World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ ದೂರ ಇದ್ದುಬಿಡಿ

ಮಾರಣಾಂತಿಕ ಕ್ಯಾನ್ಸರ್​ ರೋಗ ಬಾರದಂತೆ ತಡೆಯಲು ಆದಷ್ಟು ನಾರಿನ ಅಂಶ ಇರುವ ಹಸಿರು ತರಕಾರಿಗಳು, ಹಣ್ಣುಗಳು, ಕಂದು ಅಕ್ಕಿ, ಪ್ರೋಟಿನ್​ಯುಕ್ತ ದ್ವಿದಳ ಧಾನ್ಯಗಳು, ತಾಜಾ ಇರುವ ಚಿಕನ್​, ಮೀನು, ಬೀನ್ಸ್​ಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬಳಸಿ ಎಂದು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ.

World Cancer Day 2021 | ಆಹಾರದ ಬಗ್ಗೆ ಇರಲಿ ಎಚ್ಚರ, ಸಂಸ್ಕರಿಸಿದ ಮಾಂಸ, ತಿಂಡಿಗಳಿಂದ ದೂರ ಇದ್ದುಬಿಡಿ

Updated on: Feb 04, 2021 | 7:09 PM

ತಿನ್ನುವ ಆಹಾರಗಳೂ ಕ್ಯಾನ್ಸರ್​ ತರಬಲ್ಲವು.. ಕೆಲವು ತರಕಾರಿ, ಹಣ್ಣು ತರಕಾರಿಗಳನ್ನು ನಿಯಮಿತವಾಗಿ ತಿನ್ನುವುದರಿಂದ ಕ್ಯಾನ್ಸರ್ ಸೇರಿ ಹಲವು ರೋಗಗಳು​ ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈಗಂತೂ ನಾವು ತಿನ್ನುವ ತರಕಾರಿ, ಹಣ್ಣುಗಳೆಲ್ಲ ರಾಸಾಯನಿಕ ತುಂಬಿಕೊಂಡೇ ಬಂದವು. ಸಾವಯವ ಕೃಷಿ ಜನ್ಯ ತರಕಾರಿ, ಹಣ್ಣುಗಳು ಸಿಗುವುದೇ ಅಪರೂಪ ಎಂಬ ಸ್ಥಿತಿ ಎದುರಾಗಿದೆ.

ಅದೇನೇ ಇರಲಿ ಮಾರಣಾಂತಿಕ ಕ್ಯಾನ್ಸರ್​ ರೋಗ ಬಾರದಂತೆ ತಡೆಯಲು ಆದಷ್ಟು ನಾರಿನ ಅಂಶ ಇರುವ ಹಸಿರು ತರಕಾರಿಗಳು, ಹಣ್ಣುಗಳು, ಕಂದು ಅಕ್ಕಿ, ಪ್ರೋಟಿನ್​ಯುಕ್ತ ದ್ವಿದಳ ಧಾನ್ಯಗಳು, ತಾಜಾ ಇರುವ ಚಿಕನ್​, ಮೀನು, ಬೀನ್ಸ್​ಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಬಳಸಿ ಎಂದು ಆರೋಗ್ಯ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಡಬ್ಲ್ಯೂಎಚ್ಒ (WHO-ವಿಶ್ವ ಆರೋಗ್ಯ ಸಂಸ್ಥೆ) ಶಿಫಾರಸ್ಸು ಮಾಡುತ್ತದೆ. ಹಾಗೇ ಸಂಸ್ಕರಿಸಿದ ಮಾಂಸಗಳ ಗುಂಪಿಗೆ ಸೇರುವ ಹ್ಯಾಮ್​ (ಹಂದಿಯ ತೊಡೆಯ ಭಾಗ), ಬೇಕನ್ (ಉಪ್ಪು ಹಾಕಿ ಒಣಗಿಸಿದ ಹಂದಿಯ ಮಾಂಸ), ಸಲಾಮಿ (ಹಂದಿಯ ಒಣ ಮಾಂಸ), ಫ್ರ್ಯಾಂಕ್​ಫ್ರುಟ್ಸ್​ (ಮಿಶ್ರ ಹಂದಿ ಮಾಂಸ, ಗೋಮಾಂಸಗಳನ್ನೊಳಗೊಂಡ ಮಸಾಲೆ ಭರಿತ ಮಾಂಸಾಹಾರ)ಗಳು ಕ್ಯಾನ್ಸರ್​ಗೆ ಕಾರಣವಾಗುವ ಆಹಾರಗಳಲ್ಲಿ ನಂ.1ಪಟ್ಟದಲ್ಲಿವೆ ಎಂದೂ ಡಬ್ಲ್ಯೂಎಚ್​ಒ ತಿಳಿಸಿದೆ.

ಕರುಳು ಕ್ಯಾನ್ಸರ್ ತರುವ ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಮಾಂಸಗಳ ಸೇವನೆ ಮಾಡುವವರು ಕ್ಯಾನ್ಸರ್​ಗೆ ಕರುಳು ಕ್ಯಾನ್ಸರ್​ಗೆ ತುತ್ತಾಗುವ ಪ್ರಮಾಣ ಹೆಚ್ಚು ಎಂಬುದಕ್ಕೆ ಈಗಾಗಲೇ ಹಲವು ಪುರಾವೆಗಳು ಸಿಕ್ಕಿವೆ. ಇತ್ತೀಚೆಗಷ್ಟೇ ವಿಶ್ವ ಕ್ಯಾನ್ಸರ್​ ಸಂಶೋಧನಾ ಫಂಡ್​ (WCRF) ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಸಾಧ್ಯವಾದಷ್ಟು ಸಂಸ್ಕರಿಸಿದ ಮಾಂಸಾಹಾರಗಳ ಸೇವನೆ ಕಡಿಮೆ ಮಾಡಿ. ತಿನ್ನದೆ ಇದ್ದರೂ ಆರೋಗ್ಯ ದೃಷ್ಟಿಯಿಂದ ಒಳ್ಳೆಯದೇ ಎಂದೂ ಹೇಳಿದೆ. ಇಂಥ ಮಾಂಸದ ಆಹಾರಗಳನ್ನು ಸಂಸ್ಕರಿಸಿ, ಸಂರಕ್ಷಿಸಿ ಇಡಲು, ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ರಾಸಾಯನಿಕಗಳು ಅಪಾಯಕಾರಿ ಕ್ಯಾನ್ಸರ್​ಕಾರಕಗಳಾಗಿವೆ ಎಂದು ಸ್ಪಷ್ಟವಾಗಿ ಹೇಳಿದೆ.

ಇನ್ನು ರೆಡ್​ ಮೀಟ್​ ಸಾಲಿಗೆ ಸೇರುವ ಹಂದಿ ಮಾಂಸ, ಗೋಮಾಂಸ, ಕುರಿ, ಮೇಕೆಗಳ ಮಾಂಸಗಳನ್ನು ತಾಜಾ ತಿಂದರೂ ಸಹ ಅದರ ಪ್ರಮಾಣ ಕಡಿಮೆ ಇರಲಿ. ಯಾಕೆಂದರೆ ಇವುಗಳ ಅತಿಯಾದ ಸೇವನೆ ಕ್ಯಾನ್ಸರ್​ ತರಬಲ್ಲದು. ಹಾಗಾಗಿ ಒಂದು ವಾರದಲ್ಲಿ 500 ಗ್ರಾಂ.ಗಿಂತಲೂ ಕಡಿಮೆ ಬೇಯಿಸಿದ ಕೆಂಪುಮಾಂಸ ಸೇವಿಸುವಂತೆ ನಾನ್​ವೆಜ್​ ಪ್ರಿಯರಿಗೆ WCRF ಶಿಫಾರಸ್ಸು ಮಾಡಿದೆ. ಇನ್ನು ಸುಟ್ಟ ಮಾಂಸದಿಂದಲೂ ಕ್ಯಾನ್ಸರ್ ಅಪಾಯ ಹೆಚ್ಚು ಎನ್ನುತ್ತಾರೆ ಆಸ್ಟ್ರೇಲಿಯಾದ ತಜ್ಞರು.

ಸಂಸ್ಕರಿಸಿದ, ಹೆಚ್ಚು ಕ್ಯಾಲರಿ ಇರುವ ಮಾಂಸಾಹಾರದ ಬದಲು ತಾಜಾ ಸಿಗುವ ಚಿಕನ್​, ಮೀನು, ಕಡಿಮೆ ಕೊಬ್ಬಿನ ಅಂಶ ಇರುವ ಚೀಸ್​​ಗಳ ಬಳಕೆ ಮಾಡುವುದು ಒಳ್ಳೆಯದು. ಅದರಲ್ಲೂ ಸಂಸ್ಕರಿಸಿದ ಮಾಂಸಾಹಾರದಿಂದ ಮಕ್ಕಳನ್ನು ದೂರವೇ ಇಡಬೇಕು ಎಂದು WCRF ಹೇಳಿದೆ. ಹಾಗೇ, ಅತಿಯಾದ ಕೊಬ್ಬಿನಾಂಶ ಇರುವ ಆಹಾರಗಳ ಸೇವನೆ ನೇರವಾಗಿ ಕ್ಯಾನ್ಸರ್​ಗೆ ಕಾರಣವಾಗದೆ ಇದ್ದರೂ ಪರೋಕ್ಷವಾಗಿ ಅಪಾಯ ತಂದೊಡ್ಡುತ್ತದೆ. ಕೊಬ್ಬಿನಂಶ ಮೈಯೊಳಗೆ ಸೇರಿದಷ್ಟೂ ಬೊಜ್ಜು ಹೆಚ್ಚುತ್ತದೆ. ಬೊಜ್ಜಿನಿಂದ ಹಾರ್ಮೋನುಗಳಲ್ಲಿ ವ್ಯತ್ಯಾಸವಾಗಿ ಕೋಶಗಳ ವಿಭಜನೆ ಮಿತಿಮೀರುತ್ತದೆ ಎಂಬುದನ್ನು ಲಂಡನ್​ ಕ್ಯಾನ್ಸರ್​ ಸಂಶೋಧನಾ ಸಂಸ್ಥೆ ವಿವರಿಸಿದೆ.

ಸಂಸ್ಕರಿಸಿದ ಮೀನುಗಳು ಬೇಡ, ಫಾಸ್ಟ್​ಫುಡ್​ನಿಂದ ದೂರ ಇರಿ
ಮೀನಿನ ತಾಜಾ ಮಾಂಸ ಒಳ್ಳೆಯದು. ಆದರೆ  ಒಣಗಿಸಿದ ಮೀನು ಮಾಂಸ ಕ್ಯಾನ್ಸರ್​ ತರಬಲ್ಲದು. ಹಾಗೇ ಹೊರಗೆ ಸಿಗುವ ಫಾಸ್ಟ್​ಫುಡ್​ಗಳ ಸೇವನೆಯೂ ನಿಯಂತ್ರಣದಲ್ಲಿದ್ದರೆ ಒಳಿತು. ಯಾವುದೇ ತಿಂಡಿಯಿರಲಿ ಸಂಸ್ಕರಿಸಿದ್ದಾದರೆ ಸೇವನೆ ಬೇಡ ಎನ್ನುವುದು World Cancer Research Fund ನ ಶಿಫಾರಸ್ಸು. ಸಕ್ಕರೆಯುಕ್ತ ಆಹಾರವನ್ನೂ ಕಡಿಮೆ ಸೇವಿಸಬೇಕು. ಆದಷ್ಟು ಮನೆಯಲ್ಲೇ ತಯಾರು ಮಾಡಿಕೊಂಡ ಸ್ಯಾಂಡ್​ವಿಚ್​, ಸಲಾಡ್​ಗಳನ್ನು ಸೇವಿಸಿ ಎಂದೂ ಹೇಳಿದೆ.

ನಾವು ನಿತ್ಯ ಸೇವಿಸುವ ಆಹಾರದ ಮೇಲೆಯೇ ನಮ್ಮ ಆರೋಗ್ಯ ನಿಂತಿದೆ. ಆದಷ್ಟು ಸಮತೋಲಿತ, ಒಳ್ಳೆಯ ಆಹಾರಗಳನ್ನು ತೆಗೆದುಕೊಳ್ಳಬೇಕು. ಟೊಮ್ಯಾಟೊ, ಬೆಳ್ಳುಳ್ಳಿ, ಕಿತ್ತಳೆ ಹಣ್ಣು, ಕ್ಯಾರೆಟ್​​ಗಳೆಲ್ಲ ಕ್ಯಾನ್ಸರ್​ ನಿಯಂತ್ರಣದಲ್ಲಿ ಸಹಾಯ ಮಾಡಬಲ್ಲವು. ಪ್ರೋಟಿನ್​ ಯುಕ್ತ ಆಹಾರಗಳು ಬಹುಮುಖ್ಯ ಎನ್ನುತ್ತಾರೆ ತಜ್ಞರು.

World Cancer Day 2021 ಕ್ಯಾನ್ಸರ್​ಗೆ ಕಾರಣಗಳು ಒಂದೆರಡಲ್ಲ.. ಬೊಜ್ಜು, ಅತಿಯಾದ ತೂಕದಿಂದಲೂ ಅಪಾಯ !

ಎಚ್ಚರ! ದಿನನಿತ್ಯದಲ್ಲಿ ಬಳಸುವ ಈ ಐದು ಆಹಾರಗಳು ಕ್ಯಾನ್ಸರ್​ ತರಬಹುದು

Lakshmi Hegde
Loading...
Unable to load recommendations.
Follow Us