
ಬೆಂಗಳೂರು: ನಗರದ ಈಶಾನ್ಯ ಭಾಗದ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದ ಹಿಂಸಾಚಾರದ ವೇಳೆ ಪೊಲೀಸ್ ಫೈರಿಂಗ್ನಲ್ಲಿ ಮೂವರು ಸಾವನ್ನಪ್ಪಿದ್ದರು. ಮೃತಪಟ್ಟ ಮೂವರ ಶವ ಪರೀಕ್ಷೆ ನಡೆಸಲಾಗಿದೆ.
ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು ಪರೀಕ್ಷೆಗೆ FSL ವೈದ್ಯರ ತಂಡವು ಆಗಮಿಸಿತ್ತು.ಮರಣೋತ್ತರ ಪರೀಕ್ಷೆಗೂ ಮುನ್ನ ನಡೆಸಿದ ಕೊವಿಡ್ ಟೆಸ್ಟ್ನಲ್ಲಿ ಮೃತಪಟ್ಟ ಮೂವರ ಪೈಕಿ ಒಬ್ಬನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. RT-PCR ಟೆಸ್ಟ್ ಮಾಡಿದ್ದ ಬೌರಿಂಗ್ ಆಸ್ಪತ್ರೆ ವೈದ್ಯರು 20 ವರ್ಷದ ವಾಜಿದ್ ಖಾನ್ಗೆ ಕೊರೊನಾ ಪಾಸಿಟಿವ್ ಇದೆ ಎಂದು ತಿಳಿಸಿದ್ದಾರೆ. ಹಾಗೂ ಯಾಸಿನ್ ಪಾಷಾ, ಮತ್ತೊಬ್ಬ ಯುವಕನ ವರದಿ ನೆಗೆಟಿವ್ ಬಂದಿದೆ.
ಶವವನ್ನು ಮನೆಗೆ ತೆಗೆದುಕೊಂಡು ಹೋಗಬಾರದು
ಇನ್ನು ಪೊಲೀಸರ ಫೈರಿಂಗ್ನಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ವಿಚಾರಕ್ಕೆ ಸಂಬಂಧಿಸಿದಂತೆ ಶವಗಳನ್ನು ಮನೆಗೆ ತೆಗೆದುಕೊಂಡು ಹೋಗದಂತೆ ಕುಟುಂಬಸ್ಥರಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಮೆರವಣಿಗೆ ಹಾಗೂ ಮನೆಯಲ್ಲಿ ಶವವನ್ನು ದರ್ಶನಕ್ಕೆ ಇಡದಂತೆ ತಿಳಿಸಲಾಗಿದೆ. ಆಸ್ಪತ್ರೆಯಿಂದ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಕುಟುಂಬಸ್ಥರಿಗೆ ಸೂಚಿಸಿದ್ದಾರೆ.