
ಸತತ ನಾಲ್ಕು ಸೋಲುಗಳಿಂದ ಧೃತಿಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆ ಸ್ಥಾನದಿಂದ ಮೇಲೇಳಲಾಗದೆ ಒದ್ದಾಡುತ್ತಿದೆ. ಶುಕ್ರವಾರದಂದು ಹೈದರಾಬಾದ್ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ ನಿಕೊಲಾಸ್ ಪೂರನ್ ಅವರನ್ನು ಬಿಟ್ಟರೆ ಪಂಜಾಬ್ನ ಎಲ್ಲ ಬ್ಯಾಟ್ಸ್ಮನ್ಗಳು ವಿಫಲರಾದರು.
ಪಂಜಾಬಿನ ಓವರ್ಸೀಸ್ ಆಟಗಾರರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಆಡಿದ ಎಲ್ಲ ಪಂದ್ಯಗಳಲ್ಲೂ ವಿಫಲರಾಗಿರುವುದು ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಕೆ ಎಲ್ ರಾಹುಲ್ಗೆ ದೊಡ್ಡ ತಲೆನೋವಿನ ವಿಷಯವಾಗಿರಬಹುದು. ಪ್ರೀಟಿ ಜಿಂಟಾಳ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸ್ವೆಲ್ರನ್ನು ಹೆಚ್ಚು ಕಡಿಮೆ ರೂ. 11 ಕೋಟಿಗಳನ್ನು ನೀಡಿ ಖರೀದಿಸಿದೆ. ಅವರ ಮೇಲೆ ಟೀಮು ಹೆಚ್ಚಿನ ನಿರೀಕ್ಷೆಗಳನ್ನಿಟ್ಟರುವುದು ಸಹಜವೇ.
ಐಪಿಎಲ್ 13ನೇ ಆವೃತಿಯ ಕಾಮೆಂಟ್ರಿ ಪ್ಯಾನೆಲ್ನಲ್ಲಿರುವ ಇಂಗ್ಲೆಂಡ್ನ ಮಾಜಿ ಆಟಗಾರ ಕೆವಿನ್ ಪೀಟರ್ಸನ್, ಸರಣಿ ವೈಫಲ್ಯಗಳ ಹೊರತಾಗಿಯೂ ಅಸ್ಟ್ರೇಲಿಯಾದ ಆಟಗಾರನ್ನು ಆಡುವ ಇಲೆವೆನ್ ಉಳಿಸಿಕೊಳ್ಳುತ್ತಿರುವ ಬಗ್ಗೆ ಸೋಜಿಗರಾಗಿದ್ದಾರೆ.
‘‘ಪಂಜಾಬ್ ತಂಡದವರು, ಗ್ಲೆನ್ ವಿಷಯದಲ್ಲಿ ಆದಷ್ಟು ಬೇಗ ಒಂದು ತೀರ್ಮಾನಕ್ಕೆ ಬರಬೇಕಿದೆ. ಓವರ್ಸೀಸ್ ಆಟಗಾರನನ್ನು ಹಾಗೆ ಉಳಿಸಿಕೊಳ್ಳವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಮ್ಯಾಕ್ಸ್ವೆಲ್ ರನ್ ಗಳಿಸಲು ಪದೇಪದೆ ವಿಫಲರಾಗಿದ್ದಾರೆ. ನಾಯಕ ರಾಹುಲ್ಗೆ ತನ್ನ ಟೀಮಿನ ವಿದೇಶಿ ಆಟಗಾರರಿಂದ ಬೆಂಬಲವೇ ಸಿಗುತ್ತಿಲ್ಲ. ಶುಕ್ರವಾರದ ಪಂದ್ಯದಲ್ಲಿ ನಿಕೊಲಾಸ್ ಪೂರನ್ ರನ್ ಗಳಿಸಿದ್ದು ನಿಜ, ಆದರೆ ಮ್ಯಾಕ್ಸ್ವೆಲ್ನಿಂದ ಯಾವ ಕಾಂಟ್ರಿಬ್ಯೂಷನ್ ಸಿಗುತ್ತಿದೆ? ಒಂದೋ ಅವರನ್ನು ಆಡುವ ಇಲೆವೆನ್ನಿಂದ ಡ್ರಾಪ್ ಮಾಡಬೇಕು ಅಥವಾ ಮತ್ತೊಂದು ಅವಕಾಶ ನೀಡಿ ಇದೇ ನಿನ್ನ ಕೊನೆಯ ಚಾನ್ಸ್ ಎಂದು ಹೇಳಬೇಕು,’’ ಎಂದು ಪೀಟರ್ಸನ್ ಹೇಳಿದ್ದಾರೆ.
ಅಸಲಿಗೆ, ಶುಕ್ರವಾರದ ಪಂದ್ಯಕ್ಕೆ ಮ್ಯಾಕ್ಸ್ವೆಲ್ರನ್ನು ಡ್ರಾಪ್ ಮಾಡುವ ಇರಾದೆ ಟೀಮ್ ಮ್ಯಾನೆಜ್ಮೆಂಟ್ಗಿತ್ತಂತೆ. ಅವರ ಸ್ಥಾನದಲ್ಲಿ ಕ್ರಿಸ್ ಗೇಲ್ ಅವರನ್ನು ಆಡಿಸುವ ನಿರ್ಧಾರವೂ ಮಾಡಿಯಾಗಿತ್ತು. ಆದರೆ, ಗೇಲ್ಗೆ ಫುಡ್ ಪಾಯಿಸನಿಂಗ್ ಅಗಿದ್ದರಿಂದ ಮ್ಯಾಕ್ಸ್ವೆಲ್ರನ್ನು ಮುಂದುವರಿಸಲಾಯಿತೆಂದು ಪಂಜಾಬ್ ಟೀಮಿನ ಮೆಂಟರ್ ಅನಿಲ್ ಕುಂಬ್ಳೆ ಹೇಳಿದರು.
‘‘ಮ್ಯಾಕ್ಸ್ವೆಲ್ ಸ್ಥಾನದಲ್ಲಿ ಗೇಲ್ ಅವರನ್ನು ಆಡಿಸುವುದು ಉತ್ತಮ ನಿರ್ಧಾರವೇ. ಆದರೆ ಅವರನ್ನು ಯಾವ ಕ್ರಮಾಂಕದಲ್ಲಿ ಆಡಿಸುತ್ತಾರೆ? ರಾಹುಲ್ ಮತ್ತು ಮಾಯಾಂಕ್ ಅವರ ಓಪನಿಂಗ್ ಜೋಡಿಯನ್ನು ಬೇರ್ಪಡಿಸುವುದು ಸರಿಯಲ್ಲ. ಗೇಲ್ ಈಗ ವಿಕೆಟ್ ಮಧ್ಯೆ ಚುರುಕಾಗಿ ಓಡಲು ಸಾಧ್ಯವಾಗದ ಕಾರಣ ಕೆಳಗಡೆ ಅಂದರೆ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಿಸಿ ಪ್ರಯೋಜನವಿಲ್ಲ. ಓಪನರ್ ಆಗಿ ಆಡಿಸಿದರೆ, ಮಾಯಾಂಕ್ ಮೂರನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ,’’ ಎಂದು ಪೀಟರ್ಸನ್ ಹೇಳಿದ್ದಾರೆ.