ಬೆಂಗಳೂರು: ನಿನ್ನೆ ಪಾದರಾಯನಪುರದಲ್ಲಿ ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲೆಂದು ಕರೆದೊಯ್ಯಲು ಅಧಿಕಾರಿಗಳು ಬಂದಾಗ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ವಿಡಿಯೋ ಆಧರಿಸಿ 54 ಜನರನ್ನ ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಕೆಲವರು ಸಿಕ್ಕಿಲ್ಲ, ಅವರನ್ನೂ ಹುಡುಕುತ್ತಿದ್ದೇವೆ. ಗಲಾಟೆ ಸಂಬಂಧ ಒಟ್ಟು 5 ಪ್ರಕರಣ ದಾಖಲಾಗಿದೆ. ಆರೋಗ್ಯ ಇಲಾಖೆಯಿಂದ ಒಂದು ದೂರು ಕೊಟ್ಟಿದ್ದಾರೆ. ಇನ್ನುಳಿದ ನಾಲ್ಕು ಪ್ರಕರಣಗಳು ಪೊಲೀಸರು ದಾಖಲಿಸಿದ್ದಾರೆ. ಶಂಕಿತರನ್ನು ಶಿಫ್ಟ್ ಮಾಡುವ ವೇಳೆ ಗಲಾಟೆ ಆಗಿತ್ತು. ಇದು ಪೂರ್ವನಿಯೋಜಿತ ಕೃತ್ಯನಾ ಎಂಬ ಬಗ್ಗೆ ತನಿಖೆ ನಡೆಸಬೇಕಾಗಿದೆ. ಬಂಧಿತರಾಗಿರುವ ಕೆಲವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಗಲಾಟೆ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ತಿಳಿಸಿದ್ದಾರೆ.
ಬಂಧಿತ ಲೇಡಿ ಡಾನ್ ಯಾರು?
ನಿನ್ನೆ ನಡೆದ ಗಲಾಟೆಯಲ್ಲಿ ಓರ್ವ ಮಹಿಳೆಯ ಕೈವಾಡವಿದೆ. ಬಂಧಿತ ಮಹಿಳೆ ಪರೋಜಾ ಅಲಿಯಾಸ್ ಲೇಡಿ ಡಾನ್. ಈಕೆ ಗಾಂಜಾ ಮಾರಟ ಮಾಡುತ್ತಿದ್ದಳು. ಘಟನೆ ವೇಳೆ ಮುಂದೆಯೇ ನಿಂತು ಗಲಾಟೆ ಮಾಡಿಸಿದ್ದಳು. ಯುವಕರು ಜಮಾವಣೆಯಾಗುವಂತೆ ಪ್ರಚೋದಿಸಿದ್ದಳು. ಹುಡುಗರನ್ನು ಕರೆಸಿದ್ದಳು ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಫರೋಜಾ ಅಲಿಯಾಸ್ ಲೇಡಿ ಡಾನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗೂ ಆಕೆ ನೀಡಿದ್ದ ಮಾಹಿತಿ ಆಧರಿಸಿ ಜೆ.ಜೆ.ನಗರ ಪೊಲೀಸರು 20 ಜನರನ್ನು ವಶಕ್ಕೆ ಪಡೆದಿದ್ದಾರೆ.