ಬೆಳಗಾವಿ: ರಾಜ್ಯದಲ್ಲಿ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಹಾಗೇನೆ ಪಕ್ಕದ ಮಹಾರಾಷ್ಟ್ರದಲ್ಲಿ ಕೂಡಾ ಸತತವಾಗಿ ಮಳೆಯಾಗುತ್ತಿದೆ. ಹೀಗಾಗಿ ಮಹಾರಾಷ್ಟ್ರದಿಂದ ರಾಜ್ಯದಲ್ಲಿ ಹಾದು ಹೋಗುವ ನದಿಗಳಲ್ಲಿ ಮಹಾಪೂರ ಬಂದಿದ್ದು, ತುಂಬಿ ಹರಿಯುತ್ತಿವೆ. ಅದ್ರಲ್ಲೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮವೊಂದರ ಸೇತುವೆ ನೀರಲ್ಲಿ ಮುಳುಗಿದ್ದು, ಸ್ಥಳೀಯರು ಸರಿಯಾದ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಪರಿಣಾಮ ಚಿಕ್ಕ ಮಕ್ಕಳು ಹರಿಯುವ ನದಿನೀರಿನಲ್ಲಿಯೇ ಆಟವಾಡುತ್ತಿದ್ದಾರೆ.
ಹೌದು ಸತತ ಮಳೆಯ ಅಬ್ಬರಕ್ಕೆ ಬೆಳಗಾವಿಯೂ ನಲುಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಸುರಿಯುತ್ತಿರೋದ್ರಿಂದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿರುವ ಸೇತುವೆ ಮುಳುಗಿ ಮಲಪ್ರಭಾ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ಆದ್ರೂ ಮುಳುಗಡೆಯಾದ ಸೇತುವೆ ಮೇಲೆ ಮಹಿಳೆಯರು ಮತ್ತು ಮಕ್ಕಳು ಮೋಜು ಮಾಡುತ್ತಿದ್ದಾರೆ.
ರಭಸವಾಗಿ ಹರಿಯುವ ನದಿ ನೀರಿನಲ್ಲಿ ಮಕ್ಕಳೊಂದಿಗೆ ಮಹಿಳೆಯರು ಮತ್ತು ಯುವತಿಯರು ಕೂಡಾ ಮಕ್ಕಳಿಗೆ ತಿಳಿವಳಿಕೆ ಹೇಳುವುದನ್ನು ಬಿಟ್ಟು ಅವರೊಂದಿಗೆ ಆಟವಾಡುತ್ತಿದ್ದಾರೆ.
ಇದಕ್ಕಿಂತ ಆಘಾತಕಾರಿಯಂದ್ರೆ ಕೆಲವರು ತುಂಬಿ ಹರಿಯುವ ನದಿಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಹಿರೇಮುನವಳ್ಳಿ ಗ್ರಾಮದ ಕೆಲ ಜನರ ಈ ಬೇಜವಾಬ್ದಾರಿ ಈಗ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯ ಪೊಲೀಸರು ಕೂಡಾ ಮುಳುಗಡೆಯಾದ ಸೇತುವೆಗೆ ಬ್ಯಾರಿಕೇಡ್ ಹಾಕಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಪಾರಿಶ್ವಾಡದಿಂದ ಹಿರೇಮುನವಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ಸೇತುವೆ ಮುಳುಗಡೆಯಾಗಿರೋದ್ರಿಂದ ಪಾರಿಶ್ವಾಡ ಗ್ರಾಮಕ್ಕೆ ಸಂಪರ್ಕಿಸುವ ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಅಂಗ್ರೊಳ್ಳಿ, ಕರ್ತನಬಾಗೇವಾಡಿ, ಇಟಗಿ, ಮುನ್ಯಾನಟ್ಟಿ, ಹಂದೂರು, ಬೀಡಿ ಸೇರಿದಂತೆ ಒಂಬತ್ತು ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಸ್ಥಗಿತವಾಗಿದೆ.