ಇದು ಕೊರೊನಾದಿಂದ ಮೃತಪಟ್ಟಿರೋರ ಶವ ಎಂಬ ಶಂಕೆ ವ್ಯಕ್ತಪಡಿಸಿದರು.
ಕೂಡಲೇ ರೊಚ್ಚಿಗೆದ್ದ ಗ್ರಾಮಸ್ಥರುಶವವನ್ನು ಮಣ್ಣು ಮಾಡಲು ಮುಂದಾಗಿದ್ದ ಅಪರಿಚಿತರನ್ನ ತಡೆದರು. ಗ್ರಾಮಸ್ಥರ ವಿರೋಧಕ್ಕೆ ಅಂಜಿ ಅಪರಿಚಿತರು ಮೃತ ದೇಹ ವಾಪಸ್ ತೆಗೆದುಕೊಂಡು ಹೋದರು ಎಂದು ತಿಳಿದುಬಂದಿದೆ. ಈ ನಡುವೆ ಉದ್ವಿಗ್ನ ಪರಿಸ್ಥಿತಿ ಕಂಡು ಸ್ಥಳಕ್ಕೆ ಬಂದ ಪೊಲೀಸರು ಅಪರಿಚಿತರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಶವಸಂಸ್ಕಾರಕ್ಕೆ ತಂದಿದ್ದ ಜೆಸಿಬಿ ಯಂತ್ರವನ್ನ ಗ್ರಾಮಸ್ಥರು ಜಖಂ ಮಾಡಿದ್ದಾರಂತೆ. ಹೀಗಾಗಿ, ಪ್ರಕರಣಕ್ಕೆ ಸಂಬಂಧಿಸಿ 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಮುನ್ನೆಚ್ಚರಿಕಾ ಕ್ರಮವಾಗಿ ಹೊಸವೀಡು ಗ್ರಾಮದಲ್ಲಿ ಪೊಲೀಸರ ನಿಯೋಜನೆ ಆಗಿದೆ.
Published On - 3:02 pm, Thu, 23 July 20